
ಯಾದಗಿರಿ, ಡಿಸೆಂಬರ್ 18: ಕೃಷ್ಣಾ ನದಿ ಯಾದಗಿರಿ (Yadgiri) ಜಿಲ್ಲೆಯ ಜನರ ಜೀವನಾಡಿ. ಈ ವರ್ಷ ಅತಿಯಾದ ಮಳೆಯಿಂದಾಗಿ ನದಿ ಮೈದುಂಬಿಕೊಂಡಿದೆ. ಇದರ ಜೊತೆಗೆ ಸಾಕಷ್ಟು ಮರಳು (sand) ಕೂಡ ಸಂಗ್ರಹವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ನದಿಯ ಒಡಲು ಬಗೆದು ಕೋಟ್ಯಂತರ ರೂ. ಮೌಲ್ಯದ ಮರಳು ಲೂಟಿ ಮಾಡುತ್ತಿದ್ದಾರೆ. ಕೊನೆಗೂ ಅಧಿಕಾರಿಗಳು ಧೈರ್ಯ ಮಾಡಿ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣ ನದಿ ತೀರದಲ್ಲಿ ಮರಳು ದಂಧೆ ಜೋರಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಮತ್ತು ಭೀಮಾ ನದಿ ತೀರದಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ನದಿಗೆ ಜೆಸಿಬಿ ಹಾಗೂ ಹಿಟಾಚಿಗಳನ್ನ ಇಳಿಸಿ ಅಕ್ರಮವಾಗಿ ಮರಳನ್ನ ಲೂಟಿ ಮಾಡಲಾಗುತ್ತಿದೆ. ಅದರಲ್ಲೂ ಕೃಷ್ಣಾ ನದಿಯಲ್ಲಂತೂ ಅಕ್ರಮ ದಂಧೆಕೋರರು ಹಗಲು ರಾತ್ರಿಯನ್ನೆದೇ ಮರಳನ್ನ ಲೂಟಿ ಮಾಡುತ್ತಿದ್ದಾರೆ.
ಸುರಪುರ ತಾಲೂಕಿನ ಶೆಳ್ಳಗಿ, ಮುಷ್ಟಳ್ಳಿ, ಸೂಗೂರು ಹಾಗೂ ಹೆಮ್ಮಡಗಿ ಬಳಿಯಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ. ಸರ್ಕಾರದಿಂದ ಯಾವುದೇ ಅಧಿಕೃತ ಟೆಂಡರ್ ಕರೆದು ಪಾಯಿಂಟ್ ಗುರುತು ಮಾಡದೆ ಇದ್ದರೂ ಸಹ ಮರಳು ದಂಧೆಕೋರರು ಅಕ್ರಮವಾಗಿ ಮರಳನ್ನ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಮರಳನ್ನು ರಾಜಾರೋಷವಾಗಿ ಲೂಟಿ ಮಾಡುವ ಕೆಲಸವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಜನರು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ ಇದೀಗ ಅಧಿಕಾರಿಗಳು ಮರಳು ದಂಧೆಕೋರರ ವಿರುದ್ಧ ಸಮರ ಸಾರಿದ್ದಾರೆ. ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದ ಸ್ಥಳಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಕುಡಿಯೋಕಷ್ಟೇ ಅಲ್ಲ, ಸ್ನಾನಕ್ಕೂ ಯೋಗ್ಯವಲ್ಲ ಭೀಮಾ ನದಿ ನೀರು!
ಸುರಪುರ ತಾಲೂಕಿನ ಶೆಳ್ಳಗಿ, ಮುಷ್ಟಳ್ಳಿ, ಸೂಗೂರು ಹಾಗೂ ಹೆಮ್ಮಡಗಿ ಬಳಿ ಪೊಲೀಸರ ಸಹಕಾರದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ ವಾರ ದಾಳಿ ಮಾಡಿದ್ದ ಅಧಿಕಾರಿಗಳು ಅಕ್ರಮ ಮರಳು ಸಂಗ್ರಹ ಕಂಡು ಶಾಕ್ ಆಗಿದ್ದಾರೆ. ಏಕೆಂದರೆ ಲೆಕ್ಕಕ್ಕೆ ಸಿಗದಷ್ಟು ಮರಳನ್ನ ನದಿಯಿಂದ ಬಗೆದು ಸಂಗ್ರಹಿಸಿಡಲಾಗಿತ್ತು. ಸದ್ಯ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿ ಲೆಕ್ಕ ಮಾಡಿದಾಗ ಮೂರು ಕಡೆ ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮರಳು ಸಿಕ್ಕಿದೆ. ಸುಮಾರು 67 ಸಾವಿರ ಮೆಟ್ರಿಕ್ ಟನ್ ಮರಳು, ಬಳಕೆ ಮಾಡಿದ ಸುಮಾರು 20 ಹಿಟಾಚಿ ವಾಹನಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳ ಬಿದ್ದಿರೋ ಅಕ್ಕಿ ಬೇಳೆ; TV9 ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಅಸಲಿಯತ್ತು
ಸುರಪುರ ಪೊಲೀಸ್ ಠಾಣೆಯಲ್ಲಿ 16 ಜನರ ವಿರುದ್ಧ ಮೂರು ಪ್ರತ್ಯೇಕ ಕೇಸ್ ದಾಖಲು ಮಾಡಿದ್ದಾರೆ. ಇನ್ನು ಅಧಿಕಾರಿಗಳಿಗೆ ಸಾಕಷ್ಟು ಕಡೆಗಳಿಂದ ಕರೆಗಳು ಬರುತ್ತಿದ್ದು, ವಾಹನಗಳನ್ನ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಿದೆ. ಆದರೆ ಅಧಿಕಾರಿಗಳು ಮಾತ್ರ ಯಾವುದಕ್ಕೆ ತಲೆ ಕೆಡಿಸಿಕೊಳ್ಳದೆ ವಾಹನಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.