ಹಾವೇರಿ: ಯಾರು, ಯಾವುದೇ ಊರಿಗೆ ಅಥವಾ ಸಂಬಂಧಿಕರ ಮನೆಗಳಿಗೆ ಹೋಗಬೇಕಾದರೆ ಬ್ರೇಡ್, ಖಾರ ಹೀಗೆ ಬೇಕರಿ ಅಂಗಡಿಯಲ್ಲಿನ ತಿನಿಸುಗಳನ್ನು ಒಯ್ಯುವುದು ಸಾಮಾನ್ಯ. ಆದರೆ ಈಗ ಬೇಕರಿ ವಸ್ತುಗಳನ್ನು ಒಯ್ದವರಿಗೆ ಒಳಗೊಳಗೆ ಹೆಮ್ಮಾರಿ ಕೊರೊನಾ ಭಯ ಶುರುವಾಗಿದೆ. ಯಾಕೆಂದರೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಬೇಕರಿ ಅಂಗಡಿಯವನಿಗೆ ಈಗ ಕೊರೊನಾ ಪಾಸಿಟಿವ್ ಆಗಿದೆ. ಇದರಿಂದ ಬೇಕರಿ ಐಟಂ ಖರೀದಿಸಿದ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಭಯ ಶುರುವಾಗಿದೆ.
ಗ್ರಾಮದಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡಿದ್ದ 44 ವರ್ಷದ ವ್ಯಕ್ತಿಗೆ ಕಳೆದ ಕೆಲವು ದಿನಗಳ ಹಿಂದೆ ಜ್ವರ, ಕಫ ಮತ್ತು ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಪಕ್ಕದ ಹೊಸರಿತ್ತಿ ಗ್ರಾಮದ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದ. ಆದರೆ ಆರೋಗ್ಯ ಸುಧಾರಿಸದ ಕಾರಣಕ್ಕೆ ಜುಲೈ 15ರಂದು ಹಾವೇರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ. ಅಷ್ಟಾದರೂ ಆತನ ಆರೋಗ್ಯ ಸುಧಾರಿಸಲಿಲ್ಲ.
ಹೀಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಊರಿಗೆ ವಾಪಸ್ ಆಗಿದ್ದ. ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾಗ ಅಲ್ಲಿ ಆತನ ಗಂಟಲು ದ್ರವದ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಿದ್ದರು. ಆದರೆ ಲ್ಯಾಬ್ ವರದಿಯಲ್ಲಿ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಆಗ, ಸೋಂಕಿತನನ್ನು ಸವಣೂರಿನ ಕೋವಿಡ್19 ಆಸ್ಪತ್ರೆಗೆ ದಾಖಲಿಸಲಾಯಿತು.
ಬೇಕರಿ ಅಂಗಡಿ ನಡೆಸುತ್ತಿದ್ದವನಿಗೆ ಸೋಂಕು ದೃಢಪಡುತ್ತಿದ್ದಂತೆ ಬೇಕರಿ ಮತ್ತು ಆತ ವಾಸವಾಗಿದ್ದ ಮನೆಯ ಪ್ರದೇಶವನ್ನು ಮುಳ್ಳುಕಂಟೆಗಳನ್ನು ಹಾಕಿ ಸೀಲ್ ಡೌನ್ ಮಾಡಲಾಗಿದೆ. ಆದರೆ ಬೇಕರಿ ಅಂಗಡಿಯವನಿಗೆ ದೃಢಪಟ್ಟಿರೋ ಸೋಂಕು ಈಗ ಹತ್ತಿಮತ್ತೂರು ಮಾತ್ರವಲ್ಲ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲೂ ಭಯ ಶುರುವಾಗುವಂತೆ ಮಾಡಿದೆ.
ಅಷ್ಟೆ ಅಲ್ಲ ಬೇಕರಿ ಅಂಗಡಿಗೆ ಹಾವೇರಿ ನಗರದ ಬೇಕರಿ ಅಂಗಡಿಗಳಿಂದಲೇ ಕೆಲವೊಂದು ಬೇಕರಿ ಐಟಂ ಗಳನ್ನ ಸೋಂಕಿತ ಖರೀದಿ ಮಾಡಿಕೊಂಡು ಹೋಗುತ್ತಿದ್ದ ಎಂಬುದು ಸಹ ಹಾವೇರಿ ನಗರದ ಜನರಲ್ಲೂ ಆತಂಕ ಮೂಡಿಸಿದೆ.
ಆತನ ಜೊತೆಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಬೇಕರಿ ಅಂಗಡಿಯವನ ಜೊತೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಮತ್ತೊಂದೆಡೆ ಬೇಕರಿ ಅಂಗಡಿಯವನಲ್ಲಿ ದೃಢಪಟ್ಟ ಸೋಂಕು ಈಗ ಬೇಕರಿ ಐಟಂ ಖರೀದಿಸಿದವರ ಎದೆಯಲ್ಲಿ ಢವ ಢವ ಶುರು ಮಾಡಿದೆ.
-ಪ್ರಭುಗೌಡ ಎನ್.ಪಾಟೀಲ