ಕಾರು, ಖಾಸಗಿ ಬಸ್​​ ಮುಖಾಮುಖಿ ಢಿಕ್ಕಿ: ಸ್ಥಳದಲ್ಲೇ ಪ್ರಾಣಬಿಟ್ಟ 6 ಮಂದಿ; ಧಗಧಗಿಸಿದ ವಾಹನಗಳು

ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರಿನ ಭಕ್ತರ ಬೊಲೆರೊ ವಾಹನಕ್ಕೆ ಟ್ಯಾಂಕರ್ ಡಿಕ್ಕಿಯಾಗಿ ಎಂಟು ಮಂದಿ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ಕಾರು ಮತ್ತು ಖಾಸಗಿ ಬಸ್​​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವಾಪುರ ಬಳಿ 6 ಜನ ದಾರುಣವಾಗಿ ಮೃತಪಟ್ಟಿದ್ದಾರೆ.

ಕಾರು, ಖಾಸಗಿ ಬಸ್​​ ಮುಖಾಮುಖಿ ಢಿಕ್ಕಿ: ಸ್ಥಳದಲ್ಲೇ ಪ್ರಾಣಬಿಟ್ಟ 6 ಮಂದಿ; ಧಗಧಗಿಸಿದ ವಾಹನಗಳು
ಕಾರು, ಖಾಸಗಿ ಬಸ್​​ ಮುಖಾಮುಖಿ ಢಿಕ್ಕಿ
Image Credit source: Tv9 Kannada
Edited By:

Updated on: Apr 17, 2026 | 1:23 PM

ಯಾದಗಿರಿ, ಏಪ್ರಿಲ್​​ 17: ಕಾರು ಮತ್ತು ಖಾಸಗಿ ಬಸ್​​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವಾಪುರ ಬಳಿ ನಡೆದಿದೆ. ಯಾದಗಿರಿಯಿಂದ ರಾಯಚೂರು ಕಡೆ ಹೊರಟಿದ್ದ ಕಾರು, ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅಪಘಾತದ ತೀವ್ರತೆಗೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಂದು ಅಮವಾಸ್ಯೆ ಹಿನ್ನೆಲೆ ವೇಣುಗೋಪಾಲ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಜವರಾಯನ ಅಟ್ಟಹಾಸಕ್ಕೆ ಕಾರಲ್ಲಿದ್ದ ಕೌನ್ಸಿಲರ್​​ ಕೃಷ್ಣನಾಯಕ್ (50), ಕೃಷ್ಣನಾಯಕ್ ಹೆಂಡತಿ ಅನಂತ್​​ ಕಲಾ (45), ಶರಣಪ್ಪ (36), ಶರಣಪ್ಪ ಹೆಂಡತಿ ನಿಸರ್ಗ (30), ಶರಣಪ್ಪ ಮಗು ಸಿದ್ದಾರ್ಥ್​ (3) ಮತ್ತು ಶಶಿಕಲಾ (30) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಕ್ಕಳ ಪಾಲಿಗೆ ಮೃತ್ಯುಕೂಪವಾದ ಕೃಷಿಹೊಂಡ; ಈಜಲು ಹೋದ ನಾಲ್ವರು ಜಲಸಮಾಧಿ

ಇಬ್ಬರು ಮಕ್ಕಳು ಬದುಕುಳಿದಿದ್ದೇ ಪವಾಡ

ಭೀಕರ ಅಪಘಾತದಲ್ಲಿ ಬಸ್​​ ಮತ್ತು ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರೂ ಪವಾಡ ಎಂಬಂತೆ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಅಥ್ವಿಕ (5) ಮತ್ತು ಒಂದು ವರ್ಷದ ಮಗು ಶ್ರೀನಿಧಿಗೆ ಗಾಯಗಳಾಗಿವೆ.

ಅಪಘಾದ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಯಾದಗಿರಿ ಎಸ್​​ಪಿ ಪೃಥ್ವಿಕ್ ಶಂಕರ್, ಕಾರಿನಲ್ಲಿ ಒಂದೇ ಕುಟುಂಬದ ಎಂಟು ಜನ ಪ್ರಯಾಣಿಸುತ್ತಿದ್ದರು. ಆ ಪೈಕಿ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳಿಗೆ ಗಾಯವಾಗಿದ್ದು, ಅವರನ್ನು ಯಾದಗಿರಿ ಯಿಮ್ಸ್​​ಗೆ ದಾಖಲು ಮಾಡಲಾಗಿದೆ. ದೇವರ ದರ್ಶನ ಮುಗಿಸಿಕೊಂಡು ವಾಪಸ್ ಹೋಗುವಾಗ ಘಟನೆ ನಡೆದಿದ್ದು, ಕಾರು ಓವರ್​​ಟೇಕ್​​ ಮಾಡಲು ಹೋದಾಗ ಅಪಘಾತ ಸಂಭವಿಸಿದೆ. ಕಾರು ಬಸ್​​ಗೆ ಗುದ್ದಿದ ಬಳಿಕ ಸುಮಾರು 50 ಮೀಟರ್​​ ದೂರ ಬಸ್​​ ಕಾರನ್ನು ಎಳೆದುಕೊಂಡು ಹೋಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:33 am, Fri, 17 April 26

Follow Us