ವಿಜಯಪುರ: ಸಾಧನೆಗೆ ಕ್ಷೇತ್ರ ಯಾವುದಾದರೇನು? ಸಾಧಿಸೋ ಮನೋಬಲ ಗಟ್ಟಿಯಾಗಿದ್ದರೆ ಸಾಕು ಸಾಧನೆ ಕಷ್ಟಕರವಾಗಲ್ಲ. ಈ ಮಾತಿಗೆ ಸೂಕ್ತ ಉದಾಹರಣೆಯಾಗಿದ್ದಾನೆ ವಿಜಯಪುರ ಜಿಲ್ಲೆಯ ಹೈದ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ಯುವಕನ ಸಾಧನೆ ನೋಡಿದರೆ ನೀವು ಕೂಡಾ ಭೇಷ್ ಎನ್ನುತ್ತೀರಿ. ಯುವಕನ ಸಾಧನೆಗೆ ಇಡೀ ಹೆಬ್ಬಾಳ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮೂರಿನ ಹೈದ ಇಂಥ ಸಾಧನೆ ಮಾಡಿದ್ದಾನಲ್ಲಾ ಎಂದು ಆತನ ಬೆನ್ನು ಚಪ್ಪರಿಸಿ ಸನ್ಮಾನಿಸಿ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ಯುವಕನ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ.
ಅಷ್ಟಕ್ಕೂ ಈ ವಿಶಿಷ್ಟ ಸಾಧನೆ ಮಾಡಿರೋ ಯುವಕನೇ 23 ವರ್ಷ ಹೊಳೆಬಸಪ್ಪ ಸಾತಪ್ಪಾ ಮನಹಳ್ಳಿ, ಹೆಬ್ಬಾಳ ಗ್ರಾಮದ ಯುವ ರೈತ. ತಾಯಿ, ಇಬ್ಬರು ಸಹೋದರಿಯರು ಇರುವ ಕುಟುಂಬದ ಜವಾಬ್ದಾರಿ ಹೊಳೆಬಸಪ್ಪನದ್ದು. ಪಿತ್ರಾರ್ಜಿತವಾಗಿ ಬಂದ 10 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರೋ ಯುವಕ ಹೊಳೆಬಸಪ್ಪ. ಕೃಷಿಗಾಗಿ ಟ್ರ್ತಾಕ್ಟರ್ ಇಟ್ಟುಕೊಂಡಿದ್ದು ತನ್ನ ಜಮೀನಿನ ಕೆಲಸ ಇಲ್ಲದ ಸಮಯದಲ್ಲಿ ಟ್ರ್ಯಾಕ್ಟರ್ ಬಾಡಿಗೆಗೂ ಬಿಡುತ್ತಾನೆ. ಹೀಗೆ ಕೃಷಿ ಕುಟುಂಬದ ಹೊಳೆಬಸಪ್ಪನಿಗೆ ಏನಾದರೂ ಸಾಧನೆ ಮಾಡಬೇಕೆಂಬ ಕನಸಿತ್ತು. ಕಳೆದ 5 ವರ್ಷಗಳ ಹಿಂದಿನ ಮಾತದು. ತಮ್ಮೂರಿನ ಪವನೆಪ್ಪಾ ಮನಗೂಳಿ ಎಂಬುವವರು ಟ್ರ್ಯಾಕ್ಟರ್ ಮೂಲಕ ಸತತ 48 ಗಂಟೆಗಳ ಕಾಲ ರೆಂಟೆಯನ್ನು ಹೊಡೆದು ಸಾಧನೆ ಮಾಡಿದ್ದರು. ಇದನ್ನು ಕಂಡಿದ್ದ ಹೊಳೆಬಸಪ್ಪ ನಾನೂ ಇದೇ ರೀತಿ ಸಾಧನೆ ಮಾಡುತ್ತೇನೆ ಎಂದು ಎಲ್ಲರ ಮುಂದೆ ಹೇಳಿಕೊಂಡಿದ್ದ
ಸತತ 61 ಗಂಟೆಗಳ ಕಾಲ ಟ್ರ್ಯಾಕ್ಟರ್ ಚಲಾಯಿಸಿದ ಯುವಕ
