ಹಾವೇರಿ ಜನತೆಗೆ ಚಿರತೆ ಭೀತಿ; ಸೆರೆ ಹಿಡಿಯಲು ಬೋನ್ ಇಟ್ಟಿರುವ ಅರಣ್ಯ ಇಲಾಖೆ
ಹಾವೇರಿ ತಾಲೂಕಿನ ಬಮ್ಮನಕಟ್ಟಿ ಗ್ರಾಮದ ಬಳಿ ಇರುವ ರೈತ ಬಸವರಾಜ ಮೈಲಾರ ಎಂಬುವರು ಜಮೀನಿನಲ್ಲಿ ಕೃಷಿ ಜೊತೆಗೆ ಕುರಿ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಯಾವುದೋ ಪ್ರಾಣಿ ರಾತ್ರಿ ಆಗುತ್ತಿದ್ದಂತೆ ಕುರಿಗಳ ಮೇಲೆ ದಾಳಿ ಮಾಡುತ್ತಿದೆ.
ಹಾವೇರಿ: ತಾಲೂಕಿನ ಬಮ್ಮನಕಟ್ಟಿ ಗ್ರಾಮದ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ರೈತರಂತೂ ಒಬ್ಬೊಬ್ಬರಾಗಿ ಜಮೀನಿಗೆ ಹೋಗುವುದಕ್ಕೆ ಭಯಪಡುತ್ತಿದ್ದಾರೆ. ಹಾಗಂತ ಗ್ರಾಮದಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಯಾರೂ ನೋಡಿಯೂ ಇಲ್ಲ. ಆದರೆ ಕಳೆದ ಕೆಲವು ದಿನಗಳಿಂದ ರೈತನ ಜಮೀನಿನಲ್ಲಿದ್ದ ಕುರಿಗಳನ್ನ ಯಾವುದೋ ಪ್ರಾಣಿ ಅರ್ಧಂಬರ್ಧ ತಿಂದು ಹೋಗುತ್ತಿದೆ. ಹುಲಿ ಬಂತು ಹುಲಿ ಎನ್ನುವ ಕಥೆಯಂತೆ ಗ್ರಾಮದ ಜನರು ಚಿರತೆ ಬಂತು ಚಿರತೆ ಅಂತಿದ್ದಾರೆ.
ಹಾವೇರಿ ತಾಲೂಕಿನ ಬಮ್ಮನಕಟ್ಟಿ ಗ್ರಾಮದ ಬಳಿ ಇರುವ ರೈತ ಬಸವರಾಜ ಮೈಲಾರ ಎಂಬುವರು ಜಮೀನಿನಲ್ಲಿ ಕೃಷಿ ಜೊತೆಗೆ ಕುರಿ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಯಾವುದೋ ಪ್ರಾಣಿ ರಾತ್ರಿ ಆಗುತ್ತಿದ್ದಂತೆ ಕುರಿಗಳ ಮೇಲೆ ದಾಳಿ ಮಾಡುತ್ತಿದೆ. ಸತತ ಎರಡು ದಿನಗಳ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿರುವ ಪ್ರಾಣಿ ಏಳು ಕುರಿಗಳನ್ನ ಎಳೆದಾಡಿ ಅರ್ಧಂಬರ್ಧ ತಿಂದು ಪರಾರಿ ಆಗಿದೆ. ಇದಕ್ಕೂ ಮೊದಲು ಬಮ್ಮನಕಟ್ಟಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಯಲಗಚ್ಚ, ಬಸಾಪುರ, ಕನವಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಚಿರತೆ ಬಂತು ಚಿರತೆ ಎನ್ನುವ ಸುದ್ದಿ ಹಬ್ಬಿದ ಮೇಲೆ ಕನವಳ್ಳಿ, ಬಸಾಪುರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಜನರು ಹೊರಗೆ ಓಡಾಡುವಾಗ ಹುಷಾರಿನಿಂದ ಓಡಾಡಿ, ಚಿರತೆ ಪ್ರತ್ಯಕ್ಷವಾಗಿದೆ ಅಂತಾ ಡಂಗುರ ಸಾರಿಸಲಾಗಿದೆ. ನಂತರ ಕುರಿಗಳನ್ನ ಯಾವುದೋ ಪ್ರಾಣಿ ರಾತ್ರೋರಾತ್ರಿ ಅರ್ಧಂಬರ್ಧ ತಿಂದು ಹೋಗುತ್ತಿರುವುದು ಚಿರತೆ ಬಂತು ಚಿರತೆ ಅನ್ನೋ ಜನರ ಮಾತಿಗೆ ಪುಷ್ಟಿ ನೀಡಿದಂತಾಗಿದೆ.
