ಅಮರಾವತಿ: ಚಂದ್ರಬಾಬು ನಾಯ್ಡು ಮತ್ತು ಜಗನ್‌ಮೋಹನ್ ರೆಡ್ಡಿ ರಾಜಕೀಯ ತಿಕ್ಕಾಟದಲ್ಲಿ ಜಗನ್ ರೆಡ್ಡಿ ಕೊನೆಗೂ ಚಂದ್ರಬಾಬು ನಾಯ್ಡುಗೆ ಬಲವಾದ ಏಟು ನೀಡಿದ್ದಾರೆ. ಅಮರವಾತಿಯನ್ನು ಗ್ರಾಂಡ್ ಕ್ಯಾಪಿಟಲ್ ಮಾಡುವ ನಾಯ್ಡು ಕನಸಿನ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ.
ಹೌದು ಆಂಧ್ರ ರಾಜ್ಯಪಾಲ ಬಿಶ್ವಭೂಷಣ್ ಹರಿಚಂದನ್ ಅವರು ಜಗನ್ ರೆಡ್ಡಿ ಸರ್ಕಾರದ ಮೂರು ರಾಜಧಾನಿಗಳ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ವೈಎಸ್‌ಆರ್ ಪಕ್ಷದ ಜಗನ್‌ಮೋಹನ್ ರೆಡ್ಡಿಯ ಮೂರು ರಾಜಧಾನಿಗಳ ಕನಸು ಯಾವುದಾದರೂ ಕಾನೂನು ತೊಂದರೆ ಬಾರದಿದ್ದರೆ ನನಸಾಗಲಿದೆ.
ಈ ಹೊಸ ಮಸೂದೆಯ ಪ್ರಕಾರ ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳು ಸ್ಥಾಪನೆಯಾಗಲಿವೆ. ಶಾಸಕಾಂಗ ರಾಜಧಾನಿಯಾಗಿ ಅಮರಾವತಿ. ಆಡಳಿತಾತ್ಮಕ ರಾಜಧಾನಿಯಾಗಿ ವಿಶಾಖಪಟ್ಟಣ ಹಾಗೂ ನ್ಯಾಯಾಂಗ ರಾಜಧಾನಿಯಾಗಿ ಕರ್ನೂಲ್ ಕಾರ್ಯನಿರ್ವಹಿಸಲಿವೆ.
ಆಂಧ್ರ ಪ್ರದೇಶದಲ್ಲಿ ಅಮರಾವತಿಯಲ್ಲೇ ಆಡಳಿತ ಕೇಂದ್ರೀಕರಣಕ್ಕೆ ವಿರೋಧಿಸುತ್ತಿದ್ದ ಜಗನ್, ಕೆಲ ವಿದೇಶಗಳ ಮಾದರಿಯಲ್ಲಿ ಮೂರು ರಾಜಧಾನಿಗಳ ಸ್ಥಾಪನೆಯತ್ತ ಒಲವು ಹೊಂದಿದ್ದರು. ಆದರೆ ಇದಕ್ಕೆ ಟಿಡಿಪಿಯ ಚಂದ್ರಬಾಬು ನಾಯ್ಡು ತೀವ್ರ ಒಪ್ಪಿರಲಿಲ್ಲ. ಬದಲು ಅಮರಾವತಿಯಲ್ಲಿ ಭವ್ಯ ರಾಜಧಾನಿ ನಿರ್ಮಾಣಕ್ಕೆ ಚಂದ್ರಬಾಬು ನಾಯ್ಡು ಚಾಲನೆ ನೀಡಿದ್ದರು. ಆದ್ರೆ ಈಗ ಅಧಿಕಾರಕ್ಕೆ ಬಂದ ಜಗನ್, ಚಂದ್ರಬಾಬು ನಾಯ್ಡು ಕನಸಿಗೆ ಎಳ್ಳು ನೀರು ಬಿಟ್ಟಿದ್ದಾರೆ.