ಶಬ್ದಾಡಂಬರದ ಕಾಲದಲ್ಲಿ ಅರ್ಥಪೂರ್ಣ ಚರ್ಚೆಯ ಅನುಸಂಧಾನ; ಸಂವಿಧಾನ ಸ್ವೀಕರಿಸಿದ ದಿನ ನೆನಪಾಗ್ತಾರೆ ವಾಚಸ್ಪತಿ ಮಿಶ್ರ

ಮಾತಿನಲ್ಲಿ ಎಡವಿ ಕೊನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಹೋಯ್ತು ಎಂದು ಗೋಳು ಹೊಯ್ದುಕೊಳ್ಳುವ ನಮಗೆ ಚರ್ಚೆ ನಡೆಸುವುದು ಹೇಗೆ ಎಂಬುದು ಮರೆತೇಹೋಗಿರಬಹುದು. ಸಂವಿಧಾನ ಜಾರಿಗೆ ಬಂದ ಈ ದಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೊದಲ ಮೆಟ್ಟಿಲಾದ ಸಾರ್ವಜನಿಕ ಚರ್ಚೆ ಹೇಗಿರಬೇಕು ಎಂಬುದರ ಬಗ್ಗೆ ಮಂಥನವಾಗುವುದು ಒಳ್ಳೆಯದು

ಶಬ್ದಾಡಂಬರದ ಕಾಲದಲ್ಲಿ ಅರ್ಥಪೂರ್ಣ ಚರ್ಚೆಯ ಅನುಸಂಧಾನ; ಸಂವಿಧಾನ ಸ್ವೀಕರಿಸಿದ ದಿನ ನೆನಪಾಗ್ತಾರೆ ವಾಚಸ್ಪತಿ ಮಿಶ್ರ
ತತ್ವಶಾಸ್ತ್ರಜ್ಞ ವಾಚಸ್ಪತಿ ಮಿಶ್ರಾ ಮತ್ತು ಸಂವಿಧಾನ
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 26, 2021 | 8:08 PM

ದೇಶದಲ್ಲಿ ಇಂದು 72ನೇ ಗಣರಾಜ್ಯೋತ್ಸವದ ಸಂಭ್ರಮ. ಸಂವಿಧಾನ ಅಂಗೀಕಾರವಾದ ದಿನ. ಸಂವಿಧಾನ ಕೊಟ್ಟ ಅನೇಕ ಹಕ್ಕು ಚಲಾವಣೆ ನಡುವೆ ನಮ್ಮನ್ನು ಪದೇಪದೇ ಕಾಡುವ ವಿಚಾರ; ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು (freedom of expression) ಮೊಟಕಾಗುತ್ತಿದೆ. ಇದನ್ನು ತಿರುಗಿ ಪಡೆಯೋದು ಹೇಗೆ? ಅಭಿವ್ಯಕ್ತಿ ಸ್ವಾತಂತ್ರ್ಯದ ವಿವಿಧ ಮಜಲನ್ನು ಚರ್ಚಿಸಿ ಅದಕ್ಕೊಂದು ಸೂತ್ರ (codified rules) ಕೊಟ್ಟುಬಿಡಬಹುದಿತ್ತು. ಪ್ರಬುದ್ಧ ಸಂವಿಧಾನಕ್ಕೇ ಅದು ಆಗದ ಮಾತು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಕೊಟ್ಟು ನೀವೇ ವಿವೇಚನೆಯಿಂದ ಬಳಸಿ ಎಂದ ಸಂವಿಧಾನ ಪಿತೃಗಳನ್ನು ಸ್ಮರಿಸಲೇಬೇಕು.