ಈ ರೀತಿಯಾಗಿ ಟ್ರ್ಯಾಕ್ಟರ್ ನಿಂದ ಅತೀ ಹೆಚ್ಚು ಗಂಟೆಗಳ ಕಾಲ ರೆಂಟೆ ಹೊಡೆದು ಸಾಧನೆ ಮಾಡಬೇಕೆಂದು ಬಯಸಿದ್ದ ಹೊಳೆಬಸಪ್ಪ ಕಳೆದ ಜನವರಿ 24 ರಂದು ಹೆಚ್ಚು ಆವಧಿ ಟ್ರ್ಯಾಕ್ಟರ್ ಚಲಾಯಿಸಿ ರೆಂಟೆ ಹೊಡೆಯಲು ಮಹೂರ್ತ ನಿಗದಿ ಮಾಡಿದ್ದ. ಹೆಬ್ಬಾಳ ಗ್ರಾಮದ ಜನರ ಸಮ್ಮುಖದಲ್ಲಿ ಬೆಳಿಗ್ಗೆ 6 ಗಂಟೆಗೆ ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದ ಹೊಳೆಬಸಪ್ಪ ರೆಂಟೆ ಹೊಡೆಯಲು ಆರಂಭಿಸಿದ್ದಾನೆ. ಸತತವಾಗಿ 61 ಗಂಟೆಗಳ ಕಾಲ ನಿರಂತರವಾಗಿ ಊಟ ನಿದ್ದೆ ಮಾಡದೇ ಟ್ರ್ಯಾಕ್ಟರ್ ಚಲಾಯಿಸಬೇಕೆಂದು ಗುರಿ ಇಟ್ಟುಕೊಂಡಿದ್ದ. ಟ್ಟ್ಯಾಕ್ಟರ್ ಗೆ ಡಿಸೈಲ್ ಹಾಕಲು ಹಾಗೂ ಹೊಳೆಬಸಪ್ಪ ಊಟ ಮಾಡಲು ಸಹ ವಿರಾಮ ತೆಗೆದುಕೊಳ್ಳದೇ ನಿರಂತರವಾಗಿ ಟ್ರ್ಯಾಕ್ಟರ್ ಚಲಾವಣೆ ಮಾಡಿದ್ದಾನೆ. ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರೋ ವೇಳೆ ಹೊಳೆಬಸಪ್ಪ ಎಳನೀರು ಹಾಗೂ ಬಾಳೆಹಣ್ಣನ್ನು ಮಿತವಾಗಿ ಮಾತ್ರ ಸೇವಿಸಿದ್ದಾನೆ. ಉಳಿದಂತೆ ಇತರೆ ಯಾವುದೇ ಆಹಾರ ಪದಾರ್ಥಗಳನ್ನು ಸ್ವೀಕರಿಸಿಲ್ಲ.
ಈ ರೀತಿಯಾಗಿ ಟ್ರ್ಯಾಕ್ಟರ್ ನಿಂದ ಹೆಚ್ಚು ಅವಧಿಯವರೆಗೂ ರೆಂಟೆ ಹೊಡೆದು ಸಾಧನೆ ಮಾಡಬೇಕೆಂದೇ ತೀರ್ಮಾನಿಸಿದ್ದ ಹೊಳೆಬಸಪ್ಪ ಜನವರಿ 24 ರ ಬೆಳಿಗ್ಗೆ 6 ಗಂಟೆಗೆ ಟ್ರ್ಯಾಕ್ಟರ್ ಚಾಲನೆ ಆರಂಭಿಸಿ ಜನವರಿ 26 ರ ಸಾಯಂಕಾಲ 7.30 ರವರೆಗೂ ನಿರಂತರವಾಗಿ ಚಾಲನೆ ಮಾಡಿದ್ದಾನೆ. ಸತತ 61 ಗಂಟೆ 30 ನಿಮಿಷ ಚಾಲನೆ ಮಾಡೋ ಮೂಲಕ ಸಾಧನೆ ಮಾಡಿದ್ದ. ಅತ್ತ ಹೊಳೆಬಸಪ್ಪ ಟ್ರ್ಯಾಕ್ಟರ್ ಮೂಲಕ ನಿರಂತರವಾಗಿ ರೆಂಟೆ ಹೊಡೆಯುತ್ತಿದ್ದರೆ ಗ್ರಾಮದ ಜನರೂ ಸಹ ಹಲಗೆ ಹಾಗೂ ತಮಟೆ ಬಾರಿಸುತ್ತಾ ಹೊಳೆಬಸಪ್ಪನಿಗೆ ಸಾಥ್ ನೀಡಿದ್ದಾರೆ. ಆತನ ಸಾಧನೆಗೆ ಈ ಮೂಲಕ ಕೈಜೋಡಿಸಿದ್ದಾರೆ. ಐದು ವರ್ಷಗಳ ಹಿಂದೆ ತಮ್ಮೂರಿನ ಪವನೆಪ್ಪಾ ಮನಗೂಳಿ 48 ಗಂಟೆಗಳ ಕಾಲ ಟ್ರ್ಯಾಕ್ಟರ್ ಚಾಲನೆ ಮಾಡೋ ಮೂಲಕ ಮಾಡಿದ್ದ ಸಾಧನೆಗಿಂತ ಹೆಚ್ಚಿನ ಸಾಧನೆಯನ್ನು ಹೊಳೆಬಸಪ್ಪ ಮಾಡಿದ್ದಾನೆ.
