ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹ: ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ

Vinay Kulkarni Disqualified: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ವಿಧಾನಸಭೆ ಶನಿವಾರ ಸಂಜೆ ಅಧಿಕೃತ ಆದೇಶ ಹೊರಡಿಸಿದೆ. ಸಂವಿಧಾನದ ನಿಯಮ ಹಾಗೂ ಜನಪ್ರತಿನಿಧಿ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರ ಈಗ ಶಾಸಕರಿಲ್ಲದೆ ತೆರವಾಗಿದೆ.

ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹ: ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ
ವಿನಯ್ ಕುಲಕರ್ಣಿ ಹಾಗೂ ವಿಧಾನಸೌಧ
Image Credit source: tv9

Updated on: May 02, 2026 | 8:32 PM

ಬೆಂಗಳೂರು, ಮೇ 2: ದೀರ್ಘಕಾಲದ ಕಾನೂನು ಹೋರಾಟ ಮತ್ತು ರಾಜಕೀಯ ಜಿದ್ದಾಜಿದ್ದಿನ ನಂತರ, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ (Vinay Kulkarni Disqualified) ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಶನಿವಾರ ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ (Yogesh Gowda) ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ನಂತರದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶದೊಂದಿಗೆ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರವು ಅಧಿಕೃತವಾಗಿ ತೆರವಾಗಿದೆ.

  • ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಕ್ರಮ
  • ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹ
  • ವಿಧಾನಸಭೆ ಕಾರ್ಯದರ್ಶಿಯಿಂದ ಮಹತ್ವದ ಆದೇಶ

ಭಾರತೀಯ ಸಂವಿಧಾನದ ವಿಧಿ 191(1)(e) ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರ ಅಡಿಯಲ್ಲಿ ಈ ಅನರ್ಹತೆ ಆದೇಶವನ್ನು ಹೊರಡಿಸಲಾಗಿದೆ. ನಿಯಮಗಳ ಪ್ರಕಾರ, ಯಾವುದೇ ಜನಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಯಾದಲ್ಲಿ ಅವರು ತಕ್ಷಣವೇ ಶಾಸಕ ಸ್ಥಾನಕ್ಕೆ ಅನರ್ಹರಾಗುತ್ತಾರೆ.

ಬಿಜೆಪಿ ಆರೋಪ ಮತ್ತು ಆದೇಶ


ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ನಂತರವೂ ವಿಧಾನಸಭೆ ಸಚಿವಾಲಯ ಅನರ್ಹತೆ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಗಂಭೀರವಾಗಿ ಆರೋಪಿಸಿತ್ತು. ವಿನಯ್ ಕುಲಕರ್ಣಿ ಅವರು ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಲು ಸರ್ಕಾರ ಸಮಯಾವಕಾಶ ಮಾಡಿಕೊಡುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ, ಇದೀಗ ಎಲ್ಲಾ ಆಸರೆಗಳಿಗೆ ತೆರೆ ಬಿದ್ದಿದ್ದು, ಅಧಿಕೃತವಾಗಿ ವಿನಯ್ ಕುಲಕರ್ಣಿ ಮಾಜಿ ಶಾಸಕರಾಗಿದ್ದಾರೆ.

ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಕೇಸ್: ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿದ್ದರು. ಇವರೂ ಸೇರಿದಂತೆ 16 ಮಂದಿ ತಪ್ಪಿತಸ್ಥರು ಎಂದು ಏಪ್ರಿಲ್ 16 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಏಪ್ರಿಲ್ 17 ರಂದು 16 ಮಂದಿಗೆ ಜೀವಾವಧಿ ಶಿಕ್ಷೆ ಘೋಷಣೆ ಮಾಡಿತ್ತು. ಏತನ್ಮಧ್ಯೆ, ವಿನಯ್ ಕುಲಕರ್ಣಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು ಮತ್ತು ಜಾಮೀನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Sat, 2 May 26

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us