Tata Wins Air India Bid: ಟಾಟಾ ಸನ್ಸ್​ ಪಾಲಿಗೆ ಏರ್​ಇಂಡಿಯಾ ಖರೀದಿಯ ಹೆಮ್ಮೆ; ಮುಂದಿನ ಹಾದಿಯ ಸವಾಲುಗಳು

| Updated By: Srinivas Mata

Updated on: Oct 01, 2021 | 2:10 PM

ಏರ್​ಇಂಡಿಯಾ ಬಿಡ್​ನಲ್ಲಿ ಟಾಟಾ ಸನ್ಸ್ ಯಶಸ್ವಿ ಆಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ಬರಬೇಕಿದ್ದು, ಒಂದು ವೇಳೆ ಇದು ನಿಜವಾದಲ್ಲಿ ಮುಂದಿರುವ ಸವಾಲುಗಳೇನು ಎಂಬ ವಿಶ್ಲೇಷಣೆ ಇಲ್ಲಿದೆ.

Tata Wins Air India Bid: ಟಾಟಾ ಸನ್ಸ್​ ಪಾಲಿಗೆ ಏರ್​ಇಂಡಿಯಾ ಖರೀದಿಯ ಹೆಮ್ಮೆ; ಮುಂದಿನ ಹಾದಿಯ ಸವಾಲುಗಳು
ರತನ್ ಟಾಟಾ ಮತ್ತು ಏರ್​ಇಂಡಿಯಾ ವಿಮಾನ (ಸಂಗ್ರಹ ಚಿತ್ರ)
Follow us on

50 ವರ್ಷಕ್ಕೂ ಹೆಚ್ಚು ಸಮಯದ ಕನಸು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಪಾಲಿಗೆ ನನಸಾಗಿದೆ. ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆಯು ಸಂಪೂರ್ಣವಾಗಿ ಟಾಟಾ ಸಮೂಹದ ಒಡೆತನಕ್ಕೆ ಬರಲಿದೆ. ನಷ್ಟದಲ್ಲಿದ್ದ ಏರ್​ ಇಂಡಿಯಾವನ್ನು ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ಬಿಡ್​ ಆಹ್ವಾನಿಸಲಾಗಿತ್ತು. ಹಾಗೆ ಬಿಡ್​ ಮಾಡಿದ್ದ ಟಾಟಾದ ಪ್ರಸ್ತಾವವನ್ನು ಅಧಿಕಾರಿಗಳು ಮಾಡಿದ ಶಿಫಾರಸಿನ ಮೇಲೆ ಸಚಿವರನ್ನು ಒಳಗೊಂಡಂಥ ಸಮಿತಿಯು ಒಪ್ಪಿಕೊಂಡಿದೆ ಎನ್ನಲಾಗಿದೆ. ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ಹೇಳುವಂತೆ, ಉದ್ಯಮಿ ಅಜಯ್​ ಸಿಂಗ್ ಅವರು ಮಾಡಿದ್ದ ಬಿಡ್​ಗಿಂತ ಟಾಟಾ ಸನ್ಸ್​ ಮಾಡಿದ್ದು ಹೆಚ್ಚಿತ್ತು. ಅಧಿಕೃತವಾಗಿ ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಹೊರಬಂದಿಲ್ಲವಾದ್ದರಿಂದ ಹೆಚ್ಚಿನ ವಿವರವನ್ನು ಹಾಗೂ ಇದನ್ನು ಬಹಿರಂಗ ಮಾಡಿದವರ ಹೆಸರನ್ನು ತಿಳಿಸಲು ಒಪ್ಪಿಕೊಂಡಿಲ್ಲ. ವಿಮಾನ ಯಾನ ಸಚಿವಾಲಯದ ವಕ್ತಾರರಾಗಲೀ ಹಣಕಾಸು ಸಚಿವಾಲಯದಿಂದಾಗಲೀ ಅಥವಾ ಟಾಟಾ ಸನ್ಸ್​ನ ಪ್ರತಿನಿಧಿಗಳಿಂದಾಗಲೀ ಯಾವ ಪ್ರತಿಕ್ರಿಯೆಯೂ ಬಂದಿಲ್ಲ.

