ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ಅಪಾಯಕಾರಿಯಾಗಿ ವರ್ತಿಸುತ್ತಿದ್ದು ವಯಸ್ಸಿನ ಭೇದಭಾವವಿಲ್ಲದೆ ಅನೇಕರು ಸೋಂಕಿಗೆ ಜೀವ ಕಳೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ತರಬೇತಿ ನಿರತ ಪಿಎಸ್ಐ ಆಗಿದ್ದ 24ವರ್ಷದ ಶಾಮಿಲಿ ಎಂಬುವವರು ಇಂದು ಕೋಲಾರದ ಆಸ್ಪತ್ರೆಯಲ್ಲಿ ಮುಂಜಾನೆ 4.30ರ ಸುಮಾರಿಗೆ ನಿಧನರಾಗಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನವರು ಕೊರೊನಾ ಸೋಂಕಿನಿಂದ ಸಾವನಪ್ಪಿರುವ ಘಟನೆ ಇದಾಗಿದ್ದು, ಮೃತರು ಏಳು ತಿಂಗಳ ಗರ್ಭಿಣಿಯಾಗಿದ್ದರು ಎನ್ನುವ ವಿಚಾರವೂ ತಿಳಿದುಬಂದಿದೆ.
ಗರ್ಭಿಣಿಯಾಗಿದ್ದ ಕಾರಣ ಕೊರೊನಾ ಲಸಿಕೆ ಪಡೆಯದೇ ಉಳಿದಿದ್ದ ಶಾಮಿಲಿ ಸೋಂಕಿಗೆ ತುತ್ತಾದ ತಕ್ಷಣವೇ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಮೇ 2ರಂದು ಕೋಲಾರದ ಆರ್ಎಂ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಶಾಮಿಲಿ ಅವರು ಆಸ್ಪತ್ರೆಗೆ ದಾಖಲಾದಾಗಿನಿಂದ ಕೋಲಾರದ ಎಸ್ಪಿ ಅವರು ವೈಯಕ್ತಿಕ ಮುತುವರ್ಜಿ ವಹಿಸಿದ್ದರಾದರೂ ಅವರನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ವಿಭಾಗದಲ್ಲಿ 2021ರ ಜನವರಿ 12ರಂದು ಕರ್ತವ್ಯಕ್ಕೆ ಸೇರಿಕೊಂಡಿದ್ದ ಶಾಮಿಲಿ ರಜೆಯ ನಿಮಿತ್ತ ಲಾಕ್ಡೌನ್ಗೂ ಮುನ್ನ ಅಂದರೆ ಏಪ್ರಿಲ್ 20ರಂದು ಕೋಲಾರಕ್ಕೆ ತೆರಳಿದ್ದರು. ಆದರೆ, ಅಲ್ಲಿಗೆ ತೆರಳಿದ ಹತ್ತು ಹನ್ನೆರೆಡು ದಿನಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಪೊಲೀಸ್ ಇಲಾಖೆಯ ಕಿರಿಯ ಸಿಬ್ಬಂದಿ ಸಾವಿಗೆ ಡಿಜಿಪಿ ಪ್ರವೀಣ್ ಸೂದ್ ಸಂತಾಪ ವ್ಯಕ್ತಪಡಿಸಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ಸಹಕರಿಸಿ ಇಂತಹ ಸಾವು ನೋವುಗಳನ್ನು ತಪ್ಪಿಸಲು ಮನವಿ ಮಾಡಿದ್ದಾರೆ.
Youngest member of the police family to succumb to Covid. 24 year old, PSI Shamili of Kolar, attached to DK district lost her battle with COVID.
May her soul rest in peace.
But it could be any of us. Please cooperate with police, stay home and stay safe. pic.twitter.com/s7ecNSdZ67— DGP KARNATAKA (@DgpKarnataka) May 18, 2021
ಇದನ್ನೂ ಓದಿ:
ಚಿಕ್ಕಮಗಳೂರು: ಒಂದೇ ಗ್ರಾಮದ 31 ಜನರಿಗೆ ಕೊರೊನಾ ಪಾಸಿಟಿವ್, 48 ಪೊಲೀಸ್ ಸಿಬ್ಬಂದಿಗೂ ಸೋಂಕು ದೃಢ