ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಬೇರೆ ತನಿಖಾ ಸಂಸ್ಥೆಗೆ ವಹಿಸುವುದಿಲ್ಲ: ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಇದುವರೆಗೆ ಚರ್ಚೆ ಆಗಿಲ್ಲ. ಬದಲಿಗೆ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಧಾರವಾಡ: ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯು ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಅಧೀನದಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದರು. ಎಸ್‌ಐಟಿಯನ್ನು ಸ್ವತಂತ್ರವಾಗಿ ಬಿಟ್ಟಿದ್ದೇವೆ. 2016ರಲ್ಲಿ ಸಚಿವರೊಬ್ಬರ ಸಿಡಿ ಪ್ರಕರಣ ಬಯಲಾಗಿತ್ತು. ಆಗಲೂ ಸಿಐಡಿ ವಿಚಾರಣೆ ನಡೆಸಿತ್ತು. ಪೊಲೀಸರು ಕಾನೂನು ಪ್ರಕಾರ ವಿಚಾರಣೆ ಮಾಡುತ್ತಾರೆ. ಸಿಡಿ ಪ್ರಕರಣದ ತನಿಖೆಯನ್ನು ಎಸ್ಐಟಿ ಸಮರ್ಥವಾಗಿ ನಡೆಸುತ್ತಿದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಬೇರೆ ಸಂಸ್ಥೆಗೆ ವಹಿಸುವುದಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಭಾನುವಾರ ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಎಸ್ಐಟಿ ಸಿಡಿ ತನಿಖೆಯನ್ನು ನಿಷ್ಪಕ್ಷಪಾತ, ನಿಷ್ಠೂರ, ನ್ಯಾಯಸಮ್ಮತವಾಗಿ ನಡೆಸುತ್ತಿದೆ ಎಂದು ತಿಳಿಸಿದರು.
ಇನ್ನು ಸಿಡಿ ವಿಚಾರವನ್ನು ಹೊರತುಪಡಿಸಿ ರಾಜ್ಯದಲ್ಲಿನ ಕೊವಿಡ್ ಎರಡನೇ ಅಲೆಯ ವಿಚಾರವಾಗಿ ಮಾತನಾಡಿದ ಇವರು ಹೊರ ರಾಜ್ಯಗಳಲ್ಲಿ ಕೊವಿಡ್ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೊವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಲಾಗುತ್ತಿದೆ. ಶಾಲಾ ಕಾಲೇಜುಗಳ ವಿಚಾರದಲ್ಲಿ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತವೆ. ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಇದುವರೆಗೆ ಚರ್ಚೆ ಆಗಿಲ್ಲ. ಬದಲಿಗೆ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಉಪಚುನಾವಣೆ ಬಗ್ಗೆ ಪ್ರಸ್ತಾಪ: ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ:
‘ತಮಿಳುನಾಡಿನ ಮೇಲೆ ಮೃದು ಧೋರಣೆ ತಳೆಯುವುದಿಲ್ಲ‘ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ
ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿ ತನಗೆ ಜೀವ ಬೆದರಿಕೆ ಇದೆಯೆಂದ ವರ್ತೂರು , ಗೃಹ ಸಚಿವರ ಪ್ರತಿಕ್ರಿಯೆ ಏನು?