ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಭರವಸೆ ನೀಡಿ ವಂಚನೆ ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರು ದಕ್ಷಿಣ ವಿಭಾಗದ, ಮಾನವ ಕಳ್ಳಸಾಗಣೆ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಭಾನುಮತಿ ಎಂಬ ಮಹಿಳೆ ಬಂಧಿತೆ. ಈಕೆಯ ಟಾರ್ಗೆಟ್ ಮಕ್ಕಳಿಲ್ಲದ ದಂಪತಿ. ಅವರ ಬಳಿ ಹೋಗಿ ಬಾಡಿಗೆ ತಾಯ್ತನದ ಬಗ್ಗೆ ವಿವರಿಸುತ್ತಿದ್ದಳು. ನಂತರ ತಾನೇ ಜವಾಬ್ದಾರಿ ತೆಗೆದುಕೊಂಡು ಎಲ್ಲ ಪ್ರಕ್ರಿಯೆ ಮುಗಿಸಿದಂತೆ ದಂಪತಿಯನ್ನು ನಂಬಿಸುತ್ತಿದ್ದಳು. ಬಳಿಕ ಯಾರದ್ದೋ ಮಗುವನ್ನು ಕದ್ದು ತಂದು ಈ ಮಕ್ಕಳಿಲ್ಲದ ದಂಪತಿಗೆ ನೀಡಿ ಅಪಾರ ಪ್ರಮಾಣದ ಹಣ ಪಡೆಯುತ್ತಿದ್ದಳು. ಹೀಗೆ ಭಾನುಮತಿಗೆ ಮಕ್ಕಳನ್ನು ತಂದುಕೊಡುವವರ ಗ್ಯಾಂಗ್ ಬೇರೆಯೇ ಇತ್ತು. ಸದ್ಯ ಭಾನುಮತಿಯನ್ನು ಪೊಲೀಸರು ಬಂಧಿಸಿ ಪಡೆದು, ಇನ್ನಿತರ ಮಕ್ಕಳ ಕಳ್ಳರ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ. ಭಾನುಮತಿ ಬಸವನಗುಡಿ ಮಹಿಳಾ ಪೊಲೀಸ್ ವಶದಲ್ಲಿದ್ದಾಳೆ.
ಗದಗ: ಬಡ್ಡಿ ದಂಧೆ ನಡೆಸುವವರಿಂದ ಸಾಲ ಪಡೆದು, ಹಣ ಕಟ್ಟಲಾಗದ ಯುವಕ ಹಲ್ಲೆಗೆ ಒಳಗಾಗಿ ಮೃತಪಟ್ಟಿರುವ ಘಟನೆ ಗದಗದಲ್ಲಿ ನಡೆದಿದೆ. ಮೃತ ಯುವಕ ಮೃತ್ಯುಂಜಯ ಬಡ್ಡಿ ದಂಧೆ ಮಾಡುವವರಿಂದ ಹಣ ಪಡೆದಿದ್ದ. ಎರಡು ತಿಂಗಳ ಹಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ಸಾಲ ನೀಡಿದವರು ಈತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರೂ ಆತ ಬದುಕುಳಿಯಲಿಲ್ಲ. ಮೃತ್ಯುಂಜಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ. ನಿಮಗೆ ಕೋಟಿ ಹಣ ಕೊಡ್ತೇನೆ..ನನ್ನ ಮಗನನ್ನು ವಾಪಸ್ ತಂದುಕೊಡಿ ಎಂದು ಗೋಳಿಡುತ್ತಿದ್ದಾರೆ.
