ಯಾದಗಿರಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಬ್ರಾಹಿಮಪುರ ಗ್ರಾಮದಲ್ಲಿ ಭವ್ಯವಾದ ಸಾಯಿಬಾಬ ಮಂದಿರವನ್ನ ನಿರ್ಮಾಣ ಮಾಡಲಾಗಿದೆ. ಕೆಲ ವರ್ಷಗಳ ಹಿಂದೆ ಗ್ರಾಮದ ಮಹಾರಾಜ್ ದಿಗ್ಗಿ ಎಂಬವರ ಕನಸಿನಲ್ಲಿ ಸಾಯಿ ಬಾಬ ಬಂದಿದ್ರಂತೆ. ಇದೆ ಕಾರಣಕ್ಕೆ ಗ್ರಾಮದಲ್ಲಿ ಮುಂದೊಂದು ದಿನ ಭವ್ಯವಾದ ಮಂದಿರವನ್ನ ನಿರ್ಮಾಣ ಮಾಡಬೇಕು ಎಂದು ಮಹಾರಾಜ್ ಕನಸು ಕಂಡಿದ್ದರು. ಹೀಗಾಗಿ ಇವತ್ತು 9 ವರ್ಷಗಳ ಬಳಿಕ ಒಂದುವರೆ ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡಿ ದೇವಸ್ಥಾನವನ್ನ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಇದೇ ದೇವಸ್ಥಾನವನ್ನ ಇಂದು(ಜ.26) ಲೋಕಾರ್ಪಣೆಯನ್ನ ಮಾಡಲಾಗಿತ್ತು. ಇದರ ಜೊತೆಗೆ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದ್ದು, ಜಿಲ್ಲೆಯ ನಾನಾ ಭಾಗದಿಂದ 51 ಜೋಡಿಗಳು ಬಂದು ಹೊಸ ಜೀವನಕ್ಕೆ ಕಾಲಿಟ್ಟಿತು.
ಇವತ್ತಿನ ದಿನದಲ್ಲಿ ಬಡವರ ಮನೆಯ ಮದುವೆಯಲ್ಲೂ ಕೂಡ ಕಡಿಮೆಯೆಂದರು 3 ರಿಂದ 4 ಲಕ್ಷ ಹಣ ಖರ್ಚು ಆಗೋದು ಕಾಮನ್ ಆಗಿದೆ. ಇಷ್ಟು ಹಣವನ್ನ ಖರ್ಚು ಮಾಡದೆ ಇದ್ರೆ ಮದುವೆನೆ ಆಗಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದೆ ಕಾರಣಕ್ಕೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ದೇವಸ್ಥಾನ ಉದ್ಘಾಟನೆ ದಿನ ಸಾಯಿ ಮಂದಿರದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯವನ್ನ ಮಹಾರಾಜ್ ದಿಗ್ಗಿ ಅವರು ನೆರವೇರಿಸಿದ್ದಾರೆ. 51 ಜೋಡಿಗಳಿಗೆ ಹೊಸ ಬಟ್ಟೆ, ಕಾಲುಂಗುರ, ಕೈಬಳೆ, ಕುಂಕುಮ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನ ಉಚಿತವಾಗಿ ಮಾಡಲಾಗಿತ್ತು.
ಇನ್ನು ವಿವಿಧ ಮಠದ ಸ್ವಾಮೀಜಿಗಳು ಹಾಗೂ ವಿವಿಧ ಪಕ್ಷದ ಮುಖಂಡರ ಸಮ್ಮುಖದಲ್ಲಿ ಜೋಡಿಗಳಿಗೆ ಮಾಂಗಲ್ಯವನ್ನ ನೀಡಿ ಅಕ್ಷತೆ ಹಾಕುವ ಮೂಲಕ ಮದುವೆಯನ್ನ ಮಾಡಿಸಿದ್ದಾರೆ. ಇನ್ನು ಜೋಡಿಗಳ ಜೊತೆಗೆ ಬಂದಿದ್ದ ಸಂಬಂಧಿಕರು, ಮನೆಯವರಿಗೆ ಭರ್ಜರಿಯಾಗಿ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪ್ರತಿ ಒಂದು ವಸ್ತುವಿನಿಂದ ಹಿಡಿದು ಊಟದವರೆಗೆ ಉಚಿತವಾಗಿ ಆಯೋಜನೆ ಮಾಡಲಾಗಿತ್ತು. ದೇವಸ್ಥಾನ ಕಟ್ಟಬೇಕು, ಸಾಯಿ ಬಾಬನ ಬಗ್ಗೆ ಈ ಭಾಗದ ಜನರಿಗೆ ಪರಿಚಯ ಮಾಡಿಕೊಡಬೇಕು ಎನ್ನುವ ಕನಸು ಬಹುದಿನಗಳಿಂದ ಇತ್ತು. ಹೀಗಾಗಿ ಇವತ್ತು ದೇವಸ್ಥಾನವನ್ನ ಲೋಕಾರ್ಪಣೆ ಮಾಡಲಾಗಿದೆ ಜೊತೆಗೆ ಇದೇ ವೇಳೆ ಸಾಮೂಹಿಕ ವಿವಾಹವನ್ನ ಮಾಡಿಸಲಾಗಿದೆ ಎಂದು ಮಹಾರಾಜ್ ದಿಗ್ಗಿ ಅವರು ಹೇಳುತ್ತಾರೆ.
ಇದನ್ನೂ ಓದಿ:SimhaPriya Wedding: ‘ಈ ಥರ ಮದುವೆ ಆದ್ರೆ ಖುಷಿ’: ಸಿಂಹಪ್ರಿಯಾ ವಿವಾಹಕ್ಕೆ ಡಾಲಿ ಜತೆ ಬಂದ ಅಮೃತಾ ಹೇಳಿಕೆ
ಒಟ್ಟಿನಲ್ಲಿ ಆಡಂಬರದಿಂದ ಮದುವೆ ಮಾಡಿಕೊಳ್ಳುವ ಈ ಕಾಲದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎನ್ನುವ ಕಾರಣಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನ ಮಾಡಲಾಗಿದ್ದು, ದೇವಸ್ಥಾನ ಹೆಸರಲ್ಲಿ ಸಮಾಜಿಕ ಕಾರ್ಯ ಮಾಡುತ್ತಿರುವುದು ನೀಜಕ್ಕೂ ಒಳ್ಳೆಯ ವಿಚಾರವಾಗಿದೆ.
ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