
ಯಾದಗಿರಿ, ನ.10: ದೀಪಾವಳಿ ಎಂದರೆ ಕೇವಲ ಪಟಾಕಿಗಳ ಅಬ್ಬರ ಮತ್ತು ದೀಪಗಳ ಸಾಲಷ್ಟೇ ಅಲ್ಲ; ಅದರ ಆಚೆಯೂ ಭಾರತದ ಸಂಸ್ಕೃತಿಯಲ್ಲಿ ಅಪರೂಪದ ಹಾಗೂ ಜಾನಪದ ಸೊಗಡಿನ ಆಚರಣೆಗಳಿವೆ. ಇದಕ್ಕೆ ಸಾಕ್ಷಿಯಾಗಿ ಗಿರಿನಾಡು ಯಾದಗಿರಿ ಜಿಲ್ಲೆಯ ಬಂಜಾರ ಸಮುದಾಯದ ಜನರು ಈ ಬಾರಿಯ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮ ಹಾಗೂ ವಿಶಿಷ್ಟ ಸಂಪ್ರದಾಯದೊಂದಿಗೆ ಆಚರಿಸಿ ಗಮನ ಸೆಳೆದಿದ್ದಾರೆ. ಬಂಜಾರ ಸಮುದಾಯದಲ್ಲಿ ದೀಪಾವಳಿಯನ್ನು ಮುಖ್ಯವಾಗಿ ‘ಯುವತಿಯರ ಹಬ್ಬ’ ಎಂದೇ ಕರೆಯಲಾಗುತ್ತದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಳ್ಳಿ ತಾಂಡಾ ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಈ ಸಂಪ್ರದಾಯದ ರಂಗು ಕಳೆಗಟ್ಟಿದೆ.

ದೀಪಾವಳಿಯ ದಿನ ಬಂಜಾರ ಸಮುದಾಯದ ಯುವತಿಯರು ಹಾಗೂ ಮಹಿಳೆಯರು ಮುಂಜಾನೆಯೇ ತಾಂಡಾದಿಂದ ದೂರವಿರುವ ಬೆಟ್ಟ-ಗುಡ್ಡಗಳಿಗೆ ತೆರಳಿ ಕಾಡು ಜಾತಿಯ ವಿವಿಧ ಬಗೆಯ ನೈಸರ್ಗಿಕ ಹೂವುಗಳನ್ನು ಹುಡುಕಿ ಸಂಗ್ರಹಿಸಿಕೊಂಡು ಬರುತ್ತಾರೆ. ತಂದ ಹೂವುಗಳನ್ನು ದೇವರಿಗೆ ಅರ್ಪಿಸಿದ ಬಳಿಕ, ತಾಂಡಾದ ಹಿರಿಯರು ಹಾಗೂ ‘ನಾಯಕ’ನಿಗೆ ನೀಡಿ ಹಬ್ಬದ ಶುಭಾಶಯ ಕೋರಿ ಆಶೀರ್ವಾದ ಪಡೆಯುತ್ತಾರೆ. ತಾಂಡಾದಲ್ಲಿ ದೀಪಾವಳಿ ಆಚರಣೆ ಆರಂಭವಾಗಬೇಕಾದರೆ ತಾಂಡಾದ ನಾಯಕನ ಅನುಮತಿ ಪಡೆಯುವುದು ಕಡ್ಡಾಯ. “ಈ ಬಾರಿ ಎಲ್ಲರಿಗೂ ಒಳ್ಳೆಯದಾಗಲಿದೆ, ಸಂಭ್ರಮದಿಂದ ಆಚರಿಸಿ” ಎಂದು ನಾಯಕ ಸಮ್ಮತಿ ಸೂಚಿಸಿದ ಮೇಲೆಯೇ ಇಡೀ ತಾಂಡಾದ ಜನತೆ ಸಂಭ್ರಮದಲ್ಲಿ ಮುಳುಗುತ್ತಾರೆ.
ಈ ಹಬ್ಬದ ಆಚರಣೆಯಲ್ಲಿ ಒಂದು ಭಾವುಕ ಕ್ಷಣವೂ ಅಡಗಿದೆ. ಬರುವ ಬೇಸಿಗೆಯ ಹೊತ್ತಿಗೆ ಮದುವೆಯಾಗಲಿರುವ ಯುವತಿಯರು ಈ ದೀಪಾವಳಿ ಆಚರಣೆಯ ವೇಳೆ ತೀವ್ರ ದುಃಖದಿಂದ ಕಣ್ಣೀರಿಡುತ್ತಾರೆ. “ಮುಂದಿನ ವರ್ಷ ನಾವು ಮದುವೆಯಾಗಿ ಬೇರೆ ಮನೆಗೆ ಹೋಗುವುದರಿಂದ, ನಮ್ಮ ಸ್ವಂತ ತಾಂಡಾದಲ್ಲಿ ಮತ್ತೆ ಈ ರೀತಿ ದೀಪಾವಳಿ ಆಚರಿಸಲು ಸಾಧ್ಯವಾಗುವುದಿಲ್ಲವಲ್ಲ” ಎಂಬ ಸವಿ ನೆನಪಿನ ಭಾವನಾತ್ಮಕ ನೋವು ಅವರ ಕಣ್ಣೀರಿಗೆ ಕಾರಣವಾಗಿರುತ್ತದೆ.

ಆಧುನಿಕ ಭರಾಟೆಯಲ್ಲಿ ಅನೇಕ ಜಾನಪದ ಕಲೆಗಳು ಮರೆಯಾಗುತ್ತಿರುವ ಈ ಕಾಲದಲ್ಲೂ, ಬಂಜಾರ ಸಮುದಾಯ ತಮ್ಮ ಪರಂಪರೆಯನ್ನು ಜೀವಂತವಾಗಿರಿಸಿದೆ. ದೀಪಾವಳಿ ಆರಂಭಕ್ಕೂ 15 ದಿನಗಳ ಮುಂಚಿನಿಂದಲೇ ಯುವತಿಯರು ಸಾಂಪ್ರದಾಯಿಕ ವರ್ಣರಂಜಿತ ಉಡುಪುಗಳನ್ನು ಧರಿಸಿ ದೇವಸ್ಥಾನದ ಮುಂದೆ ವಾದ್ಯಗೋಷ್ಠಿಯ ತಾಳಕ್ಕೆ ತಕ್ಕಂತೆ ಜಾನಪದ ನೃತ್ಯಗಳನ್ನು ಮಾಡುತ್ತಾರೆ. ದೀಪಾವಳಿಯ ಮುಖ್ಯ ದಿನದಂದು ತಾಂಡಾದ ಪ್ರತಿಯೊಂದು ಮನೆಗೂ ತೆರಳಿ ದೀಪಗಳನ್ನು ಬೆಳಗಿಸುವ ಮೂಲಕ ಬೆಳಕಿನ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತಾರೆ. ತಾಂಡಾದ ಯುವತಿಯರಾದ ಲಕ್ಷ್ಮಿ ಹಾಗೂ ಮಹಾಲಕ್ಷ್ಮಿ ತಿಳಿಸಿರುವಂತೆ, ಈ ಅಪರೂಪದ ಪರಂಪರೆಯನ್ನು ಇಂದಿಗೂ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಅತ್ಯಂತ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