ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಗೆ ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಪ್ರವೇಶಿಸಿದೆ. ಹಾಸನ ಭಾಗದ ಜನತೆಗೆ ಆಗಾಗ ಕಾಡಾನೆಗಳು ಕಾಣಿಸಿಕೊಳ್ಳುವುದು ಮಾಮೂಲಾಗಿದೆಯಾದರೂ ಈ ಬಾರಿ ಪಟ್ಟಣದ ಒಳಗೆ ಆನೆ ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಬೆಳಗ್ಗಿನ ಜಾವ ಮನೆಯಿಂದ ಆಚೆ ಕಾಲಿಟ್ಟ ಜನತೆಗೆ ದೈತ್ಯ ಗಜರಾಜನ ದರ್ಶನವಾಗಿದ್ದು, ಮನೆಯೆದುರು ಕಾಡಾನೆ ಹೆಜ್ಜೆಹಾಕುತ್ತಿರುವುದನ್ನು ಕಂಡು ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದಾರೆ. ರಸ್ತೆಗೆ ಕಾಲಿಟ್ಟಿದ್ದ ಕೆಲವರು ಒಂಟಿ ಸಲಗನನ್ನು ಕಂಡು ಭಯಭೀತರಾಗಿ ಮನೆ ಸೇರಿದ್ದಾರೆ. ಆನೆ ಪಟ್ಟಣದೊಳಗೆ ಓಡಾಡುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಿದಾಡಲಾರಂಭಿಸಿದೆ.
ಕೊರೊನಾ ನಿಯಂತ್ರಣದ ಸಲುವಾಗಿ ನೈಟ್ ಕರ್ಫ್ಯೂ ಇದ್ದಿದ್ದರಿಂದ ನಸುಕಿನ ವೇಳೆಯಲ್ಲಿ ಹೆಚ್ಚಿನ ಓಡಾಟ ಇರಲಿಲ್ಲ. ಒಂದುವೇಳೆ ಜನರ ಓಡಾಟವಿದ್ದ ಸಂದರ್ಭದಲ್ಲಿ ಹೀಗೆ ಆನೆ ಬಂದಿದ್ದರೆ ಏನು ಅನಾಹುತವಾಗುತ್ತಿತ್ತು ಎಂದು ಅಲ್ಲಿನ ನಿವಾಸಿಗಳು ಆತಂಕಗೊಂಡಿದ್ದಾರೆ. ಒಂಟಿ ಆನೆ ಬಡಾವಣೆಯಲ್ಲಿ ಸುತ್ತಾಡಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲೂ ಸೆರೆಯಾಗಿದೆ. ಆದರೆ, ಈ ಆನೆ ಪಕ್ಕದಲ್ಲಿದ್ದ ವಾಹನಗಳಿಗಾಗಲೀ, ಮನೆ ಗೋಡೆಗಳಿಗಾಗಲೀ ಯಾವುದೇ ಹಾನಿ ಮಾಡದೇ ತನ್ನ ಪಾಡಿಗೆ ತಾನು ಸಾಗಿರುವುದು ಜನರಲ್ಲಿ ಕೊಂಚ ನಿರಾಳತೆ ಮೂಡಿಸಿದೆ.
ಕಾಡಿನಿಂದ ನಾಡಿಗೆ ಕಾಡಾನೆಗಳು ಬರುವುದು ಹಾಸನ ಜಿಲ್ಲೆಯ ಜನರಿಗೆ ಬಹುಕಾಲದ ಸಮಸ್ಯೆಯಾಗಿದ್ದು, ಕಾಡಾನೆ ಉಪಟಳ ನಿಯಂತ್ರಿಸುವಂತೆ ಆಗ್ರಹಿಸುತ್ತಲೇ ಇದ್ದಾರೆ. ಇದೀಗ ಕಾಡಾನೆ ಹೊಲ, ಗದ್ದೆ, ತೋಟಗಳನ್ನು ಬಿಟ್ಟು ಪುರಪ್ರವೇಶ ಮಾಡಿರುವುದರಿಂದ ದೊಡ್ಡ ಅನಾಹುತ ಘಟಿಸುವ ಮುನ್ನ ಅರಣ್ಯಾಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ಧಾರೆ.
ಇದನ್ನೂ ಓದಿ:
ಮಡಿಕೇರಿಯಲ್ಲಿ ಕಾಡಾನೆ ದಾಳಿ; ವೃದ್ಧೆ ಸಾವು
ಹೆಚ್.ಡಿ. ಕೋಟೆ ಬಳಿ ಕಾಡಿನಿಂದ ನಾಡಿಗೆ ಬಂದು ಕಂದಕಕ್ಕೆ ಬಿದ್ದಿದ್ದ ಕಾಡಾನೆ ಮರಿ ರಕ್ಷಣೆ