ನೆಲಮಂಗಲ: ಲಾಕ್‌ಡೌನ್‌ನಿಂದ ಇಡೀ ದೇಶವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೂಲಿ ಕಾರ್ಮಿಕರ ಬದುಕಂತೋ ದುಸ್ಥಿತಿಯ ಹಂತಕ್ಕೆ ತಲುಪಿದೆ. ವಲಸೆ, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಬಳವಿಲ್ಲದೆ ಪರದಾಡುವ ಪರಿಸ್ಥಿತಿ ಕಂಡು ಕೇಂದ್ರ ಸರ್ಕಾರ ಶ್ರಮಿಕ್ ಹೆಸರಿನ ವಿಶೇಷ ರೈಲು ಯೋಜನೆ ಜಾರಿಗೆ ತಂದಿದೆ. ಇದುವರೆಗೂ ರಾಜ್ಯಾದ್ಯಂತ ಸುಮಾರು 2.8 ಲಕ್ಷ ವಲಸಿಗರು ತಮ್ಮ ಊರುಗಳಿಗೆ ತೆರಳಿದ್ದು, ಇಂದು ಸಹ ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲು ಪ್ರಯಾಣಿಸಲಿವೆ.
ಬೆಂಗಳೂರಿನ ಚಿಕ್ಕಬಾಣವಾರ ರೈಲು ನಿಲ್ದಾಣದಿಂದ ಉತ್ತರಪ್ರದೇಶದ ಘೋರಕ್‌ಪುರಕ್ಕೆ ಸಂಜೆ 4 ಗಂಟೆಗೆ ರೈಲು ಹೊರಡಲಿದ್ದು, ಹೊಸೂರು ರಸ್ತೆ ರೈಲು ನಿಲ್ದಾಣದಿಂದ ಅಸ್ಸಾಂ ರಾಜ್ಯದ ದಿಬ್ರುಗರ್ ನಗರಕ್ಕೆ ಸಂಜೆ 4ಕ್ಕೆ ಮತ್ತೊಂದು ರೈಲು ಪ್ರಯಾಣ ಬೆಳಸಲಿದೆ. ಉಳಿದಂತೆ ಕ್ರಾಂತೀವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಪಶ್ಚಿಮಬಂಗಾಳದ ಜಲ್ಪೈಗುರಿ ನಗರಕ್ಕೆ ಸಂಜೆ 6 ಗಂಟೆ ಹಾಗೂ ರಾತ್ರಿ 8 ಗಂಟೆಗೆ ಹೊರಡಲಿದ್ದು, ರಾತ್ರಿ 10ಕ್ಕೆ ಒಡಿಸ್ಸಾ ರಾಜ್ಯದ ಬಾಲಸೋರಗೆ ನಗರಕ್ಕೆ ಮತ್ತೊಂದು ರೈಲು ಪ್ರಯಾಣ ಆರಂಭಿಸಲಿದೆ. ಪ್ರತಿ ರೈಲಿನಲ್ಲೂ 1500 ಜನರಂತೆ 5 ರೈಲಿನಲ್ಲಿ 7500 ವಲಸಿಗರು ತಾಯ್ನಾಡಿಗೆ ಪ್ರಯಾಣ ಬೆಳಸಲಿದ್ದಾರೆ.
ನಾಗರಿಕ ರೈಲು ಸೇವೆ ಆರಂಭವಾಗಿದ್ದರೂ ಸಹ ಶ್ರಮಿಕ್ ರೈಲು ಯೋಜನೆ ಕೆಲ ದಿನಗಳ ಕಾಲ ಮುಂದುವರೆಯಲಿದ್ದು, ಸೇವಾ ಸಿಂಧು ಮೂಲಕ ನೋಂದಣಿ ಮಾಡಿಕೊಂಡಿರುವ ಪ್ರಯಾಣಿಕರಿಗೆ ಅವಕಾಶ ಮಾಡಿಕೊಡಲಾಗುವುದು. ಬೆಂಗಳೂರಿನ ವಿವಿಧೆಡೆ ನೆಲೆಸಿರುವ ಕಾರ್ಮಿಕರನ್ನು ಬಿಬಿಎಂಪಿ ಅಧಿಕಾರಿಗಳು ಬಿಎಂಟಿಸಿ ಬಸ್ ಮೂಲಕ ಕರೆತರಲಿದ್ದು ರೈಲು ನಿಲ್ದಾಣದ ಬಳಿ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಆರೋಗ್ಯ ಸ್ಥಿರವಾಗಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಎಲ್ಲಾ ಬಸ್‌ಗಳಿಗೂ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗುವುದು ಹಾಗೂ ಪ್ರತಿ ರೈಲು ನಿಲ್ದಾಣದಲ್ಲಿ ನಾಗರಿಕ ಪೊಲೀಸ್ ಹಾಗೂ ರೈಲ್ವೆ ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗುವುದು.
Published On - 11:39 am, Mon, 1 June 20