ಜನರ ಮಾತಿಗೆ ಪುಷ್ಟಿ ಬಮ್ಮನಕಟ್ಟಿ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರಲ್ಲಿ ಯಾವಾಗ ಚಿರತೆ ಭೀತಿ ಕಾಡುವುದಕ್ಕೆ ಶುರುವಾಯಿತೋ ಆಗಲೆ ಕುರಿಗಳ ಮೇಲೆ ದಾಳಿ ನಡೆಸಲು ಚಿರತೆ ಬಂದಿದೆ ಎನ್ನುವುದಕ್ಕೆ ಪುಷ್ಟಿ ನೀಡಿದಂತಾಗಿದೆ. ಕುರಿಗಳನ್ನು ಯಾವುದೋ ಪ್ರಾಣಿ ಅರ್ಧಂಬರ್ಧ ತಿಂದು ಹೋಗಿರುವುದನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಚಿರತೆ ಬಂದಿರುವ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸಂಶಯದ ಆಧಾರದ ಮೇಲೆ ಕಳೆದ ನಾಲ್ಕು ದಿನಗಳಿಂದ ರೈತ ಬಸವರಾಜ ಮೈಲಾರನ ಜಮೀನಿನಲ್ಲಿ ಬೋನು ಇಟ್ಟು ಚಿರತೆ ಇದ್ದರೆ ಸೆರೆಯಾಗುತ್ತದೆ ಅಂತಾ ಕಾಯುತ್ತಿದ್ದಾರೆ. ಆದರೆ ಈವರೆಗೂ ಚಿರತೆ ಬೋನಿಗೂ ಬಿದ್ದಿಲ್ಲ.
ಹತ್ತಾರು ಗ್ರಾಮಗಳಲ್ಲಿ ಚಿರತೆ ಬಂತು ಎನ್ನುವ ಸುದ್ದಿ ಹರಡಿದರೂ ಈವರೆಗೂ ಯಾವ ಗ್ರಾಮದ ಜನರು ಚಿರತೆಯನ್ನ ನೋಡಿಲ್ಲ. ಹೀಗಾಗಿ ಚಿರತೆ ಬಂತು ಚಿರತೆ ಎನ್ನುವುದು ಹುಲಿ ಬಂತು ಹುಲಿ ಎನ್ನುವ ಕಥೆಯಂತಾಗಿದೆ. ಆದರೆ ಜನರು ಮಾತ್ರ ಚಿರತೆ ಬಂದಿದೆ ಎನ್ನುವುದು ಕೇಳಿ ಅಕ್ಷರಶಃ ಕಂಗಾಲಾಗಿದ್ದಾರೆ. ರೈತರಂತೂ ಹಗಲು ಹೊತ್ತಿನಲ್ಲಿ ಒಬ್ಬೊಬ್ಬರಾಗಿ ಜಮೀನಿಗೆ ಹೋಗುವುದಕ್ಕೆ ಭಯಪಡುತ್ತಿದ್ದಾರೆ. ಗ್ರಾಮಗಳ ಸುತ್ತಮುತ್ತ ನೂರಾರು ರೈತರು ನೀರಾವರಿ ಕೃಷಿ ಮಾಡಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ನೀರಾವರಿ ಕೃಷಿ ಮಾಡುತ್ತಿರುವ ಬಹುತೇಕ ರೈತರು ರಾತ್ರಿ ವೇಳೆಯಲ್ಲಿ ಜಮೀನಿಗೆ ಹೋಗೋದನ್ನೆ ನಿಲ್ಲಿಸಿದ್ದಾರೆ. ಇದು ಅರಣ್ಯ ಇಲಾಖೆಗೂ ದೊಡ್ಡ ತಲೆ ನೋವಾಗಿದೆ.
ಇದನ್ನೂ ಓದಿ
ಮೈಸೂರಿನಲ್ಲಿ ಬೋನಿಗೆ ಬಿತ್ತು 6 ವರ್ಷದ ಗಂಡು ಚಿರತೆ: ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ
ಮೈಸೂರು ಮೃಗಾಲಯದ ಪ್ರಾಣಿಗಳಿಗಾಗಿ ಬಂತು ಶವರ್: ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