ಯಾದಗಿರಿ: ಸ್ಕೂಲ್​ಗೆ ಚಕ್ಕರ್ ಹೊಡೆದು ಕೂಲಿಗೆ ಹಾಜರಾಗುತ್ತಿರುವ ಮಕ್ಕಳು

| Updated By: Rakesh Nayak Manchi

Updated on: Nov 12, 2022 | 10:36 AM

ಬಗಲಿಗೆ ಬ್ಯಾಗ್ ಹಾಕಿಕೊಂಡು ಶಾಲೆಗೆ ಹೋಗುವ ಬದಲು ಹಣ ಸಂಪಾದಿಸಲು ಶಾಲೆಗೆ ರಜೆ ಹಾಕಿ ಕೆಲಸಕ್ಕೆ ಹೋಗುತ್ತಿರುವುದು ಕಂಡುಬರುತ್ತಿದೆ. ದಸರಾ ಹಾಗೂ ದೀಪಾವಳಿ ರಜೆ ಮುಗಿದರೂ ಮಕ್ಕಳು ಶಾಲೆಗೆ ಹೋಗದೆ ಕೆಲಸಕ್ಕೆ ಹೋಗುತ್ತಿದ್ದಾರೆ.

ಯಾದಗಿರಿ: ಸ್ಕೂಲ್​ಗೆ ಚಕ್ಕರ್ ಹೊಡೆದು ಕೂಲಿಗೆ ಹಾಜರಾಗುತ್ತಿರುವ ಮಕ್ಕಳು
ಯಾದಗಿರಿ: ಕಾಸು ಸಂಪಾದಿಸಲು ಶಾಲೆಗೆ ರಜೆ ಹಾಕಿ ಕೆಲಸಕ್ಕೆ ಹೋಗುವ ಮಕ್ಕಳು
Follow us on

ಯಾದಗಿರಿ: ಜಿಲ್ಲೆಯ ರೈತರು ಈ ಬಾರಿ ಭರ್ಜರಿಯಾಗಿ ಹತ್ತಿ ಬೆಳೆಯನ್ನ ಬೆಳೆದಿದ್ದಾರೆ. ಮಳೆ ಬಂದು ಸ್ವಲ್ಪ ಬೆಳೆ ಹಾಳಾದರೂ ಸಹ ಇಳುವರಿ ಚೆನ್ನಾಗಿ ಬರುತ್ತಿದೆ. ಸದ್ಯ ಜಿಲ್ಲೆಯಲ್ಲಿ ಹತ್ತಿ ಬಿಡಿಸುವ ಸೀಜನ್ ಆರಂಭವಾಗಿದೆ. ಹೀಗಾಗಿ ನೂರಾರು ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಂತಾಗಿದೆ. ಆದರೆ ಕುಟುಂಬದ ಹಿರಿಯರು ಹೋಗಿ ಕೂಲಿ ಕೆಲಸ ಮಾಡುವ ಬದಲು ಮಕ್ಕಳನ್ನೂ ಕರೆದುಕೊಂಡು ಹೋಗಿ ಕೂಲಿ ಕೆಲಸಕ್ಕೆ ಹಚ್ಚುತ್ತಿದ್ದಾರೆ. ವಡಗೇರ ತಾಲೂಕಿನ ಬಹುತೇಕ ಹಳ್ಳಿಗಳ ರೈತರ ಜಮೀನಿನಲ್ಲಿ ಶಾಲಾ ಮಕ್ಕಳೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಯಾವ ಜಮೀನು ನೋಡಿದರೂ ಒಂದಿಬ್ಬರು ಶಾಲಾ ಮಕ್ಕಳು ಹತ್ತಿ ಬಿಡಿಸುವುದನ್ನು ಕಾಣಬಹುದು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಮತ್ತು ತಂದೆ ಕುಡಿತದ ಚಟಕ್ಕೆ ಒಳಗಾಗಿ ತಾಯಿಯೊಬ್ಬಳೇ ದುಡಿಯುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆ ತನಕ ದುಡಿದರೆ ಮಕ್ಕಳಿಗೆ ಕೇವಲ 150 ರೂ. ಕೂಲಿಯನ್ನ ನೀಡಲಾಗುತ್ತದೆ. ಎರಡು ತಿಂಗಳು ಈ ಹತ್ತಿ ಬಿಡಿಸುವ ಸೀಜನ್ ನಡೆಯುವ ಹಿನ್ನೆಲೆ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸದೆ ತಮ್ಮ ಜೊತೆಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಬರುತ್ತಾರೆ. ಎರಡು ತಿಂಗಳು ತಮ್ಮ ಜೊತೆಗೆ ದುಡಿದರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂಬುದು ಪೋಷಕರ ಯೋಚನೆ.

