ಧಾರವಾಡ: ಹೂವು ಸೃಷ್ಟಿಯ ಅದ್ಭುತಗಳಲ್ಲೊಂದು. ನಿಸರ್ಗದ ವೈಚಿತ್ರ್ಯಗಳಲ್ಲೊಂದು. ಹೂವಿನ ಚೆಲುವಿನ ಮುಂದೆ ಎಲ್ಲವೂ ನಗಣ್ಯ. ಇಂಥ ಬಗೆ ಬಗೆ ಹೂವುಗಳ ಪೈಕಿ ಇದೀಗ ವಿದ್ಯಾಕಾಶಿ ಧಾರವಾಡದಲ್ಲಿ ಗಮನ ಸೆಳೆಯುತ್ತಿರೋದು ಥಂಡರ್ ಲಿಲ್ಲಿ. ಮಳೆಗಾಲ ಆರಂಭವಾದರೆ ಸಾಕು ಈ ಹೂವು ಧುತ್ತನೇ ಅರಳಿ ಬಿಡುತ್ತೆ. ಅದುವರೆಗೂ ಯಾರಿಗೂ ಕಾಣದೇ ಭೂಮಿಯ ಒಡಲಲ್ಲಿ ಬಚ್ಚಿಕೊಂಡಿದ್ದ ಎಲೆ ಒಮ್ಮಿಂದೊಮ್ಮೆಲೇ ಹೊರ ಬರುತ್ತೆ. ