ಮುಂಗಾರು ಬಿತ್ತನೆ ಚುರುಕು, ನೊಗಕ್ಕೆ ಹೆಗಲು ಕೊಟ್ಟ ರೈತ ಮಕ್ಕಳು.. ಕರುಳು ಚುರುಕ್

| Updated By:

Updated on: Jul 10, 2020 | 1:33 PM

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮಳೆಯಾಧಾರಿತ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಆದ್ರೆ ಸಣ್ಣ ರೈತರು ಪಡುತ್ತಿರುವ ಕಷ್ಟ ಹೇಳತೀರದು.ಕೃಷಿ ಚಟುವಟಿಕೆಗಳಿಗೆ ಎತ್ತುಗಳು ಇಲ್ಲದಿದ್ದಕ್ಕೆ ಆ ಬಡ ಕುಟುಂಬದಲ್ಲಿ ಆತನ ಮಕ್ಕಳೇ ನೊಗಕ್ಕೆ ಹೆಗಲು ಕೊಟ್ಟಿದ್ದಾರೆ.ಇದು ನೋಡುಗರ ಮನಕಲುತ್ತದೆ. ಬಡತನ ಅಂದ್ರೆ ಹಾಗೇನೆ..ಕರುಳು ಚುರುಕ್ ಅನ್ನುತ್ತೆ ಹೌದು ದೊಡ್ಡ ರೈತರು ಅತ್ಯಾಧುನಿಕ ಯಂತ್ರೋಪಕರಣಗಳನ್ನ ಬಳಕೆ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಪ್ರಗತಿಯನ್ನ ಸಾಧಿಸಿದ್ದಾರೆ. ಸಣ್ಣ-ಅತೀ ಸಣ್ಣ […]

ಮುಂಗಾರು ಬಿತ್ತನೆ ಚುರುಕು, ನೊಗಕ್ಕೆ ಹೆಗಲು ಕೊಟ್ಟ ರೈತ ಮಕ್ಕಳು.. ಕರುಳು ಚುರುಕ್
Follow us on

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮಳೆಯಾಧಾರಿತ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಆದ್ರೆ ಸಣ್ಣ ರೈತರು ಪಡುತ್ತಿರುವ ಕಷ್ಟ ಹೇಳತೀರದು.ಕೃಷಿ ಚಟುವಟಿಕೆಗಳಿಗೆ ಎತ್ತುಗಳು ಇಲ್ಲದಿದ್ದಕ್ಕೆ ಆ ಬಡ ಕುಟುಂಬದಲ್ಲಿ ಆತನ ಮಕ್ಕಳೇ ನೊಗಕ್ಕೆ ಹೆಗಲು ಕೊಟ್ಟಿದ್ದಾರೆ.ಇದು ನೋಡುಗರ ಮನಕಲುತ್ತದೆ.

ಬಡತನ ಅಂದ್ರೆ ಹಾಗೇನೆ..ಕರುಳು ಚುರುಕ್ ಅನ್ನುತ್ತೆ
ಹೌದು ದೊಡ್ಡ ರೈತರು ಅತ್ಯಾಧುನಿಕ ಯಂತ್ರೋಪಕರಣಗಳನ್ನ ಬಳಕೆ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಪ್ರಗತಿಯನ್ನ ಸಾಧಿಸಿದ್ದಾರೆ. ಸಣ್ಣ-ಅತೀ ಸಣ್ಣ ರೈತರು ಉಳುಮೆಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಎತ್ತುಗಳಿಲ್ಲದೇ ಪಡಲಾರದ ಪಡಿಪಾಟಲು ಪಡುತ್ತಿದ್ದಾರೆ. ಆದ್ರೆ, ಇಲ್ಲೊಬ್ಬ ರೈತನಿಗೆ ಈತನ ಮಕ್ಕಳೇ ನೊಗಕ್ಕೆ ಹೆಗಲು ಕೊಟ್ಟಿದ್ದಾರೆ.ಈ ಬಡತನ ಅಂದ್ರೆ ಹಾಗೇನೆ, ಅದು ಮನುಷ್ಯನನ್ನ ಎಂಥ ಸ್ಥಿತಿಗಾದ್ರೂ ಕೊಂಡೊಯ್ಯುತ್ತೆ ಅನ್ನೋದಕ್ಕೆ ಈ ಮನಕಲಕುವ ಸ್ಟೋರಿಯೇ ತಾಜಾ ಉದಾಹರಣೆ ಆಗಿದೆ.

ಸ್ವಯಂ ಕೃಷಿ- ತಂದೆಯ ಹೆಗಲಿಗೆ ಹೆಗಲಾದ ಮಕ್ಕಳು
ಗಣಿನಾಡು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಮಲ್ಲನಕೆರೆ ಗ್ರಾಮದ ನೆಲ್ಕುದ್ರಿ ರೈತ ಹನುಮಂತಪ್ಪ ತನ್ನ ಮಕ್ಕಳ ಹೆಗಲ ಮೇಲೆ ಉಳುಮೆಯ ನೊಗವನ್ನ‌ ಹೊರಿಸಿ ಹೊಲ ಉಳುಮೆ ಮಾಡಲು ಮುಂದಾಗಿದ್ದಾರೆ. ಅನಕ್ಷರಸ್ಥ ಹಾಗೂ ಕಡುಬಡ ಕುಟುಂಬದ ಹಿನ್ನಲೆಯುಳ್ಳ ಹನುಮಂತಪ್ಪ ಅವರ ಮಕ್ಕಳಾದ ರಮೇಶ (21) ಮತ್ತು ಕುಮಾರ (16) ಅವರೇ ನೊಗಕ್ಕೆ ಹೆಗಲು ಕೊಟ್ಟಿದ್ದಾರೆ. ತಮ್ಮ ಹೊಲದಲ್ಲಿ ಈ ಬಾರಿ ಮೆಕ್ಕೆಜೋಳ ಬಿತ್ತನೆ ಮಾಡುವ ಮೂಲಕ ತಮ್ಮ ತಂದೆಯ ಹೆಗಲಿಗೆ ಹೆಗಲಾಗಿದ್ದಾರೆ.

ಬಾಡಿಗೆಗೆ ಟ್ಯಾಕ್ಟರ್ ಪಡೆಯದೇ ಎತ್ತುಗಳನ್ನ ಖರೀದಿಸುವಷ್ಟು ಶಕ್ತಿಯಿಲ್ಲದಿರುವುದರಿಂದ ಎರಡು ವರ್ಷದಿಂದ ಈತನ ಮಕ್ಕಳೇ ಹೊಲ ಉಳುಮೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೇವಲ ಒಂದು ಎಕರೆ ಮಾತ್ರ ಖುಷ್ಕಿ ಭೂಮಿಯಿದ್ದು, ಮಳೆ ಬಂದರೆ ಮಾತ್ರ ಬೆಳೆ. ಇಲ್ಲದಿದ್ದರೇ ಕೂಲಿ ನಾಲಿ ಮಾಡಿ ಜೀವನ ಸಾಗಿಸಬೇಕು. ಹೀಗಾಗಿ ಮನೆಯಲ್ಲಿರುವ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಒಂದು ಎಕರೆ ಹೊಲದಿಂದಲೇ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಈ ಮುಂಚೆ ಮತ್ತೊಬ್ಬರ ಜಮೀನಿನನ್ನ ಗುತ್ತಿಗೆಗೆ ಪಡೆದು ಉಳುಮೆ ಮಾಡುತ್ತಿದ್ದರು. ಆ ಗುತ್ತಿಗೆದಾರ ರೈತರ ಎತ್ತುಗಳೊಂದಿಗೆಯೇ ತಮ್ಮ ಹೊಲವನ್ನು ಉಳುಮೆ ಮಾಡಿ ಕೊಳ್ಳುತ್ತಿದ್ದರು. ಆದರೆ, ಎರಡು ವರ್ಷಗಳಿಂದ ಅವರು ಕೂಡ ಗುತ್ತಿಗೆ ಆಧಾರಿತ ಹೊಲ ಬಿಡಿಸಿಕೊಂಡಿರುವುದರಿಂದ ವಿಧಿಯಿಲ್ಲದೇ ತಮ್ಮ ಹೊಲದಲ್ಲೇ ಮಾತ್ರ ಬಿತ್ತನೆ ಮಾಡುತ್ತಿದ್ದಾರೆ. ಕಡು ಬಡತನದ ಹಿನ್ನಲೆಯಲ್ಲಿ ಈ ಇಬ್ಬರು ಮಕ್ಕಳು ಕನಿಷ್ಠ ವಿದ್ಯಾರ್ಹತೆಯನ್ನೂ ಕೂಡ ಹೊಂದಿಲ್ಲ. ವಿದ್ಯಾಭ್ಯಾಸವನ್ನ ಅರ್ಧದಲ್ಲೇ ಮೊಟಕುಗೊಳಿಸಿ ತಂದೆಯ ಜೊತೆಗೆ ಈ ಸ್ವಯಂ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಸರ್ಕಾರದಿಂದ ಯಾವುದೇ ಸಹಾಯಧನ ದೊರೆತಿಲ್ಲ
ಕಳೆದ ವರ್ಷವು ಇದೇ ರೀತಿ ಮಕ್ಕಳ ಹೆಗಲಿಗೆ ನೊಗಕಟ್ಟಿ ಬಿತ್ತನೆ ಮಾಡಿದ್ದೆ. ಆ ವರ್ಷ ಕೂಡ ಬೆಳೆ ಸರಿಯಾಗಿ ಬರಲಿಲ್ಲ.ಈ ವರ್ಷವು ಸಾಲಸೋಲ ಮಾಡಿ, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೇನೆ. ನನಗೆ ಈ ಸರ್ಕಾರದಿಂದ ಯಾವುದೇ ಸಹಾಯಧನ ದೊರೆತಿಲ್ಲ. ಕೃಷಿ ಇಲಾಖೆಯಲ್ಲಿ ಈ ಕುರಿತು ಸಂಪರ್ಕಿಸಿದರೂ ನಮ್ಮನ್ನು ಯಾರು ಕಣ್ಣೆತ್ತಿ ಸಹ ನೋಡುತ್ತಿಲ್ಲ ಎಂದು ನೆಲ್ಕುದ್ರಿ ಗ್ರಾಮದ ರೈತ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಅನೇಕ ರೈತರದ್ದೂ ಇದೇ ಪಾಡು 
ಜಿಲ್ಲೆಯಲ್ಲಿರುವ ಸಣ್ಣ ರೈತರ ಪೈಕಿ ಬಹುತೇಕ ರೈತರ ಪರಿಸ್ಥಿತಿ ಇದೆಯಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೇ, ಬಂದರೂ ಬೆಳೆಗೆ ಸರಿಯಾದ ಬೆಲೆ ಸಿಗದೆ ಪ್ರತಿವರ್ಷ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಬಾರಿ ಕೊರೊನಾ ಬಂದು ರೈತರನ್ನು ಮತ್ತಷ್ಟು ಹೈರಾಣಾಗಿಸಿದೆ. ಇದರ ಮಧ್ಯದಲ್ಲಿ ಇಂಥ ಹಲವು ರೈತರು ಕೃಷಿಯಿಂದಲೇ ಬದುಕು ಕಟ್ಟಿ ಕೊಳ್ಳಲು ಎಣಗಾಡುತ್ತಿದ್ದಾರೆ.
-ಬಸವರಾಜ ಹರನಹಳ್ಳಿ

Published On - 11:39 am, Fri, 10 July 20