ರಾಯಚೂರು ಜಿಲ್ಲೆಯಲ್ಲಿ ಮಿತಿಮೀರಿದ ಸೇಂದಿ, ಮದ್ಯದ ಹಾವಳಿ: ಇದಕ್ಕೆ ಕಡಿವಾಣ ಹಾಕಿದವರಿಗಷ್ಟೇ ನಮ್ಮ ವೋಟ್ ಅಂತಿದ್ದಾರೆ ಮಹಿಳೆಯರು!

| Updated By: ಸಾಧು ಶ್ರೀನಾಥ್​

Updated on: Mar 20, 2023 | 6:30 AM

ಕಳೆದ ಬಾರಿಯೂ ಈ ಮಹಿಳಾ ತಂಡ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ನಿಷೇಧದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಳೆದ ಬಾರಿಯೂ ಬಿಜೆಪಿ, ಜೆಡಿಎಸ್, ಕಾಂಗ್ರೆಸ್​ಗೆ ಮತ ಹಾಕದೇ ನೋಟಾಗೆ ಮತ ಹಾಕಿ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಬಹಿರಂಗ ಸಮರ ಸಾರಿದ್ದರು. 

ರಾಯಚೂರು ಜಿಲ್ಲೆಯಲ್ಲಿ ಮಿತಿಮೀರಿದ ಸೇಂದಿ, ಮದ್ಯದ ಹಾವಳಿ: ಇದಕ್ಕೆ ಕಡಿವಾಣ ಹಾಕಿದವರಿಗಷ್ಟೇ ನಮ್ಮ ವೋಟ್ ಅಂತಿದ್ದಾರೆ ಮಹಿಳೆಯರು!
ಅಕ್ರಮ ಮದ್ಯ-ಸೇಂದಿ ಮಾಫಿಯಾಗೆ ರಾಯಚೂರಿನ ಜನ ಕಂಗಾಲು
Follow us on

ಆಂಧ್ರ-ತೆಲಂಗಾಣ ಗಡಿಯಲ್ಲಿರುವ ಆ ಹಿಂದುಳಿದ ಜಿಲ್ಲೆಯಲ್ಲಿ ನಿಷೇಧಿತ ಸೇಂದಿ, ಅಕ್ರಮ ಮದ್ಯದ ಮಾಫಿಯಾ ಜನಸಾಮಾನ್ಯರನ್ನ ನಿತ್ಯ ಕೊಲ್ಲುತ್ತಿದೆ. ಈ ಬಾರಿಯ ಚುನಾವಣೆಯಲ್ಲೂ (Karnataka Assembly Elections 2023) ಅಕ್ರಮ ಮದ್ಯ, ಹೆಂಡದ್ದೇ ಕರಾಮತ್ತು ನಡೆಯಲಿದ್ದು, ಅದನ್ನ ನಿಷೇಧಿಸಿದವರಿಗೆ ಮತ ಹಾಕ್ತೇವೆ ಅನ್ನೋ ದಿಟ್ಟ ಆಂದೋಲನವನ್ನು (Boycott) ಆ ಜಿಲ್ಲೆಯ ಮಹಿಳೆಯರು (Women) ಶುರು ಮಾಡಿದ್ದಾರೆ. ಹೌದು.. ಬಿಸಿಲುನಾಡು ಅಂತ ಕರೆಸಿಕೊಳ್ಳುವ ರಾಯಚೂರು (Raichur) ಜಿಲ್ಲೆಯಲ್ಲಿ ನಿಷೇಧಿತ ಕೆಮಿಕಲ್ ಸಿಎಚ್ ಪೌಡರ್ ನಿಂದ ತಯಾರಿಸಲಾಗೊ ಸೇಂದಿ, ಅಕ್ರಮ ಮದ್ಯ (Liquor) ಮಾರಾಟದ ಮಾಫಿಯಾ ಫುಲ್ ಆಕ್ಟಿವ್ ಆಗಿದೆ. ಹಿಂದುಳಿದ ಜಿಲ್ಲೆ ಅನ್ನೊ ಹಣೆ ಪಟ್ಟಿ ಕಟ್ಟಿಕೊಂಡಿರೊ ಈ ಜಿಲ್ಲೆಯಲ್ಲಿ ಬಡತನ ಅನ್ನೋದು ಜನರನ್ನ ಕಿತ್ತು ತಿನ್ನುತ್ತಿದೆ. ಆದರೂ ರಾಯಚೂರಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ. ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಹಳ್ಳಿ ಹಳ್ಳಿಯಲ್ಲೂ ಈ ದಂಧೆಯನ್ನ ನಡೆಸಲಾಗ್ತಿದೆ.

