
ಶುಕ್ರವಾರದಂದು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಶಿಬಿರಗಳತ್ತ ಗುಂಡು ಹಾರಿಸಿದಾಗ ಪ್ರತಿದಾಳಿ ನಡೆಸಿದ ಭಾರತದ ಯೋಧರು ಕನಿಷ್ಠ 8 ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದಾರೆ, ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ವರದಿಯ ಪ್ರಕಾರ ಭಾರತೀಯ ಸೈನಿಕರ ಗುಂಡಿಗೆ ಬಲಿಯಾದ ಪಾಕ್ ಯೋಧರಲ್ಲಿ ಪಾಕಿಸ್ತಾನ ಸೇನೆಯ ವಿಶೇಷ ಸೇವಾ ಗುಂಪಿಗೆ ಸೇರಿದ 2-3 ಕಮಾಂಡೊಗಳು ಸಹ ಸೇರಿದ್ದಾರೆ.
ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ 10-12 ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಅವರ ಸೇನಾ ಬಂಕರ್, ಲಾಂಚ್ ಪ್ಯಾಡ್ ಮತ್ತು ಇಂಧನ ತುಂಬಿಸಿಟ್ಟಿದ್ದ ಬ್ಯಾರೆಲ್ಗಳನ್ನು ಧ್ವಂಸಗೊಳಿಸಲಾಗಿದೆಯೆಂದು, ಮೂಲಗಳ ಹೇಳಿಕೆಯನ್ನು ಆಧರಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಶುಕ್ರವಾರದಂದು ಗುರೆಜ್ ಸೆಕ್ಟರ್, ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಪ್ರದೇಶಗಳ ಹಲವಾರು ಕಡೆಗಳಲ್ಲಿ ಪಾಕಿಸ್ತಾನದ ಸೈನಿಕರು ಮನಬಂದಂತೆ ಗಂಡು ಹಾರಿಸಿದ ಪರಿಣಾಮವಾಗಿ ನಾಲ್ವರು ಭದ್ರತಾ ಸಿಬ್ಬಂದಿ, ಒಬ್ಬ ಗಡಿ ಭದ್ರತಾ ದಳದ ಇನ್ಸ್ಪೆಕ್ಟರ್ ಮತ್ತು ನಾಲ್ವರು ನಾಗರಿಕರು ಬಲಿಯಾಗಿದ್ದಾರೆ, ಎಂದು ಭದ್ರತಾ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.