ಈಗಿನ ಪ್ರಸ್ತಾವಿತ ಹಸ್ತಾಂತರವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪಾಲಿಗೆ ಮಹತ್ವದ ವಿಜಯವಾಗಿದೆ. ಏಕೆಂದರೆ ಬಜೆಟ್​ ಕೊರತೆಯನ್ನು ತುಂಬಿಕೊಳ್ಳುವ ಸಲುವಾಗಿ ಕೇಂದ್ರದಿಂದ ಕೆಲವು ದಿಟ್ಟವಾದ ಖಾಸಗೀಕರಣ ಯೋಜನೆಗಳನ್ನು ಮುಂದಿಡಲಾಗಿತ್ತು. ಇದರ ಜತೆಗೆ ದಶಕಗಳಿಂದಲೂ ಏರ್​ಇಂಡಿಯಾ ನಷ್ಟದಲ್ಲೇ ನಡೆಯುತ್ತಿತ್ತು. ಆ ಹೊರೆಯನ್ನು ಸರ್ಕಾರವು ಇಳಿಸಿಕೊಳ್ಳುವುದಕ್ಕೆ ಬಯಸಿತ್ತು. ಹಲವು ಸರ್ಕಾರಗಳು ಈ ಮಾರಾಟಕ್ಕೆ ಯತ್ನಿಸಿದ್ದವು. 1932ರಲ್ಲಿ ಟಾಟಾ ಏರ್​ಲೈನ್ಸ್​ ಎಂದು ಆರಂಭವಾಗಿದ್ದ ಇಂಡಿಯನ್ ಏರ್​ಲೈನ್ಸ್​ ಮಾರಾಟಕ್ಕೆ ರಾಜಕೀಯ ವಿರೋಧಗಳು ಒಂದು ಕಡೆ ವ್ಯಕ್ತವಾದರೆ, ಮತ್ತೊಂದು ಕಡೆ ಸೂಕ್ತ ಖರೀದಿದಾರರು ಸಹ ಮುಂದೆ ಬರಲಿಲ್ಲ.

ಏರ್​ಇಂಡಿಯಾವನ್ನು ತೆಕ್ಕೆಗೆ ಪಡೆದದ್ದು ಟಾಟಾಗೆ ಮಹತ್ವದ ಸಂಗತಿ
ಈಗ ಮತ್ತೆ ಟಾಟಾ ಸನ್ಸ್​ಗೆ ಏರ್​ ಇಂಡಿಯಾ ಬಂದಿರುವುದು ಹಲವು ಕಾರಣಗಳಿಗೆ ಮಹತ್ತರವಾದ ಸಂಗತಿ ಆಗಿದೆ. ಉಪ್ಪಿನಿಂದ ಸಾಫ್ಟ್​ವೇರ್​ ತನಕ ಅಗಾಧ ಉದ್ಯಮ ಸಾಮ್ರಾಜ್ಯವನ್ನು ಹೊಂದಿರುವ ಈ ಕಂಪೆನಿಯು, ಬ್ರಿಟಿಷ್ ವಿಲಾಸಿ ಕಾರು ತಯಾರಕ ಜಾಗ್ವಾರ್ ಲ್ಯಾಂಡ್​ ರೋವರ್​ನ ಮಾಲೀಕರೂ ಹೌದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ತಾನೇ ಸ್ಥಾಪಿಸಿದ್ದ ಕಂಪೆನಿಯೊಂದರರ ಮಾಲೀಕತ್ವವು 90 ವರ್ಷದ ನಂತರ ಮರಳಿ ಬರುತ್ತಿದೆ. ಭಾರತ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ದಂತಕಥೆ ಎಂಬಂತಿರುವ ಕೈಗಾರಿಕೋದ್ಯಮಿ ಮತ್ತು ದಾನಿ ಜೆ.ಆರ್​.ಡಿ. ಟಾಟಾ ಅವರು ಭಾರತದ ಮೊದಲ ಲೈಸೆನ್ಸ್ ಹೊಂದಿದ ಪೈಲಟ್. 1930ರ ದಶಕದಲ್ಲಿ ಆಗಿನ ಅವಿಭಜಿತ ಬ್ರಿಟಿಷ್ ಆಡಳಿತದ ಭಾತರದಲ್ಲಿ ಕರಾಚಿ ಹಾಗೂ ಬಾಂಬೆ (ಈಗಿನ ಮುಂಬೈ) ವಿಮಾನ ಹಾರಾಟ ನಡೆಸುತ್ತಿತ್ತು. ಯಾವಾಗ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಆರಂಭಿಸಿತೋ ಹಾಗೂ 1940ರ ದಶಕದಲ್ಲಿ ಸಾರ್ವಜನಿಕ ಷೇರು ವಿತರಣೆ ಮಾಡಿತೋ ಏರ್​ ಇಂಡಿಯಾ ಬಹಳ ಬೇಗ ಜನಪ್ರಿಯ ಆಯಿತು. ಅದರ ಜಾಹೀರಾತಿನಲ್ಲಿ ಬಾಲಿವುಡ್ ನಟಿಯರು ಕಾಣಿಸಿಕೊಳ್ಳುತ್ತಿದ್ದರು. ಇದೆಲ್ಲ ರಾಷ್ಟ್ರೀಕರಣದ ಮುಂಚಿನ ಸ್ಥಿತಿ.

