ಬೆಂಗಳೂರು: ಲಿಂಗಾಯತರಿಗೆ 2ಡಿ ಅಡಿ ಮೀಸಲಾತಿ (Reservation) ಹೆಚ್ಚಳ ಮಾಡಿರುವ ಸಚಿವ ಸಂಪುಟ ನಿರ್ಧಾರದ ಬಗ್ಗೆ ಪರಿಶೀಲನೆ ನಡೆಸಿ ಶನಿವಾರ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಬಸವ ಜಯಮೃತ್ಯುಂಜಯ (Basava Jaya Mruthyunjaya Swamiji) ಸ್ವಾಮೀಜಿ ಶುಕ್ರವಾರ ರಾತ್ರಿ ತಿಳಿಸಿದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಅನೇಕ ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಸಂಪುಟ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಮೀಸಲಾತಿ ಶೇ 7ರಷ್ಟು ಹೆಚ್ಚಿಸಿರುವ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ನಮ್ಮ ನಾಯಕರ ಜೊತೆ ಚರ್ಚಿಸಿ ನಾಳೆ ನಿರ್ಧಾರ ಪ್ರಕಟಿಸುತ್ತೇವೆ. ಇದಕ್ಕಾಗಿ ಶನಿವಾರ ಪಂಚಮಸಾಲಿ ಸಮುದಾಯದ ತುರ್ತು ಸಭೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಹೋರಾಟ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದರಲ್ಲಿ ಸ್ಪಷ್ಟತೆ ಕಾಣಿಸಲಿಲ್ಲ. ಮೀಸಲಾತಿ ಹೆಚ್ಚಳದ ಬಗ್ಗೆ ನಮಗೆ ಅಧಿಕೃತವಾದ ಪ್ರತಿ ಸಿಕ್ಕಿಲ್ಲ. ಎಲ್ಲಾ ಸೌಲಭ್ಯಗಳನ್ನು 2ಡಿ ಅಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ನಿರ್ದಿಷ್ಟವಾದ ಗುರಿ ಬಗ್ಗೆ ನಾವು ನಾಳೆ ಚರ್ಚೆ ಮಾಡುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ: Cabinet Decision: ಮುಸ್ಲಿಮರ 2ಬಿ ಮೀಸಲಾತಿ ರದ್ದು, ಒಕ್ಕಲಿಗ, ಲಿಂಗಾಯತರಿಗೆ ಹೆಚ್ಚಳ; ಸಿಎಂ ಬೊಮ್ಮಾಯಿ ಘೋಷಣೆ
ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲು ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಆದರೆ ಅವರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