ನಾನು ನನ್ನ ಮಗನ ಮದುವೆ ಮಾಡಬೇಕು ಅನ್ಕೊಂಡಿದ್ದೆ. ಆದ್ರೆ ವಿಧಿಯಾಟ ಹೀಗಾಯ್ತು. ಇವನನ್ನು ಕೊಂದವನನ್ನು ಗಲ್ಲಿಗೇರಿಸಿ. ಇಂಥ ಸಣ್ಣವಯಸ್ಸಿನಲ್ಲಿ ಏನೂ ಕಾಣದೆ ಹೋದ ನನ್ನ ಮಗ. ಒಂದು ತಿಂಗಳು ಆರೈಕೆ ಮಾಡಿದೆ. ಆದ್ರೂ ಅವನ ಜೀವ ಉಳಿಯಲಿಲ್ಲ ಎಂದು ಅಳುತ್ತಿದ್ದಾರೆ. ಆರೋಪಿಗಳಿಗೆ ಶಿಕ್ಷೆಯಾಗೇಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಹಾಗೇ, ಮೃತ ಯುವಕನ ಸೋದರ ಶಿವನಗೌಡ ಭರಮಗೌಡ ಮಾತನಾಡಿ, ನನ್ನ ತಮ್ಮ ಹಣ ಕೊಡುತ್ತೇನೆ ಎಂದು ಹೇಳಿದ್ದರೂ ಅವರು ಕೊಲೆ ಮಾಡಿದ್ದಾರೆ. ಇದೇ ವಿಚಾರವಾಗಿ ಅವತ್ತೊಂದಿನ ರಾಜೀವ್ ಗಾಂಧಿ ಪೊಲೀಸ್ ಠಾಣೆಗೆ ಹೋಗಿದ್ವಿ. ಅಂದು ಪೊಲೀಸರೇ ಸಂಧಾನ ಮಾಡಿದ್ದರು. ತಿಂಗಳ ಕಂತಿನ ಮೇಲೆ ಹಣ ಕೊಡುತ್ತೇನೆಂದು ನನ್ನ ತಮ್ಮ ಹೇಳಿದ್ದ. ಹಾಗೇ, 4ತಿಂಗಳು ಹಣ ನೀಡಿದ್ದಾನೆ. ಆದರೆ ಎರಡು ತಿಂಗಳು ಹಣ ನೀಡಲು ಅವನಿಗೆ ಆಗಿರಲಿಲ್ಲ. ಇನ್ನು ಹಲ್ಲೆ ನಡೆದ ಬಗ್ಗೆ ಪೊಲೀಸರಿಗೆ ಗೊತ್ತಿದ್ರೂ ಕ್ರಮ ಕೈಗೊಂಡಿಲ್ಲ. ಮೂವರು ಸೇರಿ ನನ್ನ ತಮ್ಮನಿಗೆ ಹೊಡೆದಿದ್ದಾರೆ. ಆದರೆ ಪೊಲೀಸರು ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಉದಯ್ ಹೊರಗಡೆ ಇದ್ದಂತೆ ಜಾಮೀನು ಸಿಕ್ಕಿಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಈಗಂತೂ ಪೆಟ್ರೋಲ್-ಡೀಸೆಲ್ ಬೆಲೆ ಮಿತಿಮೀರಿದೆ. ಲೀಟರ್ ಪೆಟ್ರೋಲ್ಗೆ ಎಲ್ಲ ನಗರಗಳಲ್ಲೂ 100 ರೂಪಾಯಿ ಮೇಲೆಯೇ ಇದೆ. ಇದು ಗ್ರಾಹಕರಿಗೆ ಸಿಕ್ಕಾಪಟೆ ಹೊರೆಯಾಗುತ್ತಿದೆ. ಹೀಗಿರುವಾಗ ಮೈಸೂರಲ್ಲಿ ಒಂದು ಪೆಟ್ರೋಲ್ ಬಂಕ್ ಗ್ರಾಹಕರಿಗೆ ಮೋಸ ಮಾಡುತ್ತಿರುವುದು ವರದಿಯಾಗಿದೆ. ಗ್ರಾಹಕನೊಬ್ಬ ಒಂದು ಬಾಟಲಿ ತೆಗೆದುಕೊಂಡು ಹೋಗಿ, 100 ರೂಪಾಯಿ ಕೊಟ್ಟು ಒಂದು ಲೀಟರ್ ಪೆಟ್ರೋಲ್ ಹಾಕಿಸಿದ್ದಾರೆ. ಆದರೆ ಬಂಕ್ನವರು ಹಾಕಿದ್ದು ಕೇವಲ ಅರ್ಧ ಲೀಟರ್ ಪೆಟ್ರೋಲ್ ಮಾತ್ರ. ಈ ಬಗ್ಗೆ ಬೈಕ್ ಸವಾರ ಪ್ರಶ್ನಿಸಿದ್ದಕ್ಕೆ, ಬಂಕ್ ಮಾಲೀಕ್ ಗಿರೀಶ್ ಎಂಬಾತ ಅವಾಜು ಹಾಕಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇದನ್ನೂ ಓದಿ: ರಾಯಚೂರು: ಒಂದೇ ಮರಕ್ಕೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ
Published On - 3:15 pm, Sat, 23 April 22