ಸರ್ಕಾರವು ಏರ್​ಇಂಡಿಯಾದ ರಾಷ್ಟ್ರೀಕರಣಕ್ಕೆ ನಿರ್ಧಾರ ಮಾಡಿತು. ಇದರಿಂದ ಜೆಆರ್​ಡಿ ಟಾಟಾ ಅವರ ಮನಸ್ಸು ಮುರಿಯಿತು. ಈ ಬಗ್ಗೆ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಗೆ ಪತ್ರ ಬರೆದರು. ತಮ್ಮ ಬೇಸರವನ್ನು ಹೇಳಿಕೊಂಡರು. ಸರ್ಕಾರವು ಈ ವಿಮಾನ ಯಾನ ಸಂಸ್ಥೆಯನ್ನು ವಹಿಸಿಕೊಂಡರೆ ಅಂತರರಾಷ್ಟ್ರೀಯ ಗುಣಮಟ್ಟದ ಸೇವೆ ಕೊಡುವುದು ಕಷ್ಟ ಎಂಬುದು ಜೆಆರ್​ಡಿ ಟಾಟಾ ಅವರ ಭಾವನೆ ಆಗಿತ್ತು. ಆದರೂ ಸರ್ಕಾರದಿಂದ ಏರ್​ಇಂಡಿಯಾವನ್ನು ವಹಿಸಿಕೊಳ್ಳಲಾಯಿತು. 1990ರ ದಶಕದ ಮೇಲೆ, ಖಾಸಗಿ ವಿಮಾನ ಯಾನ ಸಂಸ್ಥೆಗಳ ಪ್ರವೇಶ ಆಯಿತೋ, 2000ನೇ ಇಸವಿಯಿಂದ ಖಾಸಗಿ ಕಂಪೆನಿಗಳಿಂದ ಕಡಿಮೆ ಬೆಲೆಗೆ ಪ್ರಯಾಣ ದರ ನಿಗದಿ ಮಾಡಿ, ಸ್ಪರ್ಧೆ ನೀಡಲು ಆರಂಭವಾಯಿತೋ ಏರ್​ಇಂಡಿಯಾದ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಎರಡೂ ಕುಸಿಯಿತು.

