ಯಾದಗಿರಿ, ಡಿ.18: ಜಿಲ್ಲೆಯ (Yadgir) ಸುರಪುರ ತಾಲೂಕಿನ ದೇವಿಕೇರಾ ಜಾತ್ರೆ (Devikera fair) ಇಂದು ರಾತ್ರಿಯಿಂದ ಆರಂಭಗೊಳ್ಳಲಿದೆ. ಈ ಜಾತ್ರೆಯಲ್ಲಿ ಕೋಣಗಳನ್ನು ಬಲಿ ಕೊಡುವ ಹಾಗೂ ಅದರ ಮಾಂಸವನ್ನು ದಲಿತರಿಗೆ ತಿನ್ನಬೇಕು, ಇಲ್ಲವಾದರೆ ಬಹಿಷ್ಕಾರ ಹಾಕುವ ಅನಿಷ್ಟ ಪದ್ಧತೆ ಚಾಲ್ತಿಯಲ್ಲಿದ್ದು, ಇದನ್ನು ವಿರೋಧಿಸಿ ದಲಿತ ಸಮುದಾಯವು ದೂರು ನೀಡಿತ್ತು. ಅದರಂತೆ, ಜಾತ್ರೆಯಲ್ಲಿ ಕೋಣಗಳ ಬಲಿ ತಡೆಯಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ದೇವಿಕೇರ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರೆ ಇಂದು ರಾತ್ರಿ ಮತ್ತು ನಾಳೆ ನಡೆಯಲಿದೆ. ಕೋಣಗಳನ್ನು ಬಲಿ ಕೊಡುವ ಸಾಧ್ಯತೆ ಹಿನ್ನೆಲೆ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಕೋಣಗಳ ಬಲಿ ಕೊಡದಂತೆ ಗ್ರಾಮದಲ್ಲಿ 80 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ದೇವಿಕೇರಾ ಜಾತ್ರೆ: ಕೋಣಗಳ ಬಲಿ ಹೆಸರಲ್ಲಿ ಚಂದಾ ವಸೂಲಿ
ದೇವಸ್ಥಾನ ಸೇರಿದಂತೆ ವಿವಿಧ ಕಡೆ ಬಂದೋಬಸ್ತ್ಗಾಗಿ ಯಾದಗಿರಿ ಎಸ್ಪಿ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ. ದಲಿತ ಸಮುದಾಯದ ದೂರಿನ ಅನ್ವಯ ನಿನ್ನೆ ಸುರಪುರ ತಹಶೀಲ್ದಾರ್ ವಿಜಯ ಕುಮಾರ್ ಗ್ರಾಮಕ್ಕೆ ಹೋಗಿ ಶಾಂತಿ ಸಭೆ ನಡೆಸಿದ್ದರು.
ದೇವಿಕೇರಾ ಗ್ರಾಮದಲ್ಲಿ ನಡೆಯುವ ದ್ಯಾಮವ್ವ, ಮರೆಮ್ಮ, ಪಾಲ್ಕಮ್ಮ ಗ್ರಾಮದೇವತೆಗಳ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ಬಲಿ ಕೊಡಲಾಗುತ್ತದೆ. ಬಲಿಕೊಟ್ಟ ಕೋಣಗಳ ಮಾಂಸವನ್ನು ದಲಿತರು ತಿನ್ನಬೇಕು, ಇಲ್ಲವಾದರೆ ಅಂತಹವರನ್ನು ಗ್ರಾಮದಿಂದ ಬಹಿಷ್ಕಾರ ಹಾಕಲಾಗುತ್ತದೆ. ಇದರ ವಿರುದ್ಧ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಜಿಲ್ಲಾಧಿಕಾರಿ, ಎಸ್ಪಿಗೆ ದೂರು ನೀಡಿ ಮೂಢನಂಬಿಕೆ ತಡೆಯುವಂತೆ ಒತ್ತಾಯಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