ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ವಿಶ್ವ ಅಂಗಾಂಗ ದಾನ ದಿನಾಚರಣೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ ಕುಟುಂಬಸ್ಥರನ್ನು ಮುಖ್ಯಮಂತ್ರಿಯವರು ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸತ್ತ ಮೇಲೆ ನಮ್ಮ ದೇಹದಾನದಿಂದ 8 ಜನ ಬದುಕುತ್ತಾರೆ. ಅಷ್ಟೇ ಅಲ್ಲದೆ ಸತ್ತಮೇಲು ಬದುಕಿರುತ್ತೇವೆ. ಹೀಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಮಾಡಿದ್ದೇನೆ ಎಂದರು.
ಮಾನವ ಜನ್ಮ ಶ್ರೇಷ್ಠವಾದದ್ದು. ಅದನ್ನು ಉಳಿಸುವ ಕೆಲಸ ಮಾಡಬೇಕಿದೆ. ಸಾಧಕನಿಗೆ ಸಾವಿಲ್ಲ, ಸಾವಿನ ನಂತರವು ಬದುಕಬಹುದು. ಇದೇ ರೀತಿಯಲ್ಲಿ ಅಂಗಾಂಗ ದಾನದ ಮೂಲಕ ಸತ್ತನಂತರವೂ ಬದುಕಬಹುದು. ಮುಂದಿನ ದಿನಗಳಲ್ಲಿ ಯುವಕರೆಲ್ಲರೂ ಅಂಗಾಂಗ ದಾನಕ್ಕೆ ಮುಂದೆ ಬರಬೇಕಾಗಿದೆ. ರಾಜ್ಯಾದ್ಯಂತ 18 ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಅಂಗಾಂಗ ದಾನ ಮಾಡಲು ಇಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದ ಸಿಎಂ ಬೊಮ್ಮಾಯಿ, ನೀವೆಲ್ಲರೂ ಸಹಿ ಮಾಡಬೇಕು ಎಂದು ವೇದಿಕೆ ಮೇಲೆ ಹಾಜರಿದ್ದ ಗಣ್ಯರಿಗೂ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಪ್ಪು ನೆನೆದ ಸಿಎಂ
ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಿವಂಗತ ನಟ ಪುನೀತ್ ರಾಜ್ಕುಮಾರ್ ಮತ್ತು ಮತ್ತೋರ್ವ ದಿವಂಗತ ನಟ ಸಂಚಾರಿ ವಿಜಯ್ ಅವರನ್ನು ನೆನೆದರು. ಅಲ್ಲದೆ ಪುನೀತ್ ರಾಜಕುಮಾರ್ ಹಾಗೂ ನಟ ಸಂಚಾರಿ ವಿಜಯ್ ಕಣ್ಣು ದಾನ ಮಾಡಿ ಇತರರಿಗೆ ಬೆಳಕಾಗಿದ್ದಾರೆ ಎಂದು ಸ್ಮರಿಸಿದರು.
Published On - 10:41 am, Sat, 13 August 22