4 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮುಲ್ಕಿ ಆರ್‌ಐ
ಮಂಗಳೂರಿನಲ್ಲಿ ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದಿದ್ದಾರೆ. ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ 4 ಲಕ್ಷ ರೂ. ಲಂಚ ಪಡೆಯುವಾಗ ಬಲೆಗೆ ಬಿದಿದ್ದರೆ, ಬೀದರ್‌ನ ಭೂಮಾಪಕ ಅಧಿಕಾರಿ ಸಂತೋಷ ಬೊಗಾರ 75 ಸಾವಿರ ರೂ. ಲಂಚ ಪಡೆಯುವಾಗ ಬಲೆಗೆ ಬಿದಿದ್ದಾರೆ.
ಮಂಗಳೂರು, ಡಿಸೆಂಬರ್ 19: 4 ಲಕ್ಷ ರೂಪಾಯಿ ಲಂಚ (bribe) ಸ್ವೀಕರಿಸುತ್ತಿದ್ದಾಗ ಮುಲ್ಕಿ ಆರ್‌ಐ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಜಂಕ್ಷನ್ ಬಳಿ ನಡೆದಿದೆ. ಮಂಗಳೂರು ತಾಲೂಕು ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್.ದಿನೇಶ್ ಬಲೆಗೆ ಬಿದ್ದ ಅಧಿಕಾರಿ. ವ್ಯಕ್ತಿ ದೂರಿನ ಮೇರೆಗೆ ಲೋಕಾಯುಕ್ತ ಎಸ್‌ಪಿ ನಟರಾಜ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಜಿ.ಎಸ್.ದಿನೇಶ್ ಪಹಣಿಯಲ್ಲಿ ಹೆಸರು ಸೇರಿಸಲು 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದರೂ ಒಂದು ವರ್ಷದಿಂದ ಕ್ರಮಕೈಗೊಂಡಿರಲಿಲ್ಲ. ಲಂಚಕ್ಕೆ ಬೇಡಿಕೆ ಸಂಬಂಧ ಮಂಗಳೂರು ಲೋಕಾಯುಕ್ತ ಕಚೇರಿಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದರು.
75 ಸಾವಿರ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕ ಅಧಿಕಾರಿ
ಮತ್ತೊಂದು ಪ್ರಕರಣದಲ್ಲಿ ಲಂಚ ಸ್ವೀಕರಿಸುವಾಗ ಭೂ ಮಾಪಕ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಮತ್ತೊಂದು ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ದತ್ತ ಮಂದಿರ ಬಳಿಕ ನಡೆದಿದೆ. ಭೂದಾಖಲೆಯ ಸಹಾಯಕ ನಿರ್ದೇಶಕ ಸಂತೋಷ ಬೊಗಾರ ಬಲೆಗೆ ಬಿದ್ದ ಅಧಿಕಾರಿ.
ಇದನ್ನೂ ಓದಿ: ಸಾರ್ವಜನಿಕರಿಂದ ದೂರು: ಬೆಸ್ಕಾಂ, ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಮೊಹಮ್ಮದ್ ಶೌಕತ್ ಅಲಿ ಎಂಬುವರ ಜಮೀನು ಸರ್ವೇ ಮಾಡಲು 1 ಲಕ್ಷ 50 ಸಾವಿರ ರೂ. ಲಂಚಕ್ಕೆ ಭೂಮಾಪಕ ಸಂತೋಷ ಬೇಡಿಕೆಯಿಟ್ಟಿದ್ದರು. 75 ಸಾವಿರ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ್ ತಂಡದಿಂದ ದಾಳಿ ಮಾಡಲಾಗಿತ್ತು.
ಮಂಡ್ಯದ ಸಂಚಾರಿ ಠಾಣೆ ಪೊಲೀಸರಿಂದ 8 ಸಾವಿರ ರೂ. ಲಂಚ ಬೇಡಿಕೆ
ಅಪಘಾತದ ವೇಳೆ ಸೀಜ್ ಆಗಿದ್ದ ಎಲೆಕ್ಟ್ರಿಕ್ ಬೈಕ್ ಅನ್ನ ಠಾಣೆಯಿಂದ ರಿಲೀಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಡ್ಯದ ಸಂಚಾರಿ ಠಾಣೆ ಪೊಲೀಸರು ಎಂಟು ಸಾವಿರ ರೂ. ಲಂಚ ಪಡೆಯುವಾಗ ಲೋಕಯುಕ್ತ ಬಲೆ ಬಿದ್ದಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು.
ಮಂಡ್ಯದ ಸಂಚಾರಿ ಠಾಣೆ ಪೇದೆಗಳಾದ ರಾಜಕುಮಾರ್ ಹಾಗೂ ಮಹದೇವ್ ಲೋಕಯುಕ್ತ ಬಲೆಗೆ ಬಿದ್ದಿದ್ದು, ಮಂಡ್ಯದ ಸಾದತ್ ಪಾಷ ಎಂಬಾತನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಂಡ್ಯ ಎಸ್ ಪಿ ಸಜೀತ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Thu, 19 December 24