ಯಾದಗಿರಿ: ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು. ಉದ್ಘಾಟನೆಯಾದ ದಿನದಿಂದ ಸಿಕ್ಕಿಲ್ಲ ಹನಿ ಶುದ್ಧ ಕುಡಿಯುವ ನೀರು.ಇಂದಿಗೂ ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ ಗ್ರಾಮೀಣ ಭಾಗದ ಜನ. ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ(Yadgiri) ಜಿಲ್ಲೆಯಲ್ಲಿ, ಹೌದು ಸಿದ್ದರಾಮಯ್ಯ ಹಿಂದೆ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಎಚ್ ಕೆ ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಕೊಡಬೇಕೆಂದು ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪನೆ ಮಾಡಲಾಗಿತ್ತು. ಜಿಲ್ಲೆಯಲ್ಲೂ ಸಹ 400 ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ನಿರ್ಮಾಣ ಮಾಡಲಾಗಿ, ಸರ್ಕಾರದಿಂದ ತಮ್ಮೂರಿಗೆ ಶುದ್ದ ಕುಡಿಯುವ ನೀರು ಸಿಗುತ್ತಿದೆಯೆಂದು ಗ್ರಾಮಸ್ಥರು ಕೂಡ ಖುಷ್ ಆಗಿದ್ರು. ಆದ್ರೆ, ವಿಪರ್ಯಾಸ ಅಂದ್ರೆ, ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳಾಗಿವೆ.
ಹೌದು ಬದಲಿಗೆ ಯಾದಗಿರಿ ಜಿಲ್ಲೆಯ ಬಹುತೇಕ ಹಳ್ಳಿಯ ಜನರಿಗೆ ಈ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಹನಿ ನೀರು ಸಿಕ್ಕಿಲ್ಲ. ಸರ್ಕಾರ ಕಳೆದ ಏಳೆಂಟು ವರ್ಷಗಳ ಹಿಂದೆ ಕೋಟ್ಯಾಂತರ ರೂ. ಖರ್ಚು ಮಾಡಿ ಪ್ರತಿಯೊಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪನೆ ಮಾಡಿದೆ. ಆದ್ರೆ, ಹಿಂದೆ ತರಾತುರಿಯಲ್ಲಿ ಹೆಸರಿಗೆ ಮಾತ್ರ ಉದ್ಘಾಟನೆ ಮಾಡಿ ಕೈ ತೊಳೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 417 ಶುದ್ಧ ಕುಡಿಯುವ ನೀರಿನ ಘಟಕಗಳನ್ನ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಸುಮಾರು 150 ಕ್ಕೂ ಅಧಿಕ ಘಟಕಗಳಿಂದ ಜನರಿಗೆ ಹನಿ ನೀರು ಸಿಕ್ಕಿಲ್ಲ. ಇದೆ ಕಾರಣಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯನವರೆ ಸಿಎಂ ಆಗಿದ್ದರಿಂದ ಹಾಳಾದ, ಚಾಲನೆ ಸಿಗದ ಘಟಕಗಳಿಗೆ ಚಾಲನೆ ನೀಡಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಜನ ಒತ್ತಾಯಿಸುತ್ತಿದ್ದಾರೆ.
ಇನ್ನು ಆಗಿನ ಸರ್ಕಾರ ಜಿಲ್ಲೆಯಲ್ಲಿ ಸುಮಾರು 417 ಘಟಕಗಳನ್ನ ಸ್ಥಾಪನೆ ಮಾಡಿದೆ. ಇದಕ್ಕೆ ಕೋಟ್ಯಾಂತರ ರೂ. ಕೂಡ ಖರ್ಚು ಮಾಡಿದೆ. ಆದ್ರೆ, ಇದರ ನಿರ್ವಹಣೆಯನ್ನ ಖಾಸಗಿ ಏಜೆನ್ಸಿಗೆ ಕೊಟ್ಟಿದೆ. ನಿರ್ವಹಣೆಯ ಗುತ್ತಿಗೆ ಪಡೆದ ಏಜೆನ್ಸಿ ಘಟಕಗಳನ್ನ ನಿರ್ವಹಣೆಯನ್ನ ಮಾಡದೆ ನಿರ್ಲಕ್ಷ್ಯವಹಿಸಿದೆ. ಇದಕ್ಕೆ ಸರ್ಕಾರ ಸರಿಯಾಗಿ ಹಣ ಕೂಡ ಬಿಡುಗಡೆ ಮಾಡಿಲ್ಲ. ಅದಕ್ಕೆ ನಿರ್ವಹಣೆ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ, ಸರ್ಕಾರ ಮತ್ತು ನಿರ್ವಹಣಾ ಏಜೆನ್ಸಿ ಮದ್ಯದ ಗುದ್ದಾಟದಿಂದ ಜನರಿಗೆ ಮಾತ್ರ ಅಶುದ್ಧ ನೀರೆ ಗತಿಯಾಗಿದೆ.
ಜಿಲ್ಲೆಯಲ್ಲಿ ನಿರ್ಮಾಣ ಮಾಡಿರುವ ಸುಮಾರು 28 ಘಟಕಗಳನ್ನ ಆರಂಭ ಮಾಡುವ ಕೆಲಸಕ್ಕೆ ಅಧಿಕಾರಿಗಳು ಹೋಗಿಲ್ಲ. ಹೆಸರಿಗೆ ಮಾತ್ರ ಉದ್ಘಾಟನೆ ಮಾಡಿ ಕೈತೊಳೆದುಕೊಂಡಿದ್ದಾರೆ. ಜನರಿಗೆ ನಿಮ್ಮೂರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನ ನೀಡಿದ್ದೆವೆ ಅಂತ ಹೇಳಲು ಮಾತ್ರ ಈ ಘಟಕಗಳನ್ನ ಸ್ಥಾಪನೆ ಮಾಡಲಾಗಿದೆ. ಇನ್ನು 87 ಘಟಕಗಳು ಆರಂಭದ ದಿನಗಳಲ್ಲಿ ಕೆಲ ದಿನಗಳ ಕಾಲ ರನ್ ಆಗುತ್ತಿದ್ದು, ಜನರು ಕೂಡ ಈ ಘಟಕಗಳಿಂದ ಶುದ್ಧ ನೀರು ಬಳಕೆ ಮಾಡುತ್ತಿದ್ರು. ಆದ್ರೆ, ಕೆಲ ದಿನಗಳ ಬಳಿಕ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗಿವೆ. ಒಟ್ಟಿನಲ್ಲಿ ಗ್ರಾಮೀಣ ಭಾಗದ ಜನ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ ಮೇಲೆ ಕಲುಷಿತ ನೀರು ಕುಡಿಯೋದು ತಪ್ಪುತ್ತೆ ಎಂದು ಅಂದುಕೊಂಡಿದ್ರು. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇರೋ ಘಟಕಗಳು ಹಾಳಾಗಿ ಹೋಗಿದ್ದು, ಜನ ಶುದ್ಧ ಕುಡಿಯುವ ನೀರಿನ ಭರವಸೆಯನ್ನ ಕೈ ಬಿಟ್ಟಂತಾಗಿದೆ.
ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