
ಬೆಂಗಳೂರು, ಜುಲೈ 31: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda Murder Case) ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ವಿನಯ್ ಕುಲಕರ್ಣಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಲಾಗಿದೆ. 5 ಲಕ್ಷ ರೂ. ಬಾಂಡ್ ಹಾಗೂ ಶ್ಯೂರಿಟಿ ಒದಗಿಸುವಂತೆ ಕೋರ್ಟ್ ಆದೇಶಿಸಿದೆ. ಇದೇ ವೇಳೆ ವಿನಯ್ ಕುಲಕರ್ಣಿ ದೋಷಿ ಎಂದು ಪ್ರಕಟಿಸಿದ್ದ ತೀರ್ಪಿಗೂ ತಡೆಯಾಜ್ಞೆ ನೀಡಲಾಗಿದೆ. ಈ ಆದೇಶದಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೆ ಮತ್ತೆ ಅವಕಾಶ ಸಿಗುವ ಸಾಧ್ಯತೆ ಮೂಡಿದೆ. ನ್ಯಾ.ಮೊಹಮ್ಮದ್ ನವಾಜ್, ಜಿ.ಬಸವರಾಜ ಅವರಿದ್ದ ಪೀಠದಿಂದ ಈ ಆದೇಶ ಹೊರಬಿದ್ದಿದೆ.
ವಿನಯ್ ಕುಲಕರ್ಣಿ ಸೇರಿದಂತೆ 10 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮ, ದಿನೇಶ್, ಅಶ್ವತ್ಥ್, ಸುನಿಲ್, ನಜೀರ್ ಅಹ್ಮದ್, ಷಾನವಾಜ್, ನೂತನ್, ಹರ್ಷಿತ್, ಚನ್ನಕೇಶವ ಟಿಂಗರಿಕರ್‌ಗೆ ಹೈಕೋರ್ಟ್ ಜಾಮೀನು ನೀಡಿದೆ.
2016ರ ಜೂನ್ 15ರಂದು ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ನಂತರ ಪ್ರಕರಣದ ತನಿಖೆಯನ್ನು ಬಳಿಕ ಸಿಬಿಐಗೆ ವಹಿಸಲಾಗಿದ್ದು, ತನಿಖೆ ನಡೆದಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಸಂಚು ಆರೋಪಗಳು ಸಾಬೀತಾಗಿವೆ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ 2026ರ ಏಪ್ರಿಲ್ 17ರಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡವನ್ನೂ ವಿಧಿಸಿತ್ತು. ದಂಡದ ಮೊತ್ತದಿಂದ ಸಂತ್ರಸ್ತ ಯೋಗೀಶ್ ಗೌಡ ಅವರ ಮಕ್ಕಳು ಮತ್ತು ಸಹೋದರರಿಗೆ ಒಟ್ಟು 16 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿತ್ತು.
ಇದನ್ನೂ ಓದಿ: ನಾಳೆ ಹೈಕೋರ್ಟ್ನಲ್ಲಿ ಏನಾಗಲಿದೆ ವಿನಯ್ ಕುಲಕರ್ಣಿ ಭವಿಷ್ಯ?
ಶಿಕ್ಷೆ ಪ್ರಕಟವಾದ ಬಳಿಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಅನರ್ಹಗೊಂಡಿತ್ತು. ಆದರೆ, ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವುದರಿಂದ, ಅವರ ಶಾಸಕ ಸ್ಥಾನಕ್ಕೆ ಮತ್ತೆ ಅವಕಾಶ ದೊರೆಯುವ ಸಾಧ್ಯತೆ ಬಗ್ಗೆ ಗಮನ ಸೆಳೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Fri, 31 July 26