ನೀರು ಕಾಯಿಸುವ ವಿಚಾರಕ್ಕೆ ಮುಖ್ಯಶಿಕ್ಷಕ, ಸೆಕ್ಯೂರಿಟಿ ಗಾರ್ಡ್ ಮಧ್ಯೆ ಜಗಳ: ಕೊಲೆಯಲ್ಲಿ ಅಂತ್ಯ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ನೀರು ಕಾಯಿಸುವ ವಿಚಾರದಲ್ಲಿ ಮುಖ್ಯ ಶಿಕ್ಷಕ ಮತ್ತು ಸೆಕ್ಯೂರಿಟಿ ಗಾರ್ಡ್ ನಡುವೆ ಜಗಳ ನಡೆದು, ಕಟ್ಟಿಗೆಯಿಂದ ಹೊಡೆದು ಸೆಕ್ಯೂರಿಟಿ ಗಾರ್ಡ್ನನ್ನ ಕೊಲೆ ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವಾಗ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಾಗಲಕೋಟೆ, ಜನವರಿ 12: ಕಟ್ಟಿಗೆಯಿಂದ ಹೊಡೆದು ಸೆಕ್ಯೂರಿಟಿ ಗಾರ್ಡ್ನನ್ನು ಮುಖ್ಯ ಶಿಕ್ಷಕ ಕೊಲೆ (death) ಮಾಡಿರುವಂತಹ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ನಾಗರಾಳ ಗ್ರಾಮದ ರಾಧಾಕೃಷ್ಣ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ನಾಗಪ್ಪ ತೋಳಮಟ್ಟಿ ಮೃತ ಸೆಕ್ಯೂರಿಟಿ ಗಾರ್ಡ್. ಘಟನಾ ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನೀರು ಕಾಯಿಸುವ ವಿಚಾರಕ್ಕೆ ಮುಖ್ಯಶಿಕ್ಷಕ ಧನರಾಜ ರಾಠೋಡ್ ಹಾಗೂ ಸೆಕ್ಯೂರಿಟಿ ಗಾರ್ಡ್ ನಾಗಪ್ಪ ತೋಳಮಟ್ಟಿ ನಡುವೆ ಜಗಳವಾಗಿದೆ. ಈ ವೇಳೆ ನಾಗಪ್ಪ ತೋಳಮಟ್ಟಿಗೆ ಧನರಾಜ ರಾಠೋಡ್ ಕಟ್ಟಿಗೆಯಿಂದ ಥಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ನಾಗಪ್ಪ ತೋಳಮಟ್ಟಿ ಮೃತಪಟ್ಟಿದ್ದಾರೆ.
ಎರಡು ದಿನಗಳಿಂದ ಆಟೋ ಚಾಲಕ ನಾಪತ್ತೆ: ಕೊಲೆ ಶಂಕೆ
ಎರಡು ದಿನಗಳಿಂದ ನಾಪತ್ತೆಯಾಗಿದ್ದ ಆಟೋ ಚಾಲಕ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಜನವರಿ 10 ರ ಶುಕ್ರವಾರ ಆಟೋ ಚಾಲಕ ಶಿವಕುಮಾರ್ ನನ್ನ ಗೆಳೆಯರು ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ವೇಳೆಗೆ ಕಂಠಪೂರ್ತಿ ಕುಡಿಸಿ ಹತ್ಯೆ ಗೈದು ಶಿರಾಡಿಘಾಟ್ನಲ್ಲಿ ಶವ ಬಿಸಾಡಿರುವ ಆರೋಪ ಕೇಳಿಬಂದಿದೆ. ಶಿವಕುಮಾರ್ ಜೊತೆಗೆ ತೆರಳಿದ್ದ ದಿಲೀಪ್ ನೀಡಿದ ಮಾಹಿತಿ ಆಧರಿಸಿ ತನಿಖೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ: ಜಾತ್ರೆಯಲ್ಲಿ ಹುಟ್ಟಿದ ಲವ್ ಜಾತ್ರೆಯಲ್ಲೇ ಅಂತ್ಯ
ಹಾಸನ ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಶಿವಕುಮಾರ್, ಇದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಎಂಬುವವರಿಂದ ಕೃತ್ಯವೆಸಗಲಾಗಿದೆ ಎನ್ನಲಾಗುತ್ತಿದೆ. ಶರತ್ ಹಾಗೂ ಪ್ರತಾಪ್ ಅವರ ಕಳ್ಳತನವೊಂದರ ಬಗ್ಗೆ ಶಿವಕುಮಾರ್ ಮಾಹಿತಿ ಹೊಂದಿದ್ದ.
ತಮ್ಮ ವಿಚಾರವನ್ನು ಶಿವಕುಮಾರ್ ಬಹಿರಂಗ ಮಾಡುತ್ತಾನೆಂದು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶವ ಎಸೆಯಲು ಕರೆದೊಯ್ದಿದ್ದ ವೇಳೆ ಹಂತಕರಿಂದ ತಪ್ಪಿಸಿಕೊಂಡು ದಿಲೀಪ್ ಬಂದಿದ್ದ. ದಿಲೀಪ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಅಂಗನವಾಡಿಗೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಸದ್ಯ ಶಿವಕುಮಾರ್ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ತಪ್ಪಿಸಿಕೊಂಡು ಬಂದಿರುವ ದಿಲೀಪ್ ನೀಡಿದ ಮಾಹಿತಿ ಆಧರಿಸಿ ಶವ ಪತ್ತೆಗೆ ಪೊಲೀಸರು ಮುಂದಾಗಿದ್ದು, ಘಟನೆ ಬಳಿಕ ಶರತ್ ಹಾಗೂ ಪ್ರತಾಪ್ ತಲೆ ಮರೆಸಿಕೊಂಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.