ಬಾಗಲಕೋಟೆ: ಮಹಾಮಾರಿ ಕೊರೊನಾ ಬಂದು ಒಂದು ವರ್ಷ ಕಳೆದರೂ ಅದರಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಜನವರಿಯಲ್ಲಿ ಕೊರೊನಾ ಸೋಂಕು ಉಲ್ಬಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಾದಾಮಿಯ ಸುಪ್ರಸಿದ್ಧ ಬನಶಂಕರಿ ಜಾತ್ರೆ, ರಥೋತ್ಸವ ರದ್ದು ಮಾಡಲಾಗಿದೆ. ಇದರಿಂದ ಸಾವಿರಕ್ಕು ಹೆಚ್ಚು ಕಲಾವಿದರು ಅತಂತ್ರರಾಗಿದ್ದಾರೆ.
ನಾಡಿನ ಶಕ್ತಿಪೀಠಗಳಲ್ಲಿ ಬನಶಂಕರಿ ದೇಗುಲ ಕೂಡ ಒಂದಾಗಿದೆ. ಸುಮಾರು 1 ತಿಂಗಳುಗಳ ಕಾಲ ಹಗಲು ರಾತ್ರಿ ನಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿಯ ಬಹುದೊಡ್ಡ ಜಾತ್ರೆಯನ್ನು ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರು ಅತಂತ್ರರಾಗಿದ್ದಾರೆ. 15ಕ್ಕೂ ಹೆಚ್ಚು ನಾಟಕ ಕಂಪನಿಗಳ 1,500 ಕಲಾವಿದರ ಬದುಕಿಗೆ ಹೊಡೆತ ಬಿದ್ದಿದೆ. ಜಾತ್ರೆಗೆ ಅನುಮತಿ ನೀಡಿ ಎಂದು ವೃತ್ತಿ ರಂಗಭೂಮಿ ಕಲಾವಿದರು ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ ನಿಯಮ ಪಾಲಿಸಿ ನಾಟಕ ನಡೆಸುತ್ತೇವೆ. ಜಾತ್ರೆ, ನಾಟಕಕ್ಕೆ ಅನುಮತಿ ನೀಡಿ ಎಂದು ಕೈ ಮುಗಿದು ಕಂಬನಿ ಮಿಡಿದು ಅಂಗಲಾಚಿದ್ದಾರೆ. ದೊಡ್ಡ ದೊಡ್ಡ ಸಮಾವೇಶಗಳಿಗೆ ಅನುಮತಿ ನೀಡುತ್ತೀರಿ ಅಲ್ಲಿ ದೈಹಿಕ ಅಂತರ ಕಾಪಾಡಲ್ಲ, ಮಾಸ್ಕ್ ಧರಿಸಿರುವುದಿಲ್ಲ. ಅದನ್ನು ಯಾರೂ ಕೇಳುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.