ಯಾದಗಿರಿ: ನಾಲ್ಕು ವರ್ಷದ ಹಿಂದೆ ಆ ಪ್ಲೇಸ್ಗೆ ಯಾರು ಹೆಚ್ಚಾಗಿ ಬರ್ತಾನೇ ಇರ್ಲಿಲ್ಲ. ಆದ್ರೆ ಯಾವಾಗ ಆ ಪ್ಲೇಸ್ನಲ್ಲಿ ಕೆರೆ ನಿರ್ಮಾಣವಾಯ್ತೋ ನಿಧಾನವಾಗಿ ಜನ ಕೂಡ ಬರೋಕೆ ಶುರು ಮಾಡಿದ್ರು. ಅಷ್ಟೇ ಯಾಕೆ ಈಗ ಅದೇ ಕೆರೆಯನ್ನ ಹುಡುಕಿ ವಿದೇಶದಿಂದಲೂ ಅತಿಥಿಗಳು ಬರ್ತಿದ್ದಾರೆ.
ತಿಳಿ ನೀರ ಮೇಲೆ ನೇಸರನ ರಂಗು. ಭಾಸ್ಕರನ ರಶ್ಮಿಗೆ ನಗುವರಳಿಸಿ ನಿಂತ ಪುಷ್ಪಗಳ ಸೊಬಗು. ಹಸಿರೆಲೆಗಳ ನಡುವೆ ಸಂಗಾತಿಯ ಜೊತೆಗೂಡಿ ಹಕ್ಕಿಗಳ ಮೋಜು. ನೀರಿನಲ್ಲಿ ಮುಳುಗೆದ್ದು ಖುಷಿಯ ಅಲೆಯಲ್ಲಿ ತೇಲೋ ಬಾನಾಡಿಗಳು. ಮಗದೊಮ್ಮೆ ಮರಗಳ ಮೇಲೆ ಚಿಲಿಪಿಲಿ ನಿನಾದದ ಸೊಗಸು.
ಲುಂಬಿನಿ ವನದ ಕೆರೆಯಲ್ಲಿ ಹಕ್ಕಿಲೋಕದ್ದೇ ನೋಟ:
ನಿಜವಾದ ಸ್ವರ್ಗ ಅಂದ್ರೆ ಏನು ಅಂತಾ ಈ ಪಕ್ಷಿಗಳಿಗೆ ಅರಿವಿದೆ. ಹೀಗಾಗೇ ನಮ್ಮಂತೆ ಜೀವನದ ಜಂಜಾಟ, ಗಲಾಟೆ, ಗದ್ದಲ ಅನ್ನದೆ ತಮ್ಮ ಬದುಕಿನ ಪ್ರತಿಕ್ಷಣವನ್ನೂ ಎಂಜಾಯ್ ಮಾಡ್ತಿವೆ. ಯಾದಗಿರಿ ನಗರದ ಲುಂಬಿನಿ ವನದ ಕೆರೆಯಲ್ಲಿ ಸದ್ಯ ಈ ಹಕ್ಕಿಲೋಕದ್ದೇ ನೋಟ. ನಾಲ್ಕು ವರ್ಷಗಳ ಹಿಂದೆ ನಿರ್ಮಾಣವಾದ ಈ ಲುಂಬಿನಿವನದ ಕೆರೆ ಬಣ್ಣ ಬಣ್ಣ ಪಕ್ಷಿಗಳ ಪ್ರಸಿದ್ಧ ತಾಣವಾಗಿದೆ.
ಸುತ್ತಮುತ್ತ ಹಚ್ಚಹಸಿರಿನ ವಾತಾವರಣ ಇರುವುದರಿಂದ ಹಕ್ಕಿಗಳು ಇಲ್ಲೇ ಆಹಾರವನ್ನ ಸಂಗ್ರಹ ಮಾಡುತ್ತವೆ. ಒಮ್ಮೆ ಹಾರುತ್ತಾ, ಮತ್ತೊಮ್ಮೆ ನೀರಲ್ಲಿ ಆಡ್ತಾ ಮಸ್ತಿ ಮಾಡ್ತಿವೆ. ಹೀಗಾಗೇ ವಾಕಿಂಗ್ ಪ್ರಿಯರು ಅವುಗಳ ಆಟ, ತುಂಟಾಟವನ್ನ ನೋಡ್ತಾ ಹೆಜ್ಜೆ ಹಾಕ್ತಾರೆ.
ವಿದೇಶಿ ಹಕ್ಕಿಗಳ ವಲಸೆ ಜೋರು:
ಇನ್ನು ಈ ಕೆರೆಯಲ್ಲಿ ನವೆಂಬರ್ನಿಂದ ಫೆಬ್ರವರಿವರೆಗೆ ವಿದೇಶಿ ಹಕ್ಕಿಗಳ ವಲಸೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಂದ ವಲಸೆ ಬರುತ್ತವೆ. ಕಾಮನ್ ಕೂಟ್, ಪರ್ಪಲ್ ಮೋರ್, ಹೆನ್ ಸ್ಟ್ರೋಕ್, ಪೈಡ್ ಕಿಂಗ್ ಫಿಶರ್, ಪೊಂಡ್ ಹಿರೊನ್, ಇಗ್ರೇಟ್, ಡಾರ್ಟರ್, ಕರ್ಮೋರಾಂಟ್ಸ್, ವಾಟರ್ ಹೆನ್, ಬ್ಲಾಕ್ ಹೆಡೆಡ್ ಐಬಿಸ್, ಸೇರಿದಂತೆ ನಾನಾ ರೀತಿಯ ಹಕ್ಕಿಗಳು ಇಲ್ಲಿ ಕಾಣ ಸಿಗುತ್ತವೆ. ಬಾನಾಡಿಗಳ ಈ ಅಪರೂಪದ ನೋಟ ನೋಡಲೆಂದೇ ಜನ ಕೂಡ ಹೆಚ್ಚೆಚ್ಚು ಬರ್ತಿದ್ದಾರೆ.
ಬಾನಾಡಿಗಳ ಕಲರ್ಫುಲ್ ಲೋಕ ಸದ್ಯ ಸುತ್ತಮುತ್ತಲ ನಿವಾಸಿಗಳನ್ನ ಸೆಳೆಯುತ್ತಿದೆ. ಜೊತೆಗೆ ಕೆರೆಯ ಅಂದವನ್ನೂ ಹೆಚ್ಚಿಸಿದೆ. ಹೀಗಾಗೇ ವಾಕಿಂಗೂ ಆದಂಗ್ ಆಗುತ್ತೆ, ಹಕ್ಕಿಗಳ ಕಲರವ ಕಂಡಂಗೂ ಆಗುತ್ತೆ ಅಂತಾ ಜನ ಇತ್ತ ಹೆಜ್ಜೆ ಹಾಕ್ತಿದ್ದಾರೆ.