ಬೆಂಗಳೂರು, ಡಿಸೆಂಬರ್ 19: ಇಂದು ನಗರದ 45 ಕಡೆ ಏಕಕಾಲದಲ್ಲಿ ಬೆಸ್ಕಾಂ ಮತ್ತು ಜಲಮಂಡಳಿ ಸೇರಿ ಇತರೆ ಕಚೇರಿಗಳ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಂ.ಜಿ.ರಸ್ತೆಯ ಬೆಸ್ಕಾಂ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಸರ್ಕಾರಿ ಕಡತ ತೆಗೆದುಕೊಂಡು ಹೋಗುತ್ತಿದ್ದ ಕಾಂಟ್ರಾಕ್ಟರ್ ವಿರುದ್ದ ಉಪ ಲೊಕಾಯುಕ್ತ ಫುಲ್ ಗರಂ ಆಗಿದ್ದಾರೆ. ನೀವು ನಮ್ಮ ಸರ್ಕಾರಿ ಕಡತ ಚೀನಾ, ಪಾಕಿಸ್ತಾನಕ್ಕೆ ಕೊಡಲ್ಲ ಅಂತ ಏನು ಗ್ಯಾರಂಟಿ? ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಇನ್ನು ಸರ್ಕಾರಿ ಕಡತ ತೆಗೆದುಕೊಂಡು ಹೋಗುತ್ತಿದ್ದ ಕಾಂಟ್ರಾಕ್ಟರ್ ವಿರುದ್ಧ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಉಪ ಲೋಕಾಯುಕ್ತ ಬಿ.ವೀರಪ್ಪ ಸೂಚನೆ ನೀಡಿದ್ದಾರೆ. ಬೆಸ್ಕಾಂ ಇಂಜಿನಿಯರ್ ರಾಜೇಶ್ ಎ1 ಆರೋಪಿ ಮಾಡುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಸಾರ್ವಜನಿಕರಿಂದ ದೂರು: ಬೆಸ್ಕಾಂ, ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಗುತ್ತಿಗೆದಾರ ಪವನ್, ಎಲೆಕ್ಟ್ರಿಕಲ್ ಕೆವಿ ರೆಡ್ಡಿ, ಜ್ಯೋತಿ ಎಲೆಕ್ಟ್ರಿಕ್ಸ್ ರಾಕೇಶ್ ವಿರುದ್ದ ಕ್ರಿಮಿನಲ್ ಕೇಸ್ಗೆ ಸೂಚಿಸಲಾಗಿದೆ. ಅದ್ಹೇಗೆ ಸರ್ಕಾರಿ ಕಡತ ಹೊರಗಡೆಯವರೆಗೆ ಕೊಡುತ್ತೀರಿ? ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಬೀಳುತ್ತೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.
ಇಂದಿರಾ ನಗರದ ಕೋಡಿಹಳ್ಳಿಯಲ್ಲಿರುವ ಬೆಸ್ಕಾಂ ಕಚೇರಿ ಮೇಲೆ ಕೂಡ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಜೀನ್ಸ್ ಪ್ಯಾಂಟ್, ಟೀ ಷರ್ಟ್ ಧರಿಸಿದ್ದ ಸಿಬ್ಬಂದಿಗೆ ಉಪ ಲೋಕಾಯುಕ್ತ ಬಿ. ವೀರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಸ್ಕಾಂ ಪೂರ್ವ ವಿಭಾಗ ಇಂಜಿನಿಯರ್ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗಿದೆ.
ಇನ್ನು ಗುತ್ತಿಗೆದಾರನಿಂದ 1.86 ಲಕ್ಷ ರೂ. ಲಂಚ ಪಡೆದು ಓಡಿ ಹೋಗಿತ್ತಿದ್ದ ಜಲಮಂಡಳಿ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಇಂದಿರಾ ನಗರ ಜಲಮಂಡಳಿ ಸಿನೀಯರ್ ಅಸಿಸ್ಟಂಟ್ ಚಿದಾನಂದ ಸಿಕ್ಕಿಬಿದ್ದಿದ್ದಾರೆ. ಜಲ ಮಂಡಳಿ ಗುತ್ತಿಗೆದಾರ ತಿಮ್ಮೇಗೌಡನಿಂದ ಚಿದಾನಂದ ಲಂಚ ಪಡೆದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.