ಚಿಕ್ಕಮಗಳೂರು: ಮಹಾಮರಿ ಕೊರೊನಾದಿಂದ ಸತ್ತವರ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂಬ ಕೂಗು ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಕೊರೊನಾದಿಂದ ಸತ್ತವರ ಸಂಖ್ಯೆಯನ್ನು ಮುಚ್ಚಿಟ್ತಿದ್ಯಾ? ಆಕ್ಸಿಜನ್ ಇಲ್ಲದೇ ಜಿಲ್ಲಾಸ್ಪತ್ರೆಯಲ್ಲಿ ಜನರು ಪ್ರಾಣ ಬಿಟ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣ ಮಹಿಳೆ ಮಾಡಿರುವ ಸಂಭಾಷಣೆಯ ವಿಡಿಯೋ.
ರಾಜ್ಯ ಸರ್ಕಾರ ಕೊರೊನಾಗೆ ಬಲಿಯಾದವರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಈ ಹಿಂದೆ ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ಸಚಿವ ಸುಧಾಕರ್ ಸಹ ಪ್ರತಿಕ್ರಿಯೆ ನೀಡಿ ಆರೋಪವನ್ನು ತಳ್ಳಿ ಹಾಕಿದ್ದರು. ಆದ್ರೆ ಈಗ ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಆಕ್ಸಿಜನ್ ಇಲ್ಲದೇ ರಕ್ತಕಾರಿ ಜನರು ಪ್ರಾಣ ಬಿಡುತ್ತಿದ್ದಾರೆ ಎಂಬ ಮಹಿಳೆಯೊಬ್ಬರು ನಡೆಸಿರುವ ಸಂಭಾಷಣೆಯ ವಿಡಿಯೋ ಫುಲ್ ವೈರಲ್ ಆಗಿದೆ.
ಎಂಟು ಜನ ಸತ್ತರು ಇಬ್ಬರು ಎಂದು ವರದಿ ನೀಡಿದ್ದಾರೆ. ನನ್ನ ಕಣ್ಣೆದುರೇ ಮಹಿಳೆಯೊಬ್ಬರು ರಕ್ತಕಾರಿ ಸತ್ತಿದ್ದಾರೆ. ರೋಗಿಗಳಿಗೆ ಸರಿಯಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿಲ್ಲ. ವೈದ್ಯರುಗಳು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಹಣವಿದ್ದವರಿಗೆ ಒಂದು ರೀತಿ, ಇಲ್ಲದವರಿಗೆ ಮತ್ತೊಂದು ರೀತಿ ಟ್ರೀಟ್ಮೆಂಟ್ ಕೊಡ್ತಾರೆ. ಪಕ್ಕದ ಬೆಡ್ನಲ್ಲಿ ಐದಾರು ಗಂಟೆಗಳ ಕಾಲ ಮೃತದೇಹ ಹಾಗೆ ಇರುತ್ತೆ. ಆ ಮೃತದೇಹವನ್ನೇ ನೋಡಿಕೊಂಡು ಅಕ್ಕಪಕ್ಕದವರು ಇರಬೇಕು. ಶವ ಮುಂದಿಟ್ಟುಕೊಂಡು ಕೂರುವುದಾದರೂ ಹೇಗೆ ಈ ಭಯಕ್ಕೆಯೇ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಬೇಜವಾಬ್ದಾರಿತನ ಬಯಲಾಗುತ್ತೆ ಅಂತ ಸಾವಿನ ಸಂಖ್ಯೆಯನ್ನೇ ಮುಚ್ಚಿಡುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಕರ್ಮಕಾಂಡವನ್ನು ಮಹಿಳೆಯೊಬ್ಬರು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: TRAI: 4ಜಿ ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮತ್ತೆ ಮೊದಲ ಸ್ಥಾನ, ಕೊನೆಯಲ್ಲಿ ಏರ್‌ಟೆಲ್! ಏನಿದರ ಲೆಕ್ಕಾಚಾರ?