ನಿತ್ಯ ಬಗಲಿಗೆ ಬ್ಯಾಗ್ ಹಾಕಿಕೊಂಡು ಶಾಲೆಗೆ ಹೋಗಬೇಕಾದ ಮಕ್ಕಳು ರಣ ಬಿಸಿಲಿನಲ್ಲಿ ದುಡಿಯುವಂತಾಗಿದೆ. ಕೈಯಲ್ಲಿ ಪೆನ್ನು ಹಾಗೂ ಪುಸ್ತಕ ಹಿಡಿದುಕೊಂಡು ಶಿಕ್ಷಕರು ಹೇಳುವ ಪಾಠ ಕೇಳಬೇಕಾದ ಮಕ್ಕಳು ಕೂಲಿ ಕೆಲಸದಲ್ಲಿ ತೊಡಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನ ಕೆಲಸಕ್ಕೆ ಕಳುಹಿಸುವುದು ಕಾನೂನು ಬಾಹಿರ ಆಗಿದೆ. ಆದರೆ ಕುಟುಂಬ ನಿರ್ವಹಣೆಯ ಅನಿವಾರ್ಯದಿಂದ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

ಇನ್ನು ಪೋಷಕರು ಮಕ್ಕಳನ್ನ ಕೆಲಕ್ಕೆ ಕರೆದುಕೊಂಡು ಬಂದರೂ ಜಮೀನು ಮಾಲೀಕರು ಮಕ್ಕಳಿಗೆ ಕೆಲಸಕ್ಕೆ ಹಚ್ಚಬಾರದು. ಒಂದು ವೇಳೆ ಕೆಲಸ ಮಾಡಿಸಿದರೆ ಅಂತವರ ಮೇಲೆ ಕ್ರಮ ಕೂಡ ಆಗುತ್ತದೆ. ಆದರೆ ಮಾಲೀಕರು ಬೇಡ ಅಂದರೂ ಪೋಷಕರು ಕರೆದುಕೊಂಡು ಬರುತ್ತಾರೆ ನಾವೇನು ಮಾಡೋಣ ಅಂತ ಜಮೀನು ಮಾಲೀಕರು ಹೇಳುತ್ತಿದ್ದಾರೆ.

ಒಂದು ವೇಳೆ ಮಕ್ಕಳಿಗೆ ಕೆಲಸಕ್ಕೆ ಕರೆದುಕೊಳ್ಳಲ್ಲ ಅಂತ ಹೇಳಿದರೆ ನಾವು ಕೂಡ ಕೆಲಸಕ್ಕೆ ಬರಲ್ಲ ಅಂತ ಕೂಲಿ ಕಾರ್ಮಿಕರು ಹೇಳುತ್ತಾ ಇದ್ದಾರೆ ಎಂದು ಜಮೀನು ಮಾಲೀಕರು ಹೇಳುತ್ತಿದ್ದಾರೆ. ಇನ್ನೊಂದುಕಡೆ ಅಕಾಲಿಕ ಮಳೆ ಬಂದರೆ ಕೈಗೆ ಬಂದಿರುವ ಹತ್ತಿ ಬೆಳೆ ಹಾಳಾಗಿ ಹೋಗುತ್ತದೆ ಎಂದು ಬಹುತೇಕ ರೈತರು ಕಾರ್ಮಿಕರೇ ಆಗಲಿ ಬಾಲ ಕಾರ್ಮಿಕರೇ ಆಗಲಿ ತಮ್ಮ ಕೆಲಸ ಮುಗಿದರೆ ಸಾಕು ಅಂತ ಕೆಲಸವನ್ನ ಮಾಡಿಸಿಕೊಳ್ಳುತ್ತಿದ್ದಾರೆ.

ದಸರಾ ಮತ್ತು ದೀಪಾವಳಿ ಅಂತ ಶಾಲಾ ಮಕ್ಕಳಿಗೆ ರಜೆ ನೀಡಲಾಗಿತ್ತು. ಆದರೆ ರಜೆ ಮುಗಿದು ಶಾಲೆಗಳು ಆರಂಭವಾಗಿದ್ದರೂ ಒಂದಷ್ಟು ಮಕ್ಕಳು ಮಾತ್ರ ಶಾಲೆ ಕಡೆ ಮುಖಮಾಡುತ್ತಿಲ್ಲ. ಇನ್ನು ಬಾಲ ಕಾರ್ಮಿಕರ ಪದ್ದತಿ ಕಾನೂನು ಬಾಹಿರ ಅಂತ ಜಾಗೃತಿ ಮೂಡಿಸಬೇಕಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ನಮಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಅಂತ ಆರಾಮಾಗಿದ್ದಾರೆ.

ಒಟ್ಟಾರೆ ಕೈಯಲ್ಲಿ ಪೆನ್ನು ಹಿಡಿದು ಅಕ್ಷರಗಳನ್ನ ಬರೆಯಬೇಕಿರುವ ಪುಟಾಣಿ ಕೈಗಳು ದುಡಿಯುವಂತಾಗಿದೆ. ಬಿರು ಬಿಸಿಲು ಲೆಕ್ಕಿಸದೆ ಮಕ್ಕಳಿಗೆ ಕೂಲಿ ಕೆಲಕ್ಕೆ ಹಚ್ಚಿರುವ ಪೋಷಕರು ಹಾಗೂ ಜಮೀನು ಮಾಲೀಕರಿಗೆ ಅಧಿಕಾರಿಗಳು ತಿಳಿ ಹೇಳಬೇಕಾಗಿದೆ. ಕೂಲಿ ಕೆಲಸಕ್ಕೆ ಹೋಗುತ್ತಿರುವ ಮಕ್ಕಳು ಶಾಲೆಗೆ ಹೋಗುವಂತಾಗಬೇಕಾಗಿದೆ.

ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 am, Sat, 12 November 22