ಅದೇನೋ ಸರಿ. ಮೂಲಭೂತವಾಗಿ ಕಾಡುವ ಸಮಸ್ಯೆ ಏನೆಂದರೆ ನಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳದ ನಮ್ಮದೇ ನೆರೆಮನೆಯವರು, ಕಚೇರಿಯ ಸಹೋದ್ಯೋಗಿಗಳನ್ನು ಸಾರ್ವಜನಿಕರನ್ನು ಒಪ್ಪಬೇಕೆ? ಬಿಡಬೇಕೆ? ದ್ವೇಷಿಸಬೇಕೆ? ಆಧುನಿಕ ಜಗತ್ತಿನಲ್ಲಿ ಎಲ್ಲೆಲ್ಲೂ ಈ ತುಮುಲ ಇದ್ದಿದ್ದೆ. ನಮ್ಮ ಅಭಿಪ್ರಾಯ ಒಪ್ಪಿಕೊಳ್ಳದ ಜನರ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಸಿಕೊಂಡು ಅವರ ವಿರುದ್ಧ ವಿಷ ಸಮರ (subtle campaign) ಸಾರಬೇಕೆ? ತುಂಬಾ ಜನ ಅನುಸರಿಸುವ ಒಂದು ಸುಲಭ ಮಾರ್ಗ ಯಾವುದೆಂದರೆ, ಅಭಿಪ್ರಾಯವನ್ನು ಒಪ್ಪಿಕೊಳ್ಳದ ಸಹೋದ್ಯೋಗಿಗಳನ್ನು ದ್ವೇಷಿಸೋದು ಅಥವಾ ಅವರಿಂದ ದೂರ ಸರಿಯೋದು.

ಆಧುನಿಕ ಜಗತ್ತಿನ ವಿಶ್ವವಿದ್ಯಾಲಯದಲ್ಲಿ ಓದಿಬಂದು ಇನ್ನು ತಮ್ಮದು ವಿಸ್ತಾರವಾದ ಮನಸ್ಸು ಎಂದು ಹೇಳುವವರು ಸಹ ಇದೇ ಗುಂಡಿಗೆ ಬೀಳುತ್ತಿರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಇಂಥ ವಿಚಾರ ಬಂದಾಗ ಅನೇಕರು ಸೂಚಿಸುವ ಇನ್ನೊಂದು ಮಾರ್ಗವಿದೆ. ಬೇರೆ ವಿಚಾರಗಳಲ್ಲಿ ಅನುಸರಿಸಿದಂತೆ ಈ ವಿಚಾರದಲ್ಲೂ ಕೂಡ ಪಾಶ್ಚಾತ್ಯರು ಯಾವ ಸಂಪ್ರದಾಯ ಹಾಕಿದ್ದಾರೋ ಅದನ್ನೇ ಇಲ್ಲೂ ತರೋಣ ಎಂಬುದು.

ನಮ್ಮಲ್ಲಿ ಬಹಳ ಜನರಿಗೆ ಗೊತ್ತಿಲ್ಲ; ನಮ್ಮಲ್ಲೂ ಸಹ ಸಾರ್ವಜನಿಕ ಚರ್ಚಾ ಸಂಸ್ಕೃತಿ ಬಗ್ಗೆ ಬಹಳ ಹಿಂದೆಯೇ ಆಳವಾಗಿ ಚಿಂತಿಸಿದವರಿದ್ದಾರೆ, ವ್ಯಾಖ್ಯಾನಿಸಿದವರಿದ್ದಾರೆ. ಈಗಿನ ಟಿವಿ ಸ್ಟುಡಿಯೋ ಚರ್ಚೆಗಳಂತೆ ಇರುತ್ತಿರಲಿಲ್ಲ ಅಂದಿನ ಚರ್ಚೆಗಳು. ಕೆಲವರು ದೇವರನ್ನು ನಂಬಿದವರು ಮತ್ತೆ ಕೆಲವರು ಚಾರ್ವಾಕರು. ನ್ಯಾಯ ತತ್ವಶಾಸ್ತ್ರದಲ್ಲಿ ಈ ಕುರಿತು ಹಲವು ಕುತೂಹಲಕಾರಿ ಅಂಶಗಳು ಸಿಗುತ್ತವೆ. ಇಂಥ ಚರ್ಚೆ ಮಾಡಿದ ಹಲವರಲ್ಲಿ ವಾಚಸ್ಪತಿ ಮಿಶ್ರ ಕೂಡ ಒಬ್ಬರು. ಅವರ ಅಭಿಪ್ರಾಯವನ್ನು ಬೆಳೆಸಿ ನಮ್ಮ ಸಾರ್ವಜನಿಕ ಚರ್ಚಾ ಸಂಸ್ಕೃತಿಗೆ ಹೊಸ ಮಾರ್ಗ ಕಂಡುಕೊಳ್ಳಬಹುದೇ ಎಂಬ ಚರ್ಚೆ ಹುಟ್ಟು ಹಾಕುವುದೇ ಈ ಲೇಖನದ ಉದ್ದೇಶ.