2007ರ ನಂತರ ಚೇತರಿಸಿಕೊಳ್ಳಲೇ ಇಲ್ಲ
ಏರ್​ಇಂಡಿಯಾವು ಅದರ ಮಹಾರಾಜ ಮಸ್ಕತ್​ಗೆ ಹೆಸರಾಗಿತ್ತು. ವಿದೇಶಗಳಿಗೆ ತೆರಳುವುದಕ್ಕೆ ಏರ್​ಇಂಡಿಯಾ ಒಂದೇ ಆಯ್ಕೆ ಏನಲ್ಲ ಎಂಬ ಸ್ಥಿತಿ ದಿಢೀರನೇ ಉದ್ಭವಿಸಿತು. ವಿಮಾನ ಯಾನ ಸಂಸ್ಥೆಯ ಆತಿಥ್ಯ ಹಾಗೂ ಸೇವೆಗೆ ಇದ್ದ ಹೆಸರು ಸಹ ಕುಸಿಯುತ್ತಾ ಬಂತು. ಗಲ್ಫ್​ ಸಂಸ್ಥೆಗಳಾದ ಎಮಿರೇಟ್ಸ್​ ಏರ್​ಲೈನ್ಸ್, ಎಥಿಹಾದ್ ಏರ್​ವೇಸ್​ ಪಿಜೆಎಸ್​ಸಿ ಒಳಗೊಂಡಂತೆ ಹಲವು ಯುರೋಪ್ ಮತ್ತು ಅಮೆರಿಕಾಗೆ ದುಬೈ ಹಾಗೂ ಅಬುಧಾಬಿ ಮೂಲಕ ಕಡಿಮೆ ಬೆಲೆಯ ಹಾಗೂ ಅಡೆತಡೆರಹಿತ ಸೇವೆ ನೀಡಲು ಆರಂಭಿಸಿದವು. ಇದರಿಂದಾಗಿ ಏರ್​ಇಂಡಿಯಾಗೆ ಮತ್ತೂ ಪೆಟ್ಟು ಬಿತ್ತು. ಇನ್ನು 2007ರಲ್ಲಿ ಏರ್​ಇಂಡಿಯಾವು ದೇಶೀಯ ಆಪರೇಟರ್​ ಆದ ಇಂಡಿಯನ್ ಏರ್​ಲೈನ್ಸ್​ ಜತೆ ವಿಲೀನ ಆಗಿ, ನಷ್ಟವು ಬೆಟ್ಟದಂತೆ ಬೆಳೆಯುತ್ತಾ ಹೋಯಿತು. 2013ರ ಹೊತ್ತಿಗೆ ಆಗಿನ ನಾಗರಿಕ ವಿಮಾನ ಯಾನ ಸಚಿವರೇ ಹೇಳಿದರು: ಖಾಸಗೀಕರಣವೊಂದೇ ಏರ್​ಇಂಡಿಯಾ ಉಳಿಯುವುದಕ್ಕೆ ಇರುವ ಮಾರ್ಗ ಎಂಬ ಮಾತನ್ನು. 2017ರಲ್ಲಿ ಸರ್ಕಾರವು ಅದಕ್ಕಾಗಿ ಮಾರ್ಗವೊಂದಕ್ಕೆ ಒಪ್ಪಿಗೆ ಸೂಚಿಸಿತು ಮತ್ತು ಪ್ರಕ್ರಿಯೆ ಆರಂಭಿಸಲು ಸಮಿತಿ ರಚಿಸಿತು.

ಈಚಿನ ಮಾರಾಟ ಪ್ರಯತ್ನ ಕೂಡ ಸಲೀಸಾಗೇನೂ ಇರಲಿಲ್ಲ. ಕೆಲ ಭಾಗವನ್ನು ಖರೀದಿ ಬಗ್ಗೆ ಸಾರ್ವಜನಿಕವಾಗಿ ಆಸಕ್ತಿ ತೋರಿದ ಏಕೈಕ ಏರ್​ಲೈನ್​ ಕಂಪೆನಿ ಇಂಡಿಗೋ. ಆದರೆ 2018ರಲ್ಲಿ ಇಂಡಿಗೋ ಸಹ ತಾಬು ಖರೀದಿ ಮಾಡವುದಿಲ್ಲ. ಇದನ್ನು ಸಂಪೂರ್ಣವಾಗಿ ಕೊಂಡು, ಲಾಭದಾಯಕ ಮಾಡೋದು ಕಷ್ಟ ಎಂದಿತು. ಇನ್ನೊಂದು ಕಡೆ ಖರೀದಿಗೆ ಬಿಡ್​ ಮಾಡುವವರು ಎಷ್ಟು ಸಾಲವನ್ನು ವಹಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆಯಾಯಿತು. ಇನ್ನು ಮೋದಿ ಅವರ ಸ್ವಂತ ಪಕ್ಷದೊಳಗೆ ಹಾಗೂ ಒಕ್ಕೂಟಗಳಿಂದ ಯೋಜನೆಗೆ ವಿರೋಧ ಬಂತು. ಈ ಮಧ್ಯೆ ಟಾಟಾ ಸಮೂಹದ ಹೆಸರು ಕೇಳಿಬಂತು. ಅದಾಗಲೇ ಏರ್​ಏಷ್ಯಾ ಇಂಡಿಯಾ ಮತ್ತು ವಿಸ್ತಾರದಲ್ಲಿ (ಸಿಂಗಾಪೂರ್ ಏರ್​ಲೈನ್ಸ್​ ಸಹಯೋಗದಲ್ಲಿ) ಆ ಕಂಪೆನಿಯ ದೊಡ್ಡ ಪಾಲಿದೆ. ಇದೀಗ ಮೂರನೇ ಏರ್​ಲೈನ್ಸ್​ ಟಾಟಾ ತೆಕ್ಕೆಗೆ ಬಂದಿದೆ.

