ಪುತ್ತೂರು: ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಪುಂಡುವೇಷಧಾರಿ ಪುತ್ತೂರು ಶ್ರೀಧರ ಭಂಡಾರಿ ಇಂದು ಮುಂಜಾನೆ (ಫೆ.19) ನಿಧನ ಹೊಂದಿದರು. ‘ಶತ ದಿಗಿಣ ವೀರ’ ಎಂದು ಪ್ರಖ್ಯಾತಿ ಹೊಂದಿದ್ದ ಅವರಿಗೆ 73 ವರ್ಷ ವಯಸ್ಸಾಗಿತ್ತು. ಧರ್ಮಸ್ಥಳ ಮೇಳದಲ್ಲಿ ಮಿಂಚಿದ್ದ ಶ್ರೀಧರ ಭಂಡಾರಿ ನಿರಂತರ 13 ವರ್ಷಗಳ ಕಾಲ ಪುತ್ತೂರು ಮೇಳವನ್ನು ಸಂಘಟಿಸಿ, ಮುನ್ನಡೆಸಿದ್ದರು. ಯಕ್ಷಗಾನ ಸೇವೆಗಾಗಿ ಶ್ರೀಧರ ಭಂಡಾರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಮೆರಿಕಾ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ತಮ್ಮ ವೇಗ ಗತಿಯ ಚುರುಕು ನಾಟ್ಯ, ಉತ್ಸಾಹದ ದಿಗಿಣಗಳಿಂದಾಗಿ ಕಲಾಭಿಮಾನಿಗಳ ಮನಸೂರೆಗೊಂಡಿದ್ದರು. ಒಂದು ಬಾರಿಗೆ 200ರಿಂದ 250ರಷ್ಟು ದಿಗಿಣ ಹಾಕುತ್ತಿದ್ದರು. ಇದು ಒಂದೊಂದು ದಿನ ಎಂಬಂತೆ ಅಲ್ಲದೆ, ಪ್ರತಿ ಬಾರಿಯ ಪ್ರದರ್ಶನದಲ್ಲೂ ಅದ್ಭುತ ನಾಟ್ಯ ತೋರುತ್ತಿದ್ದರು. ಅವರ ಅಭಿಮನ್ಯು ಪಾತ್ರ ಬಹು ಪ್ರಸಿದ್ಧಿ ಪಡೆದಿತ್ತು. ಜತೆಗೆ, ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದರು.
ಶ್ರೀಧರ ಭಂಡಾರಿಯವರು ಪ್ರಭಾವಿ ಖಾಸಗಿ ಮಾಧ್ಯಮಗಳಲ್ಲೂ ತಮ್ಮ ಪ್ರದರ್ಶನ ತೋರಿ ನಾಡಿನಾದ್ಯಂತ ಕಲಾಭಿಮಾನಿಗಳನ್ನು ಸಂಪಾದಿಸಿದ್ದರು. ಖಾಸಗಿ ಸುದ್ದಿವಾಹಿನಿಯೊಂದರ ‘ಶಭಾಶ್ ಇಂಡಿಯಾ’ ಕಾರ್ಯಕ್ರಮದಲ್ಲಿ ತಮ್ಮ 62ನೇ ವಯಸ್ಸಿನಲ್ಲಿ ಭಾಗವಹಿಸಿ 3 ನಿಮಿಷಗಳಲ್ಲಿ 148 ದಿಗಿಣಗಳನ್ನು ಹಾರಿ ದಾಖಲೆ ನಿರ್ಮಿಸಿದ್ದರು. ಎಳವೆಯಿಂದಲೂ ಯಕ್ಷಗಾನದ ಮೇಲೆ ಅತೀವ ಆಸಕ್ತಿ ಹೊಂದಿದ್ದರು. ಕ್ರಿಶ್ಚಿಯನ್ ಬಾಬು ಅವರ ಬಭ್ರುವಾಹನ ಪಾತ್ರವನ್ನು ನೋಡಿ ಅತೀವ ಸೆಳೆತಕ್ಕೊಳಗಾಗಿ ಯಕ್ಷಗಾನವನ್ನು ಅಭ್ಯಾಸ ಮಾಡಲು ಪ್ರೇರಣೆ ಪಡೆದೆ ಎಂದು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದರು.
ತಮ್ಮ ಬೆಳವಣಿಗೆಗೆ ಮೂಲ ಕಾರಣ ಧರ್ಮಸ್ಥಳ ಮೇಳದ ಭಾಗವತರಾಗಿದ್ದ ಕಡತೋಕ ಮಂಜುನಾಥ ಭಾಗವತರು ಮತ್ತು ಮದ್ದಳೆಗಾರ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಎಂದು ಶ್ರೀಧರ ಭಂಡಾರಿಯವರು ಹೇಳಿದ್ದರು. ಇವರಿರುವ ಕಾರಣ ಯಾವ ಪಾತ್ರವೂ ನನಗೆ ಸವಾಲು ಎಂದೆನ್ನಿಸಲಿಲ್ಲ. ಅಭಿಮನ್ಯು ಪಾತ್ರಕ್ಕೆ ಹೊಸ ರೂಪ ಕೊಟ್ಟದ್ದೇ ಕಡತೋಕ ಭಾಗವತರು. ಪ್ರಸಂಗದಲ್ಲಿಲ್ಲ ಒಂದು ಪದವನ್ನು ಅಭಿಮನ್ಯುವಿಗೆ ಸೇರಿಸಿ ಆ ಪಾತ್ರ ರಂಗದಲ್ಲಿ ಬೆಳಗುವಂತೆ ಮಾಡಿದವರು ಕಡತೋಕರು ಎಂದು ತಾವು ನಡೆದು ಬಂದ ಹಾದಿಯನ್ನು ಸಂದರ್ಶನದಲ್ಲಿ ವಿವರಿಸಿದ್ದರು.
ಇದನ್ನೂ ಓದಿ: ಶಬ್ದಾಡಂಬರದ ಕಾಲದಲ್ಲಿ ಅರ್ಥಪೂರ್ಣ ಚರ್ಚೆಯ ಅನುಸಂಧಾನ; ಸಂವಿಧಾನ ಸ್ವೀಕರಿಸಿದ ದಿನ ನೆನಪಾಗ್ತಾರೆ ವಾಚಸ್ಪತಿ ಮಿಶ್ರ
Published On - 11:02 am, Fri, 19 February 21