ಸಾಮಾನ್ಯವಾಗಿ ನವೆಂಬರ್ ತಿಂಗಳು ಬಂತು ಅಂದ್ರೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡುತ್ತದೆ. ಆದ್ರೆ ಆ ನೆಲದಲ್ಲಿ ನವೆಂಬರ್ ತಿಂಗಳು ಮಾತ್ರವಲ್ಲ ವರ್ಷಪೂರ್ತಿ ದಸರಾ ಮಾದರಿಯಲ್ಲಿ ಕನ್ನಡ ರಾಜ್ಯೋತ್ಸವದ ಹಬ್ಬ ನಡೆಯುತ್ತೆ. ಪರಭಾಷೆಗಳ ಮಧ್ಯೆ ಕನ್ನಡ ಸಂಘ ಹಾಗೂ ಸಂಘದ ಅಧ್ಯಕ್ಷರು ಸದ್ದಿಲ್ಲದೆ ಕನ್ನಡ ಕ್ರಾಂತಿ ಮಾಡುತ್ತಿದ್ದಾರೆ. ಕನ್ನಡ ಕೆಲಸಕ್ಕಾಗಿ ತಮ್ಮನ್ನ ತಾವು ಮುಡಿಪಿಟ್ಟುಕೊಂಡಿರುವ ಹೃದಯವಂತ ಕನ್ನಡಿಗರ ಕುರಿತು ಒಂದು ವರದಿ ನೋಡಿ.
ಎಲ್ಲೆಲ್ಲೂ ರಾರಾಜಿಸುತ್ತಿರುವ ಕನ್ನಡದ ಬಾವುಟ, ಕನ್ನಡದ ಹಲವಾರು ಕಾರ್ಯಗಳ ಮೂಲಕವೇ ತಾನೊಬ್ಬ ಕನ್ನಡದ ಕಂದ ಎಂದು ಕರೆಸಿಕೊಳ್ಳುವ ಕನ್ನಡಾಭಿಮಾನಿ. ಇವರಿರೋದು ರಾಜ್ಯದ ಗಡಿ ನಾಡು ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ. ಕೋಲಾರ ಆಂಧ್ರದ ತೆಲುಗು ಮತ್ತು ತಮಿಳುನಾಡಿನ ತಮಿಳು ಭಾಷೆ ಪ್ರಭಾವಕ್ಕೊಳಗಾದ ಜಿಲ್ಲೆ. ಹಾಗಂತ ಇಲ್ಲಿ ಕನ್ನಡಾಭಿಮಾನಿಗಳಿಗಾಗಲೀ ತಾಯಿ ಭುವನೇಶ್ವರಿಯ ಆರಾಧಕರಿಗಾಗಲಿ ಏನೂ ಕಮ್ಮಿ ಇಲ್ಲ. ಯಾಕಂದ್ರೆ ಡಾ.ರಾಜ್ ಕುಮಾರ್ ಗೋಕಾಕ್ ಚಳುವಳಿಯ ಕಹಳೆಯನ್ನು ಮೊಳಗಿಸಿದ ಸ್ಥಳ ಇದಾಗಿದ್ದು, ಎಲ್ಲೆಡೆ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಮಾಡಿದ್ರೆ ಇಲ್ಲಿ ವರ್ಷಪೂರ್ತಿ ಕನ್ನಡದ ಹಬ್ಬ ನಡೆಯುತ್ತದೆ.
ಇನ್ನು, 1968ರಲ್ಲಿ ಸ್ಥಾಪನೆಯಾದ ಬಂಗಾರಪೇಟೆ ಕನ್ನಡ ಸಂಘ ಅಂದಿನಿಂದ ನಿರಂತರ ಕನ್ನಡ ಸೇವೆ ಮಾಡುತ್ತಾ ಬಂದಿದೆ. ಕನ್ನಡದ ನಾಮಫಲಕಗಳು, ಕನ್ನಡದಲ್ಲಿ ಆಡಳಿತ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡದ ಬಗ್ಗೆ ಜಾಗೃತಿಯನ್ನು ಸಂಘ ಮೂಡಿಸುತ್ತಿದೆ. 2009 ರಿಂದ ಪ್ರತಿ ತಿಂಗಳ ಮೊದಲ ದಿನಾಂಕದಂದು ಕನ್ನಡದ ವೈಭವವನ್ನು ಹೆಚ್ಚಿಸಲು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಸಹ ಕಲ್ಪಿಸಿಕೊಟ್ಟಿದೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಸಂಘ ಕನ್ನಡ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದು ಎಲ್ಲರಿಗೂ ಖುಷಿ ತಂದುಕೊಟ್ಟಿದೆ. ಆದ್ರೆ ಸದ್ಯ ಕೊವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಸ್ಥಗಿತ ಮಾಡಲಾಗಿದೆ.
ಒಟ್ಟಾರೆ, ಯಾರಿಂದಲೂ ಯಾವುದೇ ಆರ್ಥಿಕ ನಿರೀಕ್ಷೆಗಳನ್ನಿಟ್ಟುಕೊಳ್ಳದೆ ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷರು ಹಾಗೂ ಸಂಘದ ಸದಸ್ಯರೆಲ್ಲರೂ ಕನ್ನಡಾಂಬೆಯ ಕೆಲಸವನ್ನು ತಮ್ಮ ಮನೆಯ ಕೆಲಸದಂತೆ ಮಾಡಿಕೊಂಡು ತಮ್ಮ ಕನ್ನಡಾಭಿಮಾನವನ್ನು ಮೆರೆಯುತ್ತಾ ಯಾವ ಕನ್ನಡಿಗನಿಗೂ ಸಾಟಿ ಇಲ್ಲದಂತೆ ಕನ್ನಡ ಬಾವುಟ ಹಾರಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಸರ್ಕಾರ ಇಂಥ ಕನ್ನಡಾಭಿಮಾನಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ.
-ರಾಜೇಂದ್ರ ಸಿಂಹ
Published On - 9:50 pm, Sat, 31 October 20