ಇದನ್ನೂ ಓದಿ: ಸಂವಿಧಾನ ಪ್ರತಿಯ ಮೆರುಗು ಹೆಚ್ಚಿಸಿದ ಶಾಂತಿನಿಕೇತನ ಕಲಾವಿದರ ಚಿತ್ರಕಲೆ

ತತ್ವಶಾಸ್ತ್ರಜ್ಞ ವಾಚಸ್ಪತಿ ಮಿಶ್ರ ಪುತ್ಥಳಿ

ಯಾರಿವರು ವಾಚಸ್ಪತಿ ಮಿಶ್ರ?

ಈ ತತ್ವಶಾಸ್ತ್ರಜ್ಞರ ಹೆಸರು ವಾಚಸ್ಪತಿ ಮಿಶ್ರ. ಕ್ರಿ.ಶ. 900 ರಿಂದ 980 ರವರೆಗೆ, ಇಂದಿನ ನೇಪಾಳ-ಭಾರತ ಗಡಿಯಲ್ಲಿರುವ ಮಧುಬನಿ ಹತ್ತಿರವಿರುವ ಅಂಧರಾಠಾಡಿ ಹಳ್ಳಿಯಲ್ಲಿದ್ದವರು. ವೇದಾಂತ ಅಧ್ಯಯನ ಮಾಡುವವರಿಗೆ ಇವರ ಹೆಸರು ಹೊಸದಲ್ಲ. ಇವರು ಯಾವ ರೀತಿ ಬದುಕಿದ್ದರು ಎಂಬ ವೈಯಕ್ತಿಕ ಬದುಕಿನ ಬೇರೆ ವಿಚಾರಗಳು ಎಲ್ಲೂ ಕಾಣಸಿಗುವುದಿಲ್ಲ. ಭಾರತೀಯ ತತ್ವಶಾಸ್ತ್ರ ಅಧ್ಯಯನ ಮಾಡುವ ಪಾಶ್ಚಾತ್ಯರು ಮಾತ್ರ ಇವರನ್ನು ಓದದೇ ಬಿಡುವುದಿಲ್ಲ. ಇವರು ವಿರಕ್ತರು. ಅವರ ಬಗೆಗಿನ ಅಲ್ಪ ಸ್ವಲ್ಪ ಮಾಹಿತಿ ಏನೆಂದರೆ ತಂದೆ ತಾಯಿ ಇವರಿಗೆ ವಿವಾಹ ಮಾಡುತ್ತಾರೆ. ಆದರೆ ಇವರಿಗೆ ಸಂಸಾರದಲ್ಲಿ ಆಸಕ್ತಿ ಇರುವುದಿಲ್ಲ.

ವಾಚಸ್ಪತಿ ಮಿಶ್ರರ ಹೆಂಡತಿ ಹೆಸರು ಭಾಮತಿ. ಕೈಗೆತ್ತಿಕೊಂಡ ಕಾರ್ಯ ಸಾಧಿಸುವವರೆಗೆ ತಾನು ಸಂಸಾರದ ಕಾರ್ಯದಲ್ಲಿ ಭಾಗವಹಿಸಲಾಗದು ಎಂದು ಹೇಳಿ ಬಿಡುತ್ತಾರೆ ಮಿಶ್ರ. ಹೆಂಡತಿಯೋ ಸಾಧ್ವಿ. ವಿರಕ್ತರಾದ ಗಂಡನ ಸೇವೆ ಮಾಡಿಕೊಂಡೇ ಕಾಲ ಕಳೆಯುತ್ತಾಳೆ. ಧರ್ಮಪತ್ನಿ ಮಾಡುತ್ತಿರುವ ಸೇವೆ ಎಷ್ಟು ಅಪರೂಪದ್ದು ಮತ್ತು ವಿಚಿತ್ರವೂ ಆಗಿರುತ್ತೆ ಎಂದರೆ, ಒಂದೇ ಒಂದು ದಿನ ಕೂಡ ಅವಳು ಅವರ ಎದುರು ಬರುವುದಿಲ್ಲ. ಕೊನೆಗೆ ಎಲ್ಲ ಬರೆದು ಮುಗಿದ ಮೇಲೆ ಅವಳ ಸೇವೆಗೆ ಮನಸೋತ ಗಂಡ ವಾಚಸ್ಪತಿ ಮಿಶ್ರ, ತಾವು ಬರೆದ ಒಂದು ಕೃತಿಗೆ ಹೆಂಡತಿ ಹೆಸರೇ ಇಡುತ್ತಾರೆ. ನನ್ನ ಹೆಸರು ಅಜರಾಮರವಾಗದಿದ್ದರೂ ಪರವಾಯಿಲ್ಲ, ನಿನ್ನ ಹೆಸರಿರಬೇಕು ಎಂದು ಹೇಳಿದ ಅವರು, ಅದ್ವೈತ ವೇದಾಂತದ ಬ್ರಹ್ಮ ಸೂತ್ರಕ್ಕೆ ಬರೆದ ವ್ಯಾಖ್ಯಾನಕ್ಕೆ ಭಾಮತಿ ವ್ಯಾಖ್ಯಾನ ಎಂದು ಹೆಸರಿಡುತ್ತಾರೆ.

ಯೋಗಕ್ಕೆ ಬರೆದ ಭಾಷ್ಯಕ್ಕೆ ತತ್ವ ವೈಶಾರದೀ ಎಂದು ಹೆಸರಿಟ್ಟರು. ಅವರು ಅನೇಕ ದರ್ಶನಗಳಿಗೆ ಅವರು ಬರೆದ ಭಾಷ್ಯ ಅಥವಾ ಟಿಪ್ಪಣಿಗಳನ್ನು ಇವತ್ತೂ ಓದುತ್ತಾರೆ. ಸಾಂಖ್ಯಕಾರಿಕೆಗೆ ತತ್ವ ಕೌಮುದಿ ಎಂಬ ಟಿಪ್ಪಣಿಯನ್ನು, ನ್ಯಾಯ ಸೂತ್ರಕ್ಕೆ ನ್ಯಾಯ ಸೂಚಿ ನಿಬಂಧ ಎಂಬ ಭಾಷ್ಯವನ್ನು ಬರೆದಿದ್ದಾರೆ. ನ್ಯಾಯ ವಾರ್ತಿಕಕ್ಕೆ ನ್ಯಾಯ ವಾರ್ತಿಕ ತಾತ್ಪರ್ಯ ಟೀಕಾ ಎಂಬ ದೀರ್ಘ ಪ್ರಬಂಧ, ಮಂಡನ ಮಿಶ್ರ ಅವರ ವಿಧಿ ವಿವೇಕ ಕೃತಿಗೆ, ನ್ಯಾಯ ಕಣಿಕಾ ಎಂಬ ಟಿಪ್ಪಣಿಯನ್ನು ಮತ್ತು ಶಬ್ದ ತತ್ವ ಎಂಬ ಕೃತಿಗೆ, ಶಬ್ದ ಬೋಧ ಎಂಬ ಭಾಷ್ಯವನ್ನು ಬರೆಯುತ್ತಾರೆ.

ಇದನ್ನೂ ಓದಿ: ಸರ್ಕಾರ ಸಂವಿಧಾನದ ಆಶಯ ಉಲ್ಲಂಘಿಸಿದಾಗ ನ್ಯಾಯಾಂಗ ನಮ್ಮ ನೆರವಿಗೆ ಬರಬೇಕಿತ್ತು

ಆನ್​ಆನ್​ಲೈನ್​ನಲ್ಲಿ ಲಭ್ಯವಿರುವ ತತ್ವಶಾಸ್ತ್ರಜ್ಞ ವಾಚಸ್ಪತಿ ಮಿಶ್ರರ ಕೃತಿಗಳು

ಸಾರ್ವಜನಿಕ ಚರ್ಚಾ ಸಂಸ್ಕೃತಿ ಮತ್ತು ಮಿಶ್ರ ಸತ್ಯಕ್ಕೋಸ್ಕರ ಚರ್ಚೆಯಿದ್ದರೆ ಅದು ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ಪ್ರಾರಂಭಿಸಿ ತಮ್ಮ ಭಾಷ್ಯ ಬರೆಯುತ್ತಾರೆ. ಚರ್ಚೆಯಿಂದಲೇ ಖುಷಿ. ಮತ್ತು ಅತ್ಯಲ್ಪ ಕಾಲ ಬದುಕುವ ಮನುಷ್ಯನಿಗೆ ಆರೋಗ್ಯಯುತ ಚರ್ಚೆ ಸಂತೋಷವನ್ನು ನೀಡುತ್ತೆ. ಈಗಲೂ ಸಹ ಅದನ್ನೇ ಹೇಳೋದು ಅಲ್ಲವೇ? ಹಾಗೊಮ್ಮೆ ಚರ್ಚೆ ನಮ್ಮ ಸ್ವಾಸ್ಥ್ಯಕ್ಕೋಸ್ಕರ ಇದ್ದರೆ ಅಲ್ಲಿ ಸೋಲು ಗೆಲುವಿಗೇಕೆ ತಲೆ ಕೆಡಿಸಿಕೊಳ್ಳಬೇಕು ಅಥವಾ ಎಲ್ಲ ಕಡೆ, ಎಲ್ಲಾ ಕಾಲದಲ್ಲಿ, ಎಲ್ಲರ ಜೊತೆಯೂ ಚರ್ಚೆ ಮಾಡಿದರೆ ಏನು ತಪ್ಪು? ಈ ಪ್ರಶ್ನೆಗಳು ಏಳೋದು ಸಹಜ.

ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಲೇಬೇಕು. ಹಿಂದೂ ತತ್ವಶಾಸ್ತ್ರ, ಸತ್ಯವನ್ನು ದೇವರಿಗೆ ಜೋಡಿಸುವ ವಿಚಾರ ಹೊಸದೇನಲ್ಲ. ಇದನ್ನೇ ಗಾಂಧಿ ಕೂಡ ತಮ್ಮ ಸಾರ್ವಜನಿಕ ಜೀವನಕ್ಕೆ ಅಳವಡಿಸಿಕೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗಿದ್ದು. ಸತ್ಯ ಕಂಡುಕೊಳ್ಳಬೇಕು ಎಂದರೆ ಚರ್ಚೆ ಅವಶ್ಯ ಎಂಬುದು ತತ್ವಶಾಸ್ತ್ರಜ್ಞರ ವಾದವಾಗಿತ್ತು. ಅದು ಆರ್ನಬ್ ಗೋಸ್ವಾಮಿ ಸ್ಟೈಲ್ ವಾದ ಸರಣಿ ಎಂದೂ ಆಗಿರಲಿಲ್ಲ. ಚರ್ಚೆ ಎಂದರೆ ಮೊದಲು ನೀವು ನಿಮ್ಮ ವಾದ ಮಂಡಿಸಬೇಕು. ಹಾಗೆ ಮಾಡುವಾಗ ನೀವು ಆಳ ಅಧ್ಯಯನದಿಂದ ಬಂದವರಿರಬೇಕು. ಅಷ್ಟೇ ಅಲ್ಲ, ನೀವು ಬೇರೆಯವರ ವಾದವನ್ನು ವಿರೋಧಿಸಬೇಕು ಎಂದರೆ, ಅಲ್ಲಿ ನೀವು ಪ್ರತಿಪಾದಿಸುವ ಸತ್ಯದ ಬಗ್ಗೆ ವಿರೋಧಿಗಳ ಮನ ಒಲಿಸುವ ವಿಚಾರಗಳಿರಬೇಕು.

ಆ ರೀತಿಯ ವಾದಕ್ಕೆ ಕೂಡ ಒಂದು ಚೌಕಟ್ಟು ಇರಬೇಕು. ಹಾಗಂತ ವಾದ ಮಂದವಾಗಿ ತುಂಬಾ ಬೋರಿಂಗ್​ ಆಗಿರಬಾರದು. ಚರ್ಚೆ ವಿಷಯಾಧಾರಿತವಾಗಿರಲೇಬೇಕು. ಇಲ್ಲಿ ಇನ್ನೊಂದು ಕುತೂಹಲಕಾರಿ ಅಂಶವಿದೆ. ಈಗಾಗಲೇ ಸಾಬೀತಾಗಿಲ್ಲದ ಮತ್ತು ವಿವಾದಾತ್ಮಕ ವಿಷಯಗಳನ್ನು ಪ್ರಸ್ತುತಪಡಿಸುವ ಹಾಗಿರಲಿಲ್ಲ. ನಾವು ನೆನಪಿಡಬೇಕಾಗಿದ್ದುದು: ಈ ಮಾತನ್ನು 1100 ವರ್ಷಗಳ ಹಿಂದೆ ನಮ್ಮಲ್ಲಿ ಚರ್ಚೆ ಮಾಡಿದ್ದರು ಎಂದರೆ ಆಶ್ಚರ್ಯ ಆಗುವುದಿಲ್ಲವೇ? ಒಂದೊಮ್ಮೆ ನೀವು ಈ ಎರಡು ವಿಚಾರಗಳನ್ನು ಮರೆತು ಚರ್ಚೆಗೆ ಹೋಗಿ ನಿಮ್ಮನ್ನು ಯಾರಾದರೂ ಹಿಡಿದರೆ, ನೀವು ಅಂದಿನಿಂದ ಚರ್ಚೆಗೆ ಅನರ್ಹರಾಗಿರುತ್ತಿದ್ದಿರಿ. ತರ್ಕವಿಲ್ಲದ ವಾದಕ್ಕೆ ಅವಕಾಶವೇ ಇರಲಿಲ್ಲ.

