ಯುವ ನಿಧಿ ಗ್ಯಾರಂಟಿ ಜಾರಿಗೆ ದಿನಗಣನೆ: ಯಾರೆಲ್ಲ ಅರ್ಹರು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

| Updated By: Ganapathi Sharma

Updated on: Dec 15, 2023 | 7:37 AM

Yuva Nidhi Scheme: ‘ಯುವ ನಿಧಿ’ ನಿರುದ್ಯೋಗ ಭತ್ಯೆ ಯೋಜನೆಗೆ ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಯೋಜನೆಯಡಿ ಭತ್ಯೆ ಪಡೆಯಲು ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಕೆ ಅಥವಾ ನೋಂದಣಿ ಹೇಗೆ? ಯಾವೆಲ್ಲ ದಾಖಲೆಗಳು ಬೇಕೆಂಬ ಮಾಹಿತಿ ಇಲ್ಲಿದೆ.

ಯುವ ನಿಧಿ ಗ್ಯಾರಂಟಿ ಜಾರಿಗೆ ದಿನಗಣನೆ: ಯಾರೆಲ್ಲ ಅರ್ಹರು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 15: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಉಚಿತ ಗ್ಯಾರಂಟಿ (Guarantee Scheme) ಯೋಜನೆಗಳಲ್ಲಿ ಒಂದಾದ ‘ಯುವ ನಿಧಿ’ ನಿರುದ್ಯೋಗ ಭತ್ಯೆ (Yuva Nidhi Scheme) ನೋಂದಣಿಗೆ ದಿನಗಣನೆ ಆರಂಭವಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಜಾರಿಗೊಳಿಸಲಾದ ನಿರುದ್ಯೋಗ ಭತ್ಯೆ ಯೋಜನೆಗೆ ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಜನವರಿ ತಿಂಗಳಲ್ಲಿ ಯುವ ನಿಧಿ ಅಡಿಯಲ್ಲಿ ಸರ್ಕಾರವು ನಿರುದ್ಯೋಗಿ ಪದವೀಧರರಿಗೆ 3,000 ರೂ. ಮತ್ತು ನಿರುದ್ಯೋಗಿ ಡಿಪ್ಲೋಮಾದಾರರಿಗೆ 1,500 ರೂ. ಪ್ರತಿ ತಿಂಗಳು ಎರಡು ವರ್ಷಗಳವರೆಗೆ ನೀಡಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಗೆ ಬಜೆಟ್‌ನಲ್ಲಿ 250 ಕೋಟಿ ರೂ. ಮೀಸಲಿಡಲಾಗಿದ್ದು, ಇದನ್ನು 2023-24ನೇ ಹಣಕಾಸು ವರ್ಷಕ್ಕೆ 1,500 ಕೋಟಿ ರೂ.ಗೆ ಮತ್ತು 2024-25ನೇ ಹಣಕಾಸು ವರ್ಷಕ್ಕೆ 2,500 ಕೋಟಿ ರೂಪಾಯಿಗೆ ಹೆಚ್ಚಿಸುವುದಾಗಿ ಸಚಿವರು ಹೇಳಿದ್ದಾರೆ.

ನಿರುದ್ಯೋಗ ಭತ್ಯೆ ಯೋಜನೆಗೆ ಸುಮಾರು ಐದು ಲಕ್ಷ ಪದವೀಧರರು ಮತ್ತು ಡಿಪ್ಲೋಮಾದಾರರು ಅರ್ಹರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.

ಯುವ ನಿಧಿಗೆ ನೋಂದಣಿ ಹೇಗೆ?

ಯುವ ನಿಧಿ ಯೋಜನೆಯಡಿ 2 ವರ್ಷ ನಿರುದ್ಯೋಗ ಭತ್ಯೆ ಪಡೆಯಲು ಬಯಸುವವರು ಇದೇ 26ರಿಂದ ಅರ್ಜಿ ಸಲ್ಲಿಸಬಹುದಾಗಿದೆ. https://sevasindhu.karnataka.gov.in ಈ ವೆಬ್​​ಸೈಟ್ ಮೂಲಕ ಯುವನಿಧಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜನವರಿ 2024 ರಲ್ಲಿ ಯುವ ನಿಧಿಯ ಮೊದಲ ಕಂತಿನ ಹಣ ಪಾವತಿಯಾಗಲಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ.

ಯುವ ನಿಧಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಲ್ಲ?

  • ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆದು ಅಧ್ಯಯನ ಮುಂದುವರೆಸಿರುವವರು.
  • ಯಾವುದೇ ಅಪ್ರೆಂಟಿಸ್‌ ಹುದ್ದೆಗೆ ನಿಯೋಜನೆಗೊಂಡಿರುವವರು.
  • ಸರ್ಕಾರಿ ಮತ್ತು ಖಾಸಗಿ ವಲಯ ಉದ್ಯೋಗ ಪಡೆದಿರುವವರು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್‌
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಪದವಿ ಅಥವಾ ವೃತ್ತಿಪರ ಕೋರ್ಸ್‌ ಪಡೆದ ಪ್ರಮಾಣ ಪತ್ರ ಅಥವಾ ಪಾಸ್‌ ಸರ್ಟಿಫಿಕೇಟ್‌
  • ಕೋರ್ಸ್‌ ಮುಗಿದು 6 ತಿಂಗಳಾದರೂ ಉದ್ಯೋಗ ಪಡೆಯದ ಕುರಿತು ಸ್ವಯಂ ದೃಢೀಕೃತ ಪ್ರಮಾಣ ಪತ್ರ ಅಥವಾ ನೋಟರಿ
  • ಬ್ಯಾಂಕ್‌ ಖಾತೆ ಪಾಸ್ ಬುಕ್‌ ಪ್ರತಿ

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ‘ಯುವನಿಧಿ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್

ಒಟ್ಟಿನಲ್ಲಿ ಡಿಗ್ರಿ, ಡಿಪ್ಲೋಮಾ ಮುಗಿಸಿ ಉದ್ಯೋಗ ನೀರಿಕ್ಷೆಯಲ್ಲಿರುವ ನಿರುದ್ಯೋಗಿ ಯುವಕ, ಯುವತಿಯರಿಗೆ 2 ವರ್ಷ ಉದ್ಯೋಗ ಸಿಗುವ ವರೆಗೂ ಯುವ ನಿಧಿ ಮೂಲಕ ಹಣ ದೊರೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