ಯುವಕನ ಸಾಧನೆಗೆ ಭೇಷ್ ಎಂದ ಗ್ರಾಮಸ್ಥರು
61 ಗಂಟೆಗಳಿಗೂ ಹೆಚ್ಚು ಗಂಟೆಗಳ ಕಾಲ ಟ್ರ್ಯಾಕ್ಟರ್ ಚಾಲಾಯಿಸಿ ಸುಮಾರು 35 ಎಕರೆ ಜಮೀನನನ್ನು ರೆಂಟೆ ಹೊಡೆದಿದ್ದಾನೆ. ನಿನ್ನೆ ಸಾಯಂಕಾಲ 7.30 ರ ನಂತರವೂ ನಾಳೆ ಬೆಳಿಗ್ಗೆವರೆಗೂ ಟ್ರ್ಯಾಕ್ಟರ್ ಚಾಲನೆ ಮಾಡುತ್ತೇನೆಂದು ಹೊಳೆ ಬಸಪ್ಪ ಪಟ್ಟು ಹಿಡಿದಿದ್ದ. ಆದರೆ ಕುಟುಂಬದವರು, ಗ್ರಾಮದ ಹಿರಿಯರು ಆತನ ಮನವೋಲಿಸಿ ನಿಲ್ಲಿಸಿದ್ದಾರೆ. ಹೊಳೆಬಸಪ್ಪನನ್ನು ಅದೇ ಟ್ರ್ಯಾಕ್ಟರ್ ಮೇಲೆ ಕೂಡಿಸಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ. ಹೂವಿನ ಹಾರ ಹಾಕಿ ಶಾಲು ಹೊದಿಸಿ ಗ್ರಾಮದ ಮುಖಂಡರು ಹಿರಿಯರು ಸನ್ಮಾನ ಮಾಡಿದ್ದಾರೆ. ಪರಸ್ಪರ ಬಣ್ಣವೆರಚಿ ಯುವಕರು ಸೆಲಬ್ರೇಟ್ ಮಾಡಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ನಮ್ಮೂರಿನ ಪವನೆಪ್ಪ ಅವರು 48 ಗಂಟೆಗಳ ಕಾಲ ಟ್ರ್ಯಾಕ್ಟರ್ ಮೂಲಕ ರೆಂಟೆ ಹೊಡೆದು ಸಾಧನೆ ಮಾಡಿದ್ದರು. ಇದೇ ರೀತಿಯ ಸಾಧನೆ ಮಾಡಬೇಕೆಂದು ನಾನು ಕನಸು ಕಂಡಿದ್ದರು. ನಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ಕೆಲಸ ಮಾಡುವಾದ ಗರಿಷ್ಟ ಅವಧಿಯವರೆಗೆ ರೆಂಟೆ ಹೊಡೆದು ಸಾಧನೆ ಮಾಡಬೇಕೆಂದು ಅಂದುಕೊಳ್ಳುತ್ತಿದ್ದೆ. ಈಗಾ ಸತತ 61 ಗಂಟೆಗಳಿಗೂ ಹೆಚ್ಚು ಕಾಲ ಟ್ರ್ಯಾಕ್ಟರ್ ಚಲಾಯಿಸಿದ್ದು ನನಗೆ ಸಂತೋಷವಾಗಿದೆ. ಮೂರು ದಿನಗಳ ಕಾಲ ನಾನು ಟ್ರ್ಯಾಕ್ಟರ್ ಚಾಲನೆ ಮಾಡೋವಾಗ ಗ್ರಾಮದ ಜನರು ನನಗೆ ಹುರುದುಂಬಿಸಿ ಸಾಥ್ ನೀಡಿದರು. ಎಲ್ಲರ ಬೆಂಬಲ ಪ್ರೋತ್ಸಾಹದಿಂದ ನಾನು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಾಧಕ ಹೊಳೆಬಸಪ್ಪ ಮನಹಳ್ಳಿ ಸಂತಸ ಹಂಚಿಕೊಂಡಿದ್ದಾರೆ.
ನಮ್ಮೂರಿನ ಯುವಕ ಈ ಸಾಧನೆ ಮಾಡಿದ್ದು ಖುಷಿ ತಂದಿದೆ. ಸತತವಾಗಿ 61 ತಾಸುಗಳ ಕಾಲ ಟ್ರ್ಯಾಕ್ಟರ್ ಚಾಲನೆ ಮಾಡೋದು ಸುಲಭದ ಮಾತಲ್ಲಾ. ಇಂತ ಸಾಧನೆ ಮಾಡಿದ ಹೊಳೆಸಬ್ಪಪನ ಸಾಧನೆಯಿಂದ ನಮ್ಮೂರಿನ ಹೆಸರು ಪ್ರಸಿದ್ದಿಗೆ ಪಾತ್ರವಾಗಿದೆ. ಹೊಳೆಬಸಪ್ಪನ ಸಾಧನೆಗೆ ಇಡೀ ಹೆಬ್ಬಾಳ ಗ್ರಾಮ ಖುಷಿ ಪಟ್ಟಿದೆ ಎಂದು ಗ್ರಾಮದ ಹಿರಿಯರು, ಚೆನ್ನನಗೌಡ ಪಾಟೀಲ್ ಹೇಳಿದ್ರು.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ಅಪ್ಡೇಟ್ ಕಂಡು ದಂಗಾದ ಗ್ರೂಪ್ ಅಡ್ಮಿನ್ಗಳು: ಏನದು ಆಯ್ಕೆ?
Published On - 3:52 pm, Thu, 27 January 22