ಇದನ್ನೂ ಓದಿ: ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ

ವಾಚಸ್ಪತಿ ಮಿಶ್ರಾ ಮತ್ತು ಅವರ ಪತ್ನಿ ಭಾಮತಿಯ ಅಪರೂಪದ ದಾಂಪತ್ಯ ಬಿಂಬಿಸುವ ಮಿಥಿಲಾ ಶೈಲಿಯ ಚಿತ್ರಕಲೆ

ಮೂರು ಪದ್ಧತಿಗಳು ಯಾವವು? ವಾಚಸ್ಪತಿ ಮಿಶ್ರ ಅವರ ಪ್ರಕಾರ ವಾದ ಅಂದರೆ ಚರ್ಚೆ. ಇಲ್ಲಿ ಸತ್ಯ ಕಂಡುಕೊಳ್ಳುವುದು ಮೂಲ ಉದ್ದೇಶ. ಯಾಕೆ ಇದು ಹೀಗೆ ಇರುತ್ತಿತ್ತು ಎಂದರೆ, ಸತ್ಯಾಂಶ ಎಂದರೆ ಧಾರ್ಮಿಕ ಕೃತಿಗಳ ಮೇಲೆ ಚರ್ಚೆ ನಡೆಯುವಾಗ ಅಲ್ಲಿ ಸತ್ಯ ಕಂಡುಕೊಳ್ಳುವುದು ಎಂದರೆ ಕೊನೆಗೆ ಅನುಮಾನ ಪರಿಹರಿಸಿಕೊಂಡು ದೇವರಲ್ಲಿನ ನಂಬುಗೆಯನ್ನು ಬಲಗೊಳಿಸಿಕೊಳ್ಳುವುದಾಗಿತ್ತು. ಹಾಗಾಗಿ ಈ ಚರ್ಚೆಗೆ ಒಂದು ಚೌಕಟ್ಟು ಇರುತ್ತಿತ್ತು.

ಈಗಿನಂತೆ ಆಗಲೂ ಜಗಳಗಂಟರು, ಅನುಮಾನಿಗಳು ಇರುತ್ತಿದ್ದರು. ಹಾಗಾಗಿ ವಾದ ಅಂದರೆ ಚರ್ಚಾ ಪದ್ಧತಿ ಬಿಟ್ಟು, disputation ಎಂದರೆ ವಿವಾದಗಳು ಮತ್ತು ವಿತಂಡವಾದ ಎಂಬ ಮತ್ತೆರಡು ರೀತಿಯ ಚರ್ಚಾ ಪದ್ಧತಿಯನ್ನು ಬಳಸುವವರಿದ್ದರು. ವಾಚಸ್ಪತಿ ಮಿಶ್ರ ಅವರ ಪ್ರಕಾರ ಗೆಲುವಿಗೋಸ್ಕರ ಚರ್ಚೆ ನಡೆದಾಗ ವಾಸ್ತವಾಂಶವನ್ನು ಬಿಟ್ಟು ತಮ್ಮ ಶುಷ್ಕಜ್ಞಾನವನ್ನು ಪ್ರದರ್ಶಿಸಲು ಹೊರಡುತ್ತಿದ್ದ ಜನರಿದ್ದರು. ವಿವಾದದಲ್ಲಿ ಏನಾಗುತ್ತಿತ್ತು ಎಂಬುದನ್ನು ಮಿಶ್ರ ತುಂಬಾ ಚೆನ್ನಾಗಿ ಹೇಳಿದ್ದಾರೆ; ಅತ್ಯಂತ ಪ್ರಬಲ ವ್ಯಕ್ತಿ ಖಡಾಖಂಡಿತವಾಗಿ ಸುಳ್ಳನ್ನು ಹೇಳಿ ಜನರನ್ನು ದಾರಿ ತಪ್ಪಿಸಲು ಮುಂದಾದಾಗ, ನೀವು ಎದುರಿಗಿರುವವರ ಮಾತನ್ನು ಹಿಡಿದು ತಿರುಚಿ. ಅವರ ಮಾತನ್ನು ಅಕ್ಷರಶಃ ಅರ್ಥೈಸಿ. ವಿವಾದದಲ್ಲಿ ಈ ರೀತಿಯ ಚರ್ಚಾ ಕ್ರಮ ಮಾಡಬೇಕಾಗಿ ಬರುತ್ತಿತ್ತು. ಏಕೆಂದರೆ, ಎದುರಿಗಿರುವ ಪ್ರಬಲ ವ್ಯಕ್ತಿ ತನ್ನ ಅಪಾರ ಜನ ಬೆಂಬಲದೊಂದಿಗೆ ವಾದ ಗೆಲ್ಲುವ ಸಾಧ್ಯತೆ ಇರುತ್ತೆ.

