
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪ್ರಬಲ ಮುಸ್ಲಿಂ ಮುಖಂಡ ಸಿಎಂ ಇಬ್ರಾಹಿಂ ಇಂದು ಬೆಂಗಳೂರಿನಲ್ಲಿ ಹೇಳಿಕೆಯೊಂದನ್ನು ನೀಡಿ, ವಿಶ್ವನಾಥ್ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ ಎಂದರು
‘‘ವಿಶ್ವನಾಥ್ ತಮ್ಮ ಅಂತರಾಳದ ಮಾತನಾಡಿದ್ದಾರೆ, ಅವರು ಇತಿಹಾಸವನ್ನು ಓದಿದ್ದಾರೆ ಹಾಗೂ ವಿಷಯಗಳನ್ನು ಚಿನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇದು ಪಕ್ಷ ಅಥವಾ ಸಿದ್ಧಾಂತಗಳ ವಿಷಯ ಅಲ್ಲ. ಕರ್ನಾಟಕದ ಜನಕ್ಕೆ ಚೆನ್ನಾಗಿ ನೆನಪಿದೆ. ಇದೇ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಹಿಂದೆ ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದರು,’’ ಎಂದು ಇಬ್ರಾಹಿಂ ಹೇಳಿದರು.
‘‘ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವ ಕೆಲಸ ಬಿಜೆಪಿ ಮಾಡ್ತಿದೆ. ನಮ್ಮಲ್ಲಿ ಬಹುಸಂಖ್ಯಾತ ಮತದಾರರು ಅಂದರೆ ಹಿಂದೂಗಳು ಈ ಬಹು ಸಂಖ್ಯಾತ ಮತದಾರರ ಭಾವನೆ ಕೆರಳಿಸುವ ಕೆಲಸ ಮೊದಲಿನಿಂದಲೂ ಬಿಜೆಪಿ ಮಾಡಿಕೊಂಡು ಬಂದಿದೆ,’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.
‘‘ಬಿಜೆಪಿಯವರು ಸುಮ್ಮನೇ ಹೇಳಿಕೆ ಕೊಡುವುದನ್ನು ಬಿಟ್ಟು ನಡ್ಡಾನೋ ಪಡ್ಡಾನೋ ಹತ್ತಿರ ಹೋಗಿ ಹಣ ಕೇಳಿ ರಾಜ್ಯಕ್ಕೆ ತರಲಿ. ರಾಜ್ಯ ಸರ್ಕಾರ ನಡೆಸುತ್ತಿರುವವರು ಕೆರೆಯಲ್ಲಿ ಈಜಾಡದೆ, ಸಮುದ್ರಕ್ಕೆ ಧುಮುಕಲಿ. ಡಿ.ಜೆ.ಹಳ್ಳಿ ಗಲಾಟೆಗೆ ಡ್ರಗ್ಸ್ ದಂಧೆಯೇ ಕಾರಣ. ಇದನ್ನು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಡ್ರಗ್ಸ್ ಮಾರಾಟಗಾರರನ್ನು ಮೊದಲೇ ಯಾಕೆ ಹಿಡಿಯಲಿಲ್ಲ? ಈ ವೈಫಲ್ಯವನ್ನು ಸರ್ಕಾರ ಯಾಕೆ ಒಪ್ಪಿಕೊಳ್ಳುತ್ತಿಲ್ಲ?’’ ಎಂದು ಇಬ್ರಾಹಿಂ ಪ್ರಶ್ನಿಸಿದರು.