ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಆಸ್ತಿ, ಪಾಸ್ತಿ, ಜೀವ ಹಾನಿಯೂ ಉಂಟಾಗಿದೆ. ಹಲವೆಡೆಗಳಲ್ಲಿ ಜನರು ವಸತಿ ಕಳೆದುಕೊಂಡಿದ್ದಾರೆ. ಪ್ರವಾಹ ಭೀತಿ ಇನ್ನೂ ಜನರಲ್ಲಿ ಮಾಸಿಲ್ಲ. ಈಗಿನ ಹವಾಮಾನ ಹಾಗೂ ಮುಂದಿನ ದಿನಗಳ ಹವಾಮಾನ, ಮಳೆ ಪರಿಸ್ಥಿತಿಯ ಬಗ್ಗೆ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಅಂದರೆ, 24 ರಿಂದ 28 ರ ವರೆಗಿನ ಹವಮಾನ ಮುನ್ಸೂಚನೆಯನ್ನು ಸಿ.ಎಸ್. ಪಾಟೀಲ್ ನೀಡಿದ್ದಾರೆ. ಇಂದು ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು. ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ. ಜಾರ್ಖಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದೆ. ಕರ್ನಾಟಕ ಹಾಗೂ ಕೇರಳದ ಕರಾವಳಿ ಭಾಗದಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂದಿನಿಂದ 28 ನೇ ತಾರೀಖಿನ ವರೆಗೆ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಇಂದು ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ನಾಳೆಯಿಂದ 28 ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆ ಹಾಗೂ ನಾಡಿದ್ದು ಕರಾವಳಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆಯಿಂದ ಇಡೀ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ 2 ದಿನ ಭಾರೀ ಮಳೆ ಸಾಧ್ಯತೆ
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇಂದು (ಜುಲೈ 24) ಮೆಜೆಸ್ಟಿಕ್ ಸುತ್ತಲೂ ತುಂತುರು ಮಳೆಯಾಗಿದೆ. ಕಳೆದ ಎರಡು ಗಂಟೆಯಿಂದ ಮಳೆ ಸುರಿಯುತ್ತಿದೆ. ಅಲ್ಲದೆ, ಸಿಲಿಕಾನ್ ಸಿಟಿಯ ಹಲವಡೆ ಮಳೆಯಾಗಿದೆ. ಶಾಂತಿನಗರ, ಜಯನಗರ, ಕಾರ್ಪೋರೇಶನ್, ಜಯನಗರ, ಎಮ್ ಜಿ ರೋಡ್ ಸೇರಿದಂತೆ ಹಲವಡೆ ಮಳೆಯಾಗಿದೆ. ಮಳೆಯಿಂದ ರಸ್ತೆಗೆ ನುಗ್ಗಿದ ನೀರಿನಿಂದ ವಾಹನ ಸವಾರರಿಗೆ ಪರದಾಡುವಂತಾಗಿದೆ. 30 ನಿಮಿಷ ಸುರಿದ ಮಳೆಗೂ ರಸ್ತೆಗಳು ನದಿಯಂತಾಗಿದೆ. ಮಳೆಯಲ್ಲಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮಹಾಮಳೆ: ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ; ಸಂಪೂರ್ಣ ವಿವರ ಇಲ್ಲಿದೆ
(Weather Report Weather Forecast for Next 4 Days Bengaluru Coastal Karnataka Rainfall GBD)
Published On - 5:18 pm, Sat, 24 July 21