ವಿತಂಡವಾದ ಒಂದು ಒಪ್ಪಿತ ಚರ್ಚಾ ಪದ್ಧತಿ ಆಗಿರಲಿಲ್ಲ. ವಿತಂಡವಾದಿಗಳಲ್ಲಿ ಅನುಮಾನವೇ ಹೆಚ್ಚು. ಇವರಲ್ಲಿ ಬೌದ್ಧಿಕ ಆಳ ಅಗಲ ಇರುವುದಿಲ್ಲ. ನಮ್ಮ ಸಾಮಾಜಿಕ ಜಾಲತಾಣದ ಟ್ರೋಲಿಗರು ಮತ್ತು ಮೀಮ್ಸ್​ ಮಾಡುವವರು ಈ ವರ್ಗದಲ್ಲಿ ಬರುತ್ತಾರೆ ಅಲ್ಲವೇ? ಆದರೆ ವಿವಾದ ಪದ್ಧತಿ ಮತ್ತು ವಿತಂಡವಾದ ಎರಡೂ ತಿರುಗುಬಾಣವಾಗುವ ಸಾಧ್ಯತೆ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಒಮ್ಮೆ ಈ ರೀತಿಯ ಪದ್ಧತಿಯ ಮೂಲಕ ಚರ್ಚೆಗಿಳಿದಾಗ ಜನ ನಿಮ್ಮ ವಿರೋಧಿಯೇ ಸರಿ ಎಂದು ಒಪ್ಪಿಕೊಂಡುಬಿಡಬಹುದು. ಅಂದರೆ ಲಸಿಕೆ ಬಗ್ಗೆ ಸದಾ ಅನುಮಾನವಿರುವವರ ಜೊತೆ ಓರ್ವ ವೈರಾಲಾಜಿಸ್ಟ್​ ಹೇಗೆ ಚರ್ಚೆ ಮಾಡಲು ಸಾಧ್ಯ? ಅಥವಾ ವಿಷಯ ಗೊತ್ತೇ ಇಲ್ಲದಿರುವವರ ಎದುರು ಓರ್ವ ಪಂಡಿತ ಹೇಗೆ ವಾದಕ್ಕಿಳಿಯಬೇಕು? ವಾಚಸ್ಪತಿ ಮಿಶ್ರ ಅವರ ಪ್ರಕಾರ, ಚರ್ಚಾಕ್ರಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ಸಾರ್ವಜನಿಕ ಚಚಾ ಪದ್ಧತಿಗೆ ಆ ಕಾಲದಲ್ಲಿ ತರಬೇತಿ ನಡೆಯುತ್ತಿತ್ತು. ಇದರಿಂದಾಗಿ ವೀಕ್ಷಕರು ದಾರಿ ತಪ್ಪುತ್ತಿರಲಿಲ್ಲ ಮತ್ತು ಚರ್ಚಾಪಟುಗಳು ತಪ್ಪು ಚಿಂತನಾ ಸರಣಿಗೆ ಇಳಿಯುತ್ತಿರಲಿಲ್ಲ. ವಾಚಸ್ಪತಿ ಮಿಶ್ರ ತುಂಬಾ ಪ್ರೌಢ ಚಿಂತಕರಾಗಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ. ಸತ್ಯದ ಹುಡುಕಾಟಕ್ಕಾಗಿ ಹೊರಡುವವರು ಪ್ರಾಮಾಣಿಕ ಚಿಂತನೆಯೊಂದಿಗೆ ಚರ್ಚಾಗೋಷ್ಠಿಗೆ ಇಳಿಯುತ್ತಾರೆ ಮತ್ತು ತೆರೆದ ಮನಸ್ಸಿನವರಿಗೆ ತಟ್ಟುತ್ತಾರೆ. ಸುತ್ತಲಿನ ಸಮಾಜ ಮೊಳಕೆಯೊಡೆಯುತ್ತಿರುವ ಬೀಜದಂತಿದ್ದಾಗ ಅಂದರೆ ಎಳಸಿದ್ದಾಗ, ತಪ್ಪುಗ್ರಹಿಕೆ ಬಹಳ ಬೇಗ ಕೇಳುಗರ ಮನಸ್ಸನ್ನು ಗ್ರಹಿಸಿಬಿಡುತ್ತೆ. ಆಗ ನೈತಿಕ ತಳಹದಿಯ ಮೇಲೆ ಚಿಂತನೆ ಮಾಡಿ ವಾದ ಮಂಡಿಸುವ ಕ್ರಮ ಒಂದು ಒಳ್ಳೇ ವಿಧಾನವಲ್ಲ. ಅಂಥ ಸಂದರ್ಭದಲ್ಲಿ ಚರ್ಚಾ ವಿಧಾನದ ಬಗ್ಗೆಯೇ ಚರ್ಚೆ ಮಾಡುವುದು ಹೇಗೆ ಎಂಬುದನ್ನು ಜನರಿಗೆ ಕಲಿಸುವುದು ಒಳಿತು ಎಂಬುದು ಅವರ ವಾದವಾಗಿತ್ತು.

ನಮಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಂಡ ಭಯ ಇದೆ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿದೆ. ಅದರಂತೆ, ಮಿಶ್ರ ತರಹ ಅನೇಕ ಪಂಡಿತರ ವಿಚಾರಧಾರೆ ನಮ್ಮ ಮುಂದಿದೆ. ಈ ಗಣರಾಜ್ಯೋತ್ಸವದ ದಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ನಾವು ಚರ್ಚೆ ಹೇಗೆ ಮಾಡಬೇಕು? ಅದಕ್ಕಿಂತ ಹೆಚ್ಚಾಗಿ ಭಿನಾಭಿಪ್ರಾಯ ಬಂದಾಗ ಕೂಡ ನಾವು ಹೇಗೆ ವರ್ತಿಸಬೇಕು? ಇದು ಪ್ರಾಯಶಃ ಇತ್ಯರ್ಥವಾಗಿ ಒಂದು ಹೊಸ ದಾರಿ ಕಂಡುಕೊಂಡರೆ ನಮ್ಮ ಸಾಮಾಜಿಕ ಜಾಲತಾಣಗಳು ಮತ್ತು ನಮ್ಮ ಚರ್ಚಾ ವೇದಿಕೆಗಳು ಯಕ್ಷಗಾನ ಪ್ರಸಂಗದ ಚರ್ಚೆಯಂತೆ ರಸವತ್ತಾಗಿ ಇರುವುದಷ್ಟೇ ಅಲ್ಲ, ಸತ್ಯದ ಅನುಸಂಧಾನಕ್ಕೆ ಸಹಾಯಕವಾಗಬಹುದು.

ವಾಚಸ್ಪತಿ ಮಿಶ್ರರ ಹಲವು ಕೃತಿಗಳು ಆನ್​ಲೈನ್​ನಲ್ಲಿ ಲಭ್ಯ. ಆಸಕ್ತರು archive.org  ಜಾಲತಾಣವನ್ನು ಒಮ್ಮೆ ಗಮನಿಸಬಹುದು.

ಗಣರಾಜ್ಯೋತ್ಸವ ವಿಶೇಷ | ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ನಾರೀಶಕ್ತಿ

ನಿತ್ಯ ಬಳಸುವ ಪದಗಳಿಗೆ ಭಾವ-ಜೀವ ತುಂಬಿದ್ದ ಅಪರೂಪದ ಅಧ್ಯಾತ್ಮ ಸಾಧಕ ಸ್ವಾಮಿ ಹರ್ಷಾನಂದ ಮಹಾರಾಜ್

Published On - 8:05 pm, Tue, 26 January 21

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?