ಚಿಕ್ಕಬಳ್ಳಾಪುರ: ಬಟ್ಟೆ ಖರೀದಿಯಿಂದ ಹಿಡಿದು ಹಾರ್ಡವೇರ್ ಸಾಫ್ಟ್ವೇರ್ ಮೋಜು ಮಸ್ತಿ ಅಂತಾ ರಾಜಧಾನಿ ಬೆಂಗಳೂರಿಗೆ ಹೋಗಿ ಬಂದ್ರೆ ಕೊರೊನಾ ಸೋಂಕು ಇನ್ನಿಲ್ಲದಂತೆ ಬಳುವಳಿಯಾಗಿ ಬರ್ತಿದೆ, ಹುಷಾರು! ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೊನಾ ಪಾಸಿಟಿವ್ ಬರ್ತಿರುವ ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ತನಿಖೆ ನಡೆಸಿದ್ರೆ.. ಬಹುತೇಕ ಎಲ್ಲಾ ಪ್ರಕರಣಗಳು ಸಹ ಬೆಂಗಳೂರು ಮಹಾನಗರಕ್ಕೆ ನಂಟು ಹೊಂದಿವೆ!
ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಅಂತ ಆರ್ಥಿಕವಾಗಿ ಚೆನ್ನಾಗಿರುವ ಕೆಲವರು, ಆಸ್ಪತ್ರೆಗಳಿಗೆ ಹೋಗಿ ಬಂದಿದ್ದೆ ತಡ ಅಲ್ಲಿಂದಲೂ ಕೊರೊನಾ ವಕ್ಕರಿಸಿದೆ. ಇನ್ನು ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ 10 ಜನರಲ್ಲಿ 8 ಜನ ಬೆಂಗಳೂರಿನ ಕೊರೊನಾ ನಂಜು ತಗುಲಿಸಿಕೊಂಡೆ ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲಾಧಿಕಾರಿ ಲತಾ ಕಳಕಳಿ
ಈ ಕುರಿತು ಟಿವಿ9 ಗೆ ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್, ಕೊರೊನಾ ಸೋಂಕಿಗೆ ಬಲಿಯಾದವರಲ್ಲಿ ನಾಲ್ಕು ಜನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆಂದು ಬೆಂಗಳೂರಿನ ಆಸ್ಪತ್ರಗೆ ಹೋಗಿ ಬಂದಿದ್ರು. ಅವರಿಗೆ ಅಲ್ಲೇ ಕೊರೊನಾ ಸೋಂಕು ತಗುಲಿತ್ತು. ಇನ್ನೂ ಒಂದು ಪ್ರಕರಣದಲ್ಲಿ ವ್ಯಕ್ತಿಯೊರ್ವ ಬೈಕ್ ಅಪಘಾತಕ್ಕೀಡಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಸೋಂಕು ತಗುಲಿ ಮೃತಪಟ್ಟಿದ್ರು.
ಸ್ವಲ್ಪ ದಿನ ಬೆಂಗಳೂರಿನಿಂದ ದೂರ ಇರುವುದೇ ಕ್ಷೇಮ
ಮತ್ತೊಬ್ಬರು ಬೆಂಗಳೂರಿನಲ್ಲಿ ಕೊರೊನಾ ಅಂಟಿಸಿಕೊಂಡು ಬಂದು ಮಗಳ ಮನೆಯಲ್ಲಿ ಇದ್ರೂ ಅನಾರೋಗ್ಯದಿಂದ ಅವರು ಮೃತಪಟ್ಟಿದ್ದಾರೆ. ದಿನೇ ದಿನೇ ಬೆಂಗಳೂರಿನ ಕೊರೊನಾ ನಂಜು ಹೆಚ್ಚಾಗುತ್ತಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾಡಳಿತ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ಭವನದ ಗೇಟ್ ಬಳಿಯೆ ವಿವಿಧ ಇಲಾಖೆಗಳ ಕೌಂಟರ್ ತೆರೆದು ಸಾರ್ವಜನಿಕರಿಂದ ದೂರು ದುಮ್ಮಾನ ಅರ್ಜಿಗಳನ್ನು ಗೇಟ್ ಬಳಿಯೆ ಸ್ವೀಕಾರ ಮಾಡಿ ನಂತರ ಅಧಿಕಾರಿಗಳಿಗೆ ತಲುಪಿಸುತ್ತಿದ್ದಾರೆ.
ಮತ್ತೊಂದೆಡೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜಿಲ್ಲೆಯಾದ್ಯಂತ 63 ಕೋವಿಡ್ ಕೇರ್ ಕೇಂದ್ರಗಳನ್ನು ತೆರೆದಿದ್ದು, 10 ಸಾವಿರ ಬೆಡ್ ವ್ಯವಸ್ಥೆ ಮಾಡಿದೆ. ರೋಗ ಲಕ್ಷಣಗಳು ಇಲ್ಲದವರನ್ನೂ ಕೋವಿಡ್ ಕೇರ್ ಗೆ ದಾಖಲಿಸುವ ಚಿಂತನೆಯಲ್ಲಿದೆ. ಇನ್ನು, 150 ಬೆಡ್ ಗಳ ಜಿಲ್ಲಾ ಕೋವಿಡ್ ಆಸ್ಪತ್ರೆಯಿದ್ದು ಪ್ರತ್ಯೇಕವಾಗಿ 50 ಬೆಡ್ ಗಳ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಗುರುತಿಸಲಾಗಿದೆ. ಯಾವುದಕ್ಕೂ ಸುಖಾಸುಮ್ಮನೆ ಬೆಂಗಳೂರಿಗೆ ಹೋಗಿ ಕೊರೊನಾ ತಗುಲಿಸಿಕೊಂಡು ಬರಬೇಡಿ. ಅದರ ಬದಲು ಸ್ವಲ್ಪ ದಿನ ಬೆಂಗಳೂರಿನಿಂದ ದೂರ ಇರುವುದೇ ಒಳ್ಳೆಯದು.
-ಭೀಮಪ್ಪ ಪಾಟೀಲ
Published On - 12:01 pm, Fri, 10 July 20