ಹಾವೇರಿ: ಗ್ರಾಮ ಪಂಚಾಯ್ತಿಯಲ್ಲಿದ್ದ ಆ ಕೇಂದ್ರದಿಂದ ಜನರ ಅಲೆದಾಟಕ್ಕೆ ಬ್ರೇಕ್ ಬಿದ್ದಿತ್ತು. ರೈತರಿಗಂತೂ ಅದ್ರಿಂದ ಸಾಕಷ್ಟು ಅನುಕೂಲ ಆಗ್ತಿತ್ತು. ಒಂದೇ ಸೂರಿನಡಿ ನೂರು ಸೇವೆಗಳನ್ನ ಒದಗಿಸ್ತಿದ್ದ ಕೇಂದ್ರಕ್ಕೆ ಈಗ ಗರ ಬಡಿದಿದೆ. ನೂರು ಸೇವೆ ಸಿಗಬೇಕಿದ್ದ ಕಡೆ ಈಗ ಬೆರಳೆಣಿಕೆಯಷ್ಟು ಸೇವೆಗಳು ಕೂಡ ಸರಿಯಾಗಿ ಸಿಗ್ತಿಲ್ಲ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 100 ಸೇವೆಗಳನ್ನ ಒದಗಿಸೋ ಕೇಂದ್ರಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ ಚಾಲನೆ ನೀಡಲಾಗಿತ್ತು. 2016ರಲ್ಲಿ ಈ ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಗಿತ್ತು. ರೈತರಿಗೆ ಬೇಕಾದ ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ, ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ಬಸ್, ಟ್ರೈನ್ ಬುಕ್ಕಿಂಗ್ ಹೀಗೆ ನೂರು ಸೇವೆಗಳು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಒದಗಿಸೋದು ಉದ್ದೇಶವಾಗಿತ್ತು.
ಅದ್ರಂತೆ ನಾಡಕಚೇರಿ, ತಾಲೂಕು ಕಚೇರಿ, ಜಿಲ್ಲಾಡಳಿತ ಕಚೇರಿ, ಅಲ್ಲಿ ಇಲ್ಲಿ ಅಂತಾ ಜನ ಅಲೆದಾಡೋದಕ್ಕೆ ಬಾಪೂಜಿ ಸೇವಾ ಕೇಂದ್ರ ಬ್ರೇಕ್ ಹಾಕಿತ್ತು. ಜನ ತಮಗೆ ಬೇಕಾದ ದಾಖಲೆಗಳನ್ನು ಬಾಪೂಜಿ ಸೇವಾ ಕೇಂದ್ರದಲ್ಲಿ ಪಡೆದುಕೊಳ್ಳುತ್ತಿದ್ರು. ಆದ್ರೆ ಜನರ ಅನುಕೂಲಕ್ಕೆ ಆರಂಭವಾಗಿದ್ದ ಈ ಕೇಂದ್ರಕ್ಕೆ ಈಗ ಗರ ಬಡಿದಿದೆ. ಬಾಪೂಜಿ ಸೇವಾ ಕೇಂದ್ರದಲ್ಲಿ ನೂರು ಸೇವೆಗಳು ಇರ್ಲಿ 10 ಸೇವೆಗಳು ಕೂಡ ಸಿಗ್ತಿಲ್ವಂತೆ.
ಬಾಪೂಜಿ ಸೇವಾ ಕೇಂದ್ರ ಆರಂಭವಾದ್ಮೇಲೆ ಜನರು, ರೈತರು ಅಲೆದಾಡೋದಕ್ಕೆ ಬ್ರೇಕ್ ಬಿದ್ದಿತ್ತು. ಆದ್ರೆ ಈಗ ಯಾವುದೇ ದಾಖಲೆ ಪಡೆದುಕೊಳ್ಳಬೇಕು ಅಂದ್ರೂ ಜನ ಮತ್ತೆ ಅಲೆದಾಡಬೇಕಾಗಿ ಬಂದಿದೆ. ಒಂದ್ಕಡೆ ಸರ್ವರ್ಗಳ ಸಮಸ್ಯೆ, ಮತ್ತೊಂದೆಡೆ ಸಿಬ್ಬಂದಿ ಕೊರತೆಯಿಂದ ಬಾಪೂಜಿ ಸೇವಾ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಹೆಸರಿಗೆ ಮಾತ್ರ ಸಣ್ಣದೊಂದು ಬಾಪೂಜಿ ಸೇವಾ ಕೇಂದ್ರ ಅನ್ನೋ ಬೋರ್ಡ್ ಬಿಟ್ರೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಹಾಕಿದ್ದ ನೂರು ಸೇವೆಗಳ ಬೋರ್ಡ್ ಕೂಡ ತೆಗೆದು ಹಾಕಲಾಗಿದೆ. ಬೀಜ, ಗೊಬ್ಬರ ವಿತರಿಸೋ ಸಮಯದಲ್ಲಿ ಈ ಕೇಂದ್ರ ರೈತರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದ್ರೆ ಈಗ ಯಾವುದೇ ಸೌಲಭ್ಯ ಸಿಗದೆ ಇರೋದು ಜನರಲ್ಲಿ ನಿರಾಸೆ ಮೂಡಿಸಿದೆ.
ಒಟ್ನಲ್ಲಿ ಗ್ರಾಮೀಣ ಪ್ರದೇಶದ ಜನರ ಅಲೆದಾಟಕ್ಕೆ ಬ್ರೇಕ್ ಹಾಕಿ ಒಂದೇ ಸೂರಿನಡಿ ನೂರು ಸೇವೆ ಒದಗಿಸಲು ಆರಂಭವಾಗಿದ್ದ ಬಾಪೂಜಿ ಸೇವಾ ಕೇಂದ್ರ ಇದ್ದೂ ಇಲ್ಲದಂತಾಗಿರೋದು ಜನರಲ್ಲಿ ಬೇಸರ ಮೂಡಿಸಿದೆ. ವಿಶೇಷವಾಗಿ ರೈತರು ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ತೊಂದರೆ ಎದುರಾಗಿದೆ. ಸಂಬಂಧಪಟ್ಟವರು ಈಗಲಾದ್ರೂ ಈ ಕಡೆ ಗಮನಹರಿಸಿ ಜನರ ಸಮಸ್ಯೆ ಬಗೆಹರಿಸಬೇಕಿದೆ.
ಇದನ್ನೂ ಓದಿ: ದೇಶಕ್ಕೇ ಮಾದರಿಯಾದ ಅಂಚಟಗೇರಿ ಗ್ರಾಮ ಪಂಚಾಯಿತಿ; ಕಳೆದ ವರ್ಷ ಪ್ರಶಸ್ತಿಯೂ ಬಂದಿದೆ..