
ಬಾಗಲಕೋಟೆ: ಮಕ್ಕಳು ಹುಟ್ಟುವ ಮುಂಚೆಯೇ ಮಗುವಿಗೆ ಇಂತಹ ಹೆಸರಿಡಬೇಕು, ಅದು ತುಂಬಾ ವಿಭಿನ್ನವಾಗಿರಬೇಕು ಎಂದೆಲ್ಲ ಪೋಷಕರು, ಸಂಬಂಧಿಕರು ವಿನೂತನ ಹೆಸರನ್ನು ಹುಡುಕುತ್ತಾರೆ. ಅಪರೂಪದ ಹೆಸರಿಗಾಗಿ ಎಲ್ಲ ಪುಸ್ತಕ, ಸಿನಿಮಾ ಅದು ಇದು ಅಂತ ತಡಕಾಡುತ್ತಾರೆ. ಆದರೆ ಜಿಲ್ಲೆಯ ಗ್ರಾಮವೊಂದರಲ್ಲಿ ಮಾತ್ರ ಹೆಣ್ಣು, ಗಂಡು ಯಾವುದೇ ಮಗು ಹುಟ್ಟಲಿ ಗ್ರಾಮದೇವಿ ಹೆಸರನ್ನು ಮೊದಲು ಇಡಲೇಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಿಲ್ಲ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಒಂದೇ ಗ್ರಾಮದ 1,500 ಜನರಿಗೆ ಒಂದೇ ಹೆಸರು
ಜಿಲ್ಲೆಯ ಬಾದಾಮಿ ತಾಲೂಕಿನ ಇನಾಮ್ ಹುಲ್ಲಿಕೇರಿ ಗ್ರಾಮ ಇಡೀ ರಾಜ್ಯದಲ್ಲೇ ಒಂದು ವಿಭಿನ್ನವಾದ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಜನರಿಗಿರುವ ಒಂದೇ ಹೆಸರಿನ ಮೂಲಕ. ಇನಾಮ್ ಹುಲ್ಲಿಕೇರಿ ಗ್ರಾಮದಲ್ಲಿ ಒಟ್ಟು ಎರಡುವರೆ ಸಾವಿರದಷ್ಟು ಜನಸಂಖ್ಯೆ ಇದ್ದು 1,500 ಹೆಚ್ಚು ಜನರಿಗೆ ಒಂದೆ ಹೆಸರಿದೆ. ಅದು ಊರಿನ ಗ್ರಾಮದೇವಿ ಹೆಸರು ಗದ್ದೆಮ್ಮ ಎಂಬ ಹೆಸರು. ಗ್ರಾಮದಲ್ಲಿ ಪುರುಷರಿಗೆ ಗದ್ದೆಪ್ಪ ಮತ್ತು ಮಹಿಳೆಯರಿಗೆ ಗದ್ದೆಮ್ಮ. ಹೀಗೆ ಪುರುಷರು ಮಹಿಳೆಯರು ಸೇರಿ ಒಟ್ಟು 1,500 ಕ್ಕೂ ಹೆಚ್ಚು ಜನರಿಗೆ ಈ ದೇವಿಯ ಹೆಸರಿದ್ದು, ಇದರಿಂದ ಇನಾಮ್ ಹುಲ್ಲಿಕೇರಿ ಗ್ರಾಮ ಒಂದು ವಿಶೇಷ ಗ್ರಾಮವಾಗಿದೆ. ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ ಇಂದು ಸಾಕಷ್ಟು ಪ್ರಸಿದ್ಧಿ ಪಡೆದಿದೆ.
500 ವರ್ಷಗಳ ಹಿಂದೆ ಬೋವಿ ಸಮಾಜದವರು ಕತ್ತೆಯ ಮೇಲೆ ಕಲ್ಲನ್ನು ಹೇರಿಕೊಂಡು ಕಟ್ಟಡ ಕೆಲಸಕ್ಕೆ ಈ ಊರಿನ ಮಾರ್ಗವಾಗಿ ಹೊರಟಿದ್ದರಂತೆ. ಆಗ ಕತ್ತೆ ಮೇಲಿಂದ ಕೆಳಗೆ ಬಿದ್ದ ಕಲ್ಲು ಎಷ್ಟೇ ಪ್ರಯತ್ನಿಸಿದರೂ ಮೇಲೆ ಏಳಲೇ ಇಲ್ಲ. ಅದೆ ಗದ್ದೆಮ್ಮ ಮೂರ್ತಿಯಾಗಿ ಇಲ್ಲಿ ನೆಲೆ ನಿಂತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಂದು ಆ ದೇವಿ ತನ್ನ ಪವಾಡದ ಹೆಸರಿನ ಮೂಲಕ ಆ ದೇವಿಯ ಹೆಸರು ಊರ ತುಂಬಾ ರಾರಾಜಿಸುತ್ತಿದೆ.
ಕಥೆಯೇನು?