ಏರ್​ಇಂಡಿಯಾಗೆ 60 ಸಾವಿರ ಕೋಟಿ ರೂಪಾಯಿ ಸಾಲ
2007ರಲ್ಲಿ ಇಂಡಿಯನ್ ಏರ್​ಲೈನ್ಸ್​ ಜತೆಗೆ ಏರ್​ ಇಂಡಿಯಾ ವಿಲೀನ ಆದ ಮೇಲೆ ಲಾಭದ ಹಳಿಗೆ ಮರಳಲೇ ಇಲ್ಲ. ಸದ್ಯಕ್ಕೆ ಏರ್​ಇಂಡಿಯಾಗೆ 60 ಸಾವಿರ ಕೋಟಿ ರೂಪಾಯಿ ಸಾಲ ಇದೆ. ಆದರೆ ಕೆಲವು ಆಕರ್ಷಕವಾದ ಆಸ್ತಿ ಇದೆ. ಅದರಲ್ಲಿ ಬೆಲೆ ಬಾಳುವ ಭೂಮಿ ಮತ್ತು ಲಂಡನ್​ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್​ ಸ್ಥಳ ಒಳಗೊಂಡಿದೆ. ಇದರಿಂದ ವಿಸ್ತಾರ ಏರ್​ಲೈನ್ಸ್​ ಬಿಜಿನೆಸ್ ಗ್ರಾಹಕರನ್ನು ಯುರೋಪ್​ಗೆ ನೇರ ವಿಮಾನಗಳ ಮೂಲಕ ಸೆಳೆಯಬಹುದಾಗಿದೆ. ಟಾಟಾದಿಂದ ಈ ಖರೀದಿ ಆದ ಮೇಲೂ ಪರೀಕ್ಷೆ ಎಂಬುದು ಇದ್ದೇ ಇದೆ. ಏಕೆಂದರೆ ಈಗಾಗಲೇ ಇರುವ ವಿಮಾನಯಾನದ ವ್ಯವಹಾರವನ್ನು ಉತ್ತಮವಾಗೇನೂ ನಡೆಸುತ್ತಿಲ್ಲ ಎಂಬ ಆರೋಪ ಇದೆ. ಅದು ಕೂ ಕಂಪೆನಿಯ ಒಟ್ಟಾರೆ ಆದಾಯದಲ್ಲಿ ತುಂಬ ಕಡಿಮೆ ಭಾಗವನ್ನು ಅದು ಹೊಂದಿದೆ. ಈ ಹಿಂದೆ ಟಾಟಾ ಸಮೂಹದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ್ದ ಸೈರಸ್​ ಮಿಸ್ತ್ರಿ ಅವರು ಮಾತನಾಡುತ್ತಾ, ಎರಡೂ ಏರ್​ಲೈನ್ ಉದ್ಯಮಕ್ಕೆ ನನ್ನ ವಿರೋಧ ಇತ್ತು ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ​

ಇದನ್ನೂ ಓದಿ: Air India ಬಿಡ್ ಗೆದ್ದ ಟಾಟಾ ಸನ್ಸ್; ಟಾಟಾ ಕಂಪನಿ ತೆಕ್ಕೆಗೆ ಏರ್ ಇಂಡಿಯಾ