
ಯಾದಗಿರಿ, ಸೆಪ್ಟೆಂಬರ್ 26: ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕುಡುಗೋಲಿನಿಂದ ಕೊಚ್ಚಿ ತಂದೆಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿ (Yadgir) ತಾಲೂಕಿನ ದುಗನೂರು ಕ್ಯಾಂಪ್ ನಲ್ಲಿ ನಡೆದಿದೆ. ಭಾರ್ಗವ್ (3) ಮತ್ತು ಸಾನ್ವಿ (5) ಮೃತ ಮಕ್ಕಳಾಗಿದ್ದು, ಮತ್ತೋರ್ವ ಬಾಲಕ ಹೇಮಂತ್ (8) ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಬಳಿಕ ಆರೋಪಿ ಶರಣಪ್ಪ ಪರಾರಿಯಾಗಿದ್ದು, ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ರಾತ್ರಿ ಕುಟುಂಬದ ಜೊತೆ ಕೂತು ಒಟ್ಟಿಗೆ ಊಟ ಮಾಡಿದ್ದ ಶರಣಪ್ಪ, ಪತ್ನಿ ಮತ್ತು ಮಕ್ಕಳ ಜೊತೆಗೇ ಮಲಗಿದ್ದ. ಬೆಳಗ್ಗೆ ಪತ್ನಿ ಜಯಮ್ಮ ಮತ್ತು ಆತನ ತಾಯಿ ಭೀಮವ್ವ ಬಹಿರ್ದೆಸೆಗೆ ಹೋದ ವೇಳೆ ಮನೆಯಲ್ಲಿದ್ದ ಕುಡುಗೋಲು ಬಳಸಿ ಶರಣಪ್ಪ ಮೂವವರು ಮಕ್ಕಳ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಇಬ್ಬರು ಮೃತ ಪಟ್ಟಿದ್ದಾರೆ. ಹಿರಿಯ ಮಗ ಹೇಮಂತ್ ಬೆನ್ನಿಗೆ ಗಾಯವಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಹೇಮಂತನಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಹತ್ತು ವರ್ಷಗಳ ಹಿಂದೆ ಜಯಮ್ಮಳ ಜೊತೆ ಶರಣಪ್ಪ ಮದುವೆ ಆಗಿದ್ದ. ಆರಂಭದ ವರ್ಷಗಳಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯೆಂಬಂತೆ ಮೂರು ಜನ ಮುದ್ದಾದ ಮಕ್ಕಳೂ ಇದ್ದರು. ಆದರೆ ಕಳೆದ ಎರಡು ವರ್ಷಗಳಿಂದ ವಿಪರೀತವಾಗಿ ಪತ್ನಿಯ ಶೀಲ ಶಂಕಿಸುತ್ತಿದ್ದ ಶರಣಪ್ಪ, ಜಯಮ್ಮ ಯಾರ ಜೊತೆಗೆ ಮಾತಾಡಿದ್ರೂ ಅನುಮಾನ ಪಡುತ್ತಿದ್ದ. ಇರುವ ಮೂವರು ಮಕ್ಕಳು ತನಗೆ ಹುಟ್ಟಿಲ್ಲ ಎನ್ನುತ್ತಿದ್ದ. ಇದೇ ಕಾರಣಕ್ಕೆ ಜೀವ ಭಯದಿಂದ ಎರಡು ವರ್ಷಗಳ ಹಿಂದೆ ಮಕ್ಕಳ ಜೊತೆ ಜಯಮ್ಮ ತವರು ಸೇರಿದ್ದರು. ರಾಜಿ ಪಂಚಾಯತಿ ಬಳಿಕ ಕಳೆದ 15 ದಿನಗಳ ಹಿಂದೆಯಷ್ಟೇ ಪತಿ ಮನೆಗೆ ವಾಪಸ್ ಬಂದಿದ್ದರು.
ಇದನ್ನೂ ಓದಿ: ರಕ್ಷಣೆಗಾಗಿ ಯಾರ ಕೂಗಲಿ: ತಂಗಿ ಮೇಲೆ ಅತ್ಯಾಚಾರವೆಸಗಿ, ಬ್ಲ್ಯಾಕ್ಮೇಲ್ ಮಾಡಿದ ಸ್ವಂತ ಅಣ್ಣಂದಿರು
ಇಬ್ಬರು ಮಕ್ಕಳನ್ನ ಕಳೆದುಕೊಂಡಿರುವ ತಾಯಿ ಜಯಮ್ಮ ರೋದನೆ ಮುಗಿಲು ಮುಟ್ಟಿದ್ದರೆ, ಪಾಪಿ ಶರಣಪ್ಪನೇ ಕೊಲೆ ಮಾಡಿ ಓಡಿ ಹೋಗಿದ್ದಾನೆ ಅವನು ಸಿಕ್ರೆ ಅಲ್ಲೇ ಸಾಯಿಸಬೇಕು ಅಂತ ಆರೋಪಿಯ ತಾಯಿ ಭೀಮವ್ವ ಕಣ್ಣೀರು ಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರೂ ಆಗಮಿಸಿದ್ದು, ಮನೆಯಲ್ಲಿ ನಿರವ ಮೌನ ಆವರಿಸಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಶರಣಪ್ಪನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ತಂಡ ರಚಿಸಿ ಹುಡುಕಾಟ ನಡೆಸಲಾಗ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:38 pm, Fri, 26 September 25