ಇನಾಮ್ ಹುಲ್ಲಿಕೇರಿ ಗ್ರಾಮದಲ್ಲಿ ನೆಲೆ ನಿಂತಿರುವ ಗದ್ದೆಮ್ಮ ದೇವಿ ಭಕ್ತರ ಆರಾಧ್ಯದೈವಳಾಗಿದ್ದಾಳೆ. ಇಲ್ಲಿ ದೇವಿಗೆ ಅದ್ದೂರಿಯಾಗಿ ಪೂಜೆ ಪುನಸ್ಕಾರ ಮಾಡದಿದ್ದರೂ ಆ ದೇವಿಗೆ ತನ್ನ ಹೆಸರಿಟ್ಟರೆ ಎಲ್ಲಿಲ್ಲದ ಪ್ರೀತಿಯಂತೆ. ಗ್ರಾಮದಲ್ಲಿ ಪ್ರತಿ ವರ್ಷ ಆಗಿ ಹುಣ್ಣಿಮೆ ವೇಳೆ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತದೆ. ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ.
ದೇವರಿಗೆ ಕೈಮುಗಿಯುತ್ತಿರುವ ಭಕ್ತರು
ಹುಟ್ಟಿದ ಕೂಸಿಗೆ ಮೊದಲು ನಾಮಕರಣ ಮಾಡುವುದು ದೇವಿಯ ಹೆಸರನ್ನು. ನಂತರ ಕೆಲವರು ಬದಲಾಯಿಸಿದರೆ ಕೆಲವರು ಅದೇ ಹೆಸರನ್ನೇ ಮುಂದುವರೆಸಬಹುದಾಗಿದೆ. ದೇವಿ ಪವಾಡ ಎಂತಹದ್ದು ಎಂದರೆ ಮಕ್ಕಳಾದವರು ಇಲ್ಲಿ ಬಂದು ಮಕ್ಕಳಾದರೆ ನಿನ್ನ ಹೆಸರಿಡುತ್ತೇನೆ ತಾಯಿ ಎಂದು ಕಾಯಿ ಕಟ್ಟಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಅದರ ಜೊತೆಗೆ ಯಾವುದೇ ಕಷ್ಟ ಬಂದರೂ ಗದ್ದೆಮ್ಮ ದೇವಿಗೆ ಹರಕೆ ಹೊತ್ತು ದೇವಸ್ಥಾನದ ಮುಂದಿನ ಮರಕ್ಕೆ ಕಾಯಿ ಕಟ್ಟಿದರೆ ಎಲ್ಲ ಈಡೇರುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಗದ್ದೆಮ್ಮ ದೇವಿ
ದೇವಿ ಕೃಪೆಯಿಂದ ಗ್ರಾಮದಲ್ಲಿ ಸದಾ ಸಮೃದ್ಧಿಯಿದ್ದು, ಭೂಮಿಗೆ ಉತ್ತಮ ನೀರಾವರಿ ಇದೆ ಅಂತಾರೆ ರೈತರು. ಜೊತೆಗೆ ಕುರಿ, ಜಾನುವಾರುಗಳಿಗೆ ಕಾಯಿಲೆ ಬಂದರೆ ಸಾಕು ದೇವಸ್ಥಾನದಲ್ಲಿ ತಂದು ಬಿಟ್ಟರೆ ಕಾಯಿಲೆ ವಾಸಿಯಾಗುತ್ತದಂತೆ. ಆದರೆ ಇಲ್ಲಿ ಒಂದು ವೇಳೆ ಹರಕೆ ಹೊತ್ತ ಪ್ರಕಾರ ನಡೆದುಕೊಳ್ಳದಿದ್ದರೆ ಕೇಡು ಕಟ್ಟಿಟ್ಟ ಬುತ್ತಿ ಎಂಬುದು ಮಾತ್ರ ಸತ್ಯ. ಒಂದು ವೇಳೆ ಮಕ್ಕಳಿಗೆ ಮೊದಲ ಹೆಸರು ಗದ್ದೆಮ್ಮ ಅಥವಾ ಗದ್ದೆಪ್ಪ ಅಂತ ಇಡದೆ ಹೋದರೆ ಕಾಯಿಲೆ, ಮಕ್ಕಳು ಸುಮ್ಮನೆ ಅಳುವುದು ಶುರುವಾಗುತ್ತದೆಯಂತೆ. ಹರಕೆ ಹೊತ್ತು ನಂತರ ಹೆಸರನ್ನು ಇಡದಿದ್ದರಂತೂ ಅವರಿಗೆ ಇನ್ನಿಲ್ಲದ ತೊಂದರೆಯಾಗುತ್ತದೆ. ಇದರಿಂದ ಗ್ರಾಮದೇವಿ ಗದ್ದೆಮ್ಮ ಅಂದರೆ ಭಯ ಭಕ್ತಿ ತುಂಬಾನೆ ಜಾಸ್ತಿ.
ಇದನ್ನೂ ಓದಿ
ಬಾಗಲಕೋಟೆಯಲ್ಲಿ ಸಾಮೂಹಿಕ ಹೋಳಿ ಆಚರಣೆಗೆ ನಿರ್ಬಂಧ
ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೀತಿ-ಪ್ರಣಯದ ವಿಚಾರಕ್ಕೆ ಸುದೀಪ್ ಕೊಟ್ರು ಮಸ್ತ್ ಪಂಚ್