ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಶುಶ್ರೂಷಕಿ ಸಂಧ್ಯಾ ಎಸ್ ಹಾನಗಲ್ ಎಲ್ಲರೂ ಗ್ರೇಟ್ ಎನ್ನುವಂತಹ ಕೆಲಸ ಮಾಡುತ್ತಿದ್ದಾರೆ. ಕಳೆದ 21 ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿರುವ ಸಂಧ್ಯಾ, ಕಳೆದ ಕೆಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಎರಡೂ ಕಿಡ್ನಿಗಳು ಫೇಲ್ ಆಗಿದ್ದರೂ ಕರ್ತವ್ಯವನ್ನು ಮಾತ್ರ ಎಂದಿಗೂ ಬಿಟ್ಟಿಲ್ಲ.
ಕೊರೊನಾ ಸಂದರ್ಭದಲ್ಲೂ ವಾರಿಯರ್ ಆಗಿ ಸೇವೆ:
ಈಗ ಎಲ್ಲೆಲ್ಲೂ ಹೆಮ್ಮಾರಿ ಕೊರೊನಾದ ಆರ್ಭಟ ಶುರುವಾಗಿದೆ. ಆದರೂ ನರ್ಸ್ ಸಂಧ್ಯಾ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡಿನಲ್ಲಿ ಕೊವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಭಯ ಶುರುವಾದ್ಮೇಲೆ ಜಿಲ್ಲಾಸ್ಪತ್ರೆ ಮುಖ್ಯಸ್ಥರು ಸೇರಿದಂತೆ ವೈದ್ಯರು ನರ್ಸ್ ಸಂಧ್ಯಾರಿಗೆ ಕೆಲಸಕ್ಕೆ ಬರಬೇಡಿ, ಮನೆಯಲ್ಲೇ ಆರಾಮಾಗಿರಿ ಎಂದು ಸಲಹೆ ನೀಡಿದ್ದರಂತೆ. ಆದರೆ ಕರ್ತವ್ಯವನ್ನೆ ದೇವರು ಎಂದು ನಂಬಿರುವ ನರ್ಸ್ ಸಂಧ್ಯಾ, ಕೆಲವೇ ಕೆಲವು ದಿನಗಳ ಕಾಲ ರಜೆ ಪಡೆದು ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ.
ತಾಯಂದಿರು ಮತ್ತು ಮಕ್ಕಳ ಆರೈಕೆ:
ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ 19 ಆಸ್ಪತ್ರೆ ಆರಂಭವಾಗಿದೆ. ಹೀಗಾಗಿ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ನೋಡಿಕೊಳ್ಳಲು ಹೆಚ್ಚಿನ ಸಿಬ್ಬಂದಿ ಇಲ್ಲ. ಇಂತಹ ಸಮಯದಲ್ಲೂ ರಜೆ ಪಡೆದು ಮನೆಯಲ್ಲಿ ಕುಳಿತುಕೊಳ್ಳುವುದು ಬೇಡವೆಂದು ನರ್ಸ್ ಸಂಧ್ಯಾ, ಮಹಿಳಾ ಮತ್ತು ಮಕ್ಕಳ ವಾರ್ಡಿನಲ್ಲಿ ಹೆರಿಗೆಯಾದ ತಾಯಂದಿರು ಮತ್ತು ಮಕ್ಕಳ ಆರೈಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಹೆರಿಗೆಯಾದ ತಾಯಂದಿರಿಗೆ ಅಗತ್ಯ ಸಲಹೆಗಳನ್ನು ನೀಡುತ್ತಾ ತಮ್ಮ ಮಕ್ಕಳಂತೆಯೇ ಆಗ ತಾನೆ ಜನಿಸಿದ ಮಕ್ಕಳನ್ನ ಆರೈಕೆ ಮಾಡುತ್ತಿದ್ದಾರೆ.
ಎಲ್ಲೆಡೆ ಕೊರೊನಾ ಅಬ್ಬರ ಜೋರಾಗಿ ಇರುವುದರಿಂದ ಅನೇಕರು ಮನೆಯಲ್ಲಿರುವ ಅವಕಾಶ ಸಿಕ್ಕರೆ ಸಾಕು ಎನ್ನುತ್ತಾರೆ. ಅಂಥವರ ನಡುವೆ ನರ್ಸ್ ಸಂಧ್ಯಾ ಎರಡೂ ಕಿಡ್ನಿಗಳು ಇಲ್ಲದಿದ್ದರೂ ಕೊವಿಡ್ ವಾರಿಯರ್ಸ್ ಆಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಗಳು ಆಗದಂತೆ ಕೆಲಸ ಮಾಡುತ್ತಿದ್ದಾರೆ. 2013ರಿಂದಲೂ ನರ್ಸ್ ಸಂಧ್ಯಾ ರೋಗಿಗಳ ಪಾಲಿಗೆ ದೇವರಾಗಿ ಕೆಲಸ ಮಾಡುತ್ತಿದ್ದಾರೆ. ಎದೆಯಲ್ಲಿ ಸಾಕಷ್ಟು ನೋವು, ಯಾವಾಗ ಏನಾಗುತ್ತದೆಯೋ ಎಂಬ ಭಯವಿದೆ. ಆದರೂ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಒಂದೆಡೆ ಕಿಡ್ನಿಗಳು ವೈಫಲ್ಯ ಆಗಿರುವ ನೋವು, ಮತ್ತೊಂದೆಡೆ ರೋಗಿಗಳ ಆರೈಕೆ ಮಾಡಬೇಕು ಎನ್ನುವ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ನರ್ಸ್ ಸಂಧ್ಯಾರ ಕೆಲಸ ಶ್ಲಾಘನೀಯವೆ. ಆದರೆ ಸರ್ಕಾರ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ನರ್ಸಮ್ಮನಿಗೆ ಕಿಡ್ನಿ ಟ್ರಾನ್ಸಫರೆಂಟ್ ಮಾಡಿಸುವ ಮೂಲಕ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಾ ರೋಗಿಗಳ ಆರೈಕೆಯಲ್ಲಿ ತೊಡಗಿರುವ ನರ್ಸಮ್ಮನ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.