ಅತೀ ಕಡಿಮೆ ದರಕ್ಕೆ ಸಿಗೊ ಸೇಂದಿ, ಅಕ್ರಮ ಮದ್ಯವನ್ನ ಕುಡಿಯೋ ಜನ ತಮ್ಮ ಜೀವವನ್ನೇ ಕಳೆದುಕೊಳ್ತಿದ್ದಾರೆ. ಯುವಕರು, ಕೂಲಿ ಕಾರ್ಮಿಕರು ಸೇರಿ ಬಡ ಬಗ್ಗರು ಬಹುತೇಕರು ಈ ಅಕ್ರಮ ಮದ್ಯಕ್ಕೆ ದಾಸರಾಗಿದ್ದಾರೆ. ಸಣ್ಣ ವಯಸ್ಸಿನಲ್ಲಿ ಯುವ ಜನತೆ ದಾರಿ ತಪ್ಪುತ್ತಿರೋದ್ರಿಂದಲೂ ಆಯಾ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರಾಜಕಾರಣಿಗಳೇ ಈ ದಂಧೆ ರೂವಾರಿಗಳು ಅನ್ನೋ ಕಾರಣಕ್ಕೆ ಅಬಕಾರಿ ಇಲಾಖೆ ಕೂಡ ಕಣ್ಮುಚ್ಚಿ ಕುಳಿತಿದೆ. ರಾಯಚೂರಿನ ಮಹಿಳೆಯರ ತಂಡವೊಂಡು ಕಳೆದ ಏಳು ವರ್ಷಗಳಿಂದ ಈ ಬಗ್ಗೆ ಹೋರಾಟ ನಡೆಸ್ತಿದ್ದು, ಈ ಬಾರಿ ಚುನಾವಣೆ ಹಿನ್ನೆಲೆ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ ಎನ್ನುತ್ತಾರೆ ಹೋರಾಟಗಾರ್ತಿ ಮೊಕ್ಷಮ್ಮ ಅವರು.

ಹೌದು ಮದ್ಯ ನಿಷೇಧ ಆಂದೋಲನ ಅನ್ನೋ ಹೆಸರಿನಲ್ಲಿ ರಾಯಚೂರು ಜಿಲ್ಲೆಯ ಮಹಿಳೆಯರ ತಂಡವೊಂದು ಈ ಬಾರಿ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದೆ. ರಾಯಚೂರಿನಲ್ಲಿ ನಡೆಯುತ್ತಿರೊ ಅಕ್ರಮ ಮದ್ಯ ಮಾಫಿಯಾದಲ್ಲಿ ಸ್ಥಳೀಯ ರಾಜಕಾರಣಿಗಳು ಭಾಗಿಯಾಗಿರೊ ಆರೋಪ ಮಾಡಲಾಗಿದೆ. ಹೀಗಾಗಿ ಯುವಕರು, ಪುರುಷರಿಗೆ ಅಕ್ರಮ ಮದ್ಯ, ಸೇಂದಿಯನ್ನ ನೀಡೊ ಮೂಲಕ ಮತ ಗಿಟ್ಟಿಕೊಳ್ಳಲು ಮೂರು ಪಕ್ಷಗಳ ನಾಯಕರು ಮುಂದಾಗ್ತಾರೆ.

ಮೂರು ಪಕ್ಷಗಳು ಕೂಡ ಅಧಿಕಾರಕ್ಕೆ ಬಂದ್ರೂ ಅಕ್ರಮ ಮದ್ಯ ಮಾರಾಟವನ್ನ ನಿಷೇಧಿಸಿಲ್ಲ. ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳಿಗೆ ಈ ಮಹಿಳಾ ಮಣಿಗಳು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಯಾವ ಅಭ್ಯರ್ಥಿ ಅಕ್ರಮ ಮದ್ಯ ಮಾರಾಟ ನಿಷೇಧಿಸ್ತೀನಿ ಅಂತಾ ಬರೆದುಕೊಡ್ತಾರೋ ಅಂಥವರಿಗೆ ನಾವೆಲ್ಲಾ ಹೆಣ್ಮಕ್ಕಳು ಮತ ಹಾಕುತ್ತೇವೆ. ಇಲ್ಲದಿದ್ರೆ, ತಮ್ಮ ಮತಗಳನ್ನ ನೋಟಾ ವಿಭಾಗಕ್ಕೆ ಚಲಾಯಿಸ್ತಿವಿ ಅಂತ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

ಈ ಕುಡಿತದ ಚಟಕ್ಕೆ ದಾಸರಾಗೋ ಬಡವರು ಹೊಲ-ಮನೆಗಳನ್ನ ಕಳದುಕೊಂಡು ಬೀದಿಗೆ ಬರ್ತಿದ್ದಾರೆ. ಆದ್ರೆ ದಂಧೆ ನಡೆಸೊ ರಾಜಕಾರಣಿಗಳ ಹೆಂಡ್ತಿ ಮಕ್ಕಳು ಮಾತ್ರ ಚೆನ್ನಾಗಿರ್ತಾರೆ ಅಂತ ಮಹಿಳೆಯರು ಆರೋಪಿಸಿದ್ದಾರೆ. ಪ್ರತಿ ವರ್ಷ ಮದ್ಯ ಮಾರಾಟದಿಂದ ಸಾವಿರಾರೂ ಕೋಟಿ ಆದಾಯವಿದೆ ಅಂತ ಸರ್ಕಾರ ಹೇಳುತ್ತೆ. ಅದನ್ನ ಹೊರತುಪಡಿಸಿದರೇ ಈ ವರೆಗೆ ಅಧಿಕಾರದಲ್ಲಿದ್ದ ಯಾವ ಪಕ್ಷವೂ ಹೆಣ್ಮಕ್ಕಳ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸಿದ್ದಾರೆ ಅಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಬಾರಿಯೂ ಈ ಮಹಿಳಾ ತಂಡ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ನಿಷೇಧದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಳೆದ ಬಾರಿಯೂ ಬಿಜೆಪಿ, ಜೆಡಿಎಸ್, ಕಾಂಗ್ರೆಸ್​ಗೆ ಮತ ಹಾಕದೇ ನೋಟಾಗೆ ಮತ ಹಾಕಿ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಬಹಿರಂಗ ಸಮರ ಸಾರಿದ್ದರು. ಇಷ್ಟಾದ್ರೂ ಬುದ್ದಿ ಕಲಿಯದ ಜನಪ್ರತಿನಿಧಿಗಳು ಅಕ್ರಮ ಮದ್ಯ ಮಾರಾಟವನ್ನ ನಿಷೇಧಿಸಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲೂ ಈ ಮಹಿಳೆಯರ ತಂಡ ಜಿಲ್ಲೆಯಾದ್ಯಂತ ಮದ್ಯ ನಿಷೇಧ ಆಂದೋಲನ ನಡೆಸ್ತಿದ್ದು ಮೂರು ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು