ಬೆಂಗಳೂರು: ಇತ್ತೀಚಿಗೆ ಎಲ್ಲವೂ ಮೊಬೈಲ್ ಮಯ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಕ್ಷಣಾರ್ಧದಲ್ಲಿ ಪ್ರಪಂಚವನ್ನೇ ನೋಡಬಹುದು. ಇಂತಹ ಒಂದು ಹೊಸ ವ್ಯವಸ್ಥೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಾರಿಗೆ ತರಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ. ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ನತ್ತ ದಾಂಗುಡಿ ಇಡ್ತಿದ್ದಾರೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಟಿಕೆಟ್ ಪಡೆಯೋದೇ ದೊಡ್ಡ ಹರಸಾಹಸವಾಗಿತ್ತು. ಸರತಿ ಸಾಲಲ್ಲಿ ನಿಂತು ಟಿಕೆಟ್ ಪಡೆಯೋದು ದೊಡ್ಡ ತಲೆನೋವಾಗಿತ್ತು. ಇದ್ರಿಂದ ಪ್ರಾಣಿ ಪ್ರಿಯರು ಸಾಕಷ್ಟು ತೊಂದರೆ ಅನುಭವಿಸಿದ್ರು.
ಪ್ರವಾಸಿಗರ ತೊಂದರೆಯನ್ನ ಮನಗಂಡ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್, ಈ ಸಮಸ್ಯೆಗೆ ಸಲ್ಯೂಷನ್ ಹುಡುಕಿದ್ದಾರೆ. ವಿಶೇಷ ಕಾಳಜಿವಹಿಸಿದ್ದು, ಆನ್ಲೈನ್ ಮೂಲಕವೇ ಟಿಕೆಟ್ ಪಡೆಯುವ ನೂತನ ವ್ಯವಸ್ಥೆಯನ್ನ ಜಾರಿಗೆ ತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆ 15 ಸಾವಿರಕ್ಕೂ ಹೆಚ್ಚಾಗಿದ್ದು, ರಜೆ ದಿನಗಳಲ್ಲಿ ಟಿಕೆಟ್ ಪಡೆಯಬೇಕಾದರೆ ಎರಡ್ಮೂರು ಗಂಟೆ ಕಾಯಬೇಕಾಗುತ್ತೆ. ಈ ತೊಂದರೆಯನ್ನ ತಪ್ಪಿಸಲು ಆನ್ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಾಗಿದೆ ಅಂತಿದ್ದಾರೆ ಅಧಿಕಾರಿಗಳು.
ಇನ್ಮುಂದೆ ರಜಾದಿನಗಳಲ್ಲಿ ಬನ್ನೇರುಘಟ್ಟಕ್ಕೆ ಉದ್ಯಾನವನಕ್ಕೆ ಬರುವ ಪ್ರವಾಸಿಗರು ಮೊಬೈಲ್ನಲ್ಲೇ ಉದ್ಯಾನವನದ ವೆಬ್ಸೈಟ್ಗೆ ಹೋಗಿ ಅಲ್ಲೇ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದ್ರಿಂದ ಪ್ರವಾಸಿಗರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿದಂತಾಗಿದೆ. ಉದ್ಯಾನವನದ ಟಿಕೆಟ್ ಪಡೆಯಲು ಚಾಲ್ತಿಯಲ್ಲಿರುವ ಎಲ್ಲಾ ರೀತಿಯ ಆನ್ಲೈನ್ ಬ್ಯಾಂಕ್ ವ್ಯವಸ್ಥೆಗಳಿಂದ ಹಾಗೂ ವಿಸಾ, ಮಾಸ್ಟರ್ ಕಾರ್ಡ್ಗಳಿಂದಲೂ ಟಿಕೆಟ್ ಪಡೆಯಬಹುದಾಗಿದೆ. ಗ್ರಾಹಕರ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಅತ್ಯುನ್ನತ ತಂತ್ರಜ್ಞಾನವನ್ನೂ ಬಳಸಲಾಗಿದೆ. ಇಂತಹ ವ್ಯವಸ್ಥೆಯನ್ನು ಕಲ್ಪಿಸಿರುವುದು ಸಮಯದ ಉಳಿತಾಯದ ಜೊತೆಗೆ ನೆಮ್ಮದಿಯನ್ನು ತಂದಿದೆ ಎಂದು ಪ್ರವಾಸಿಗರು ಹೇಳಿದ್ದಾರೆ.
Published On - 6:49 am, Wed, 25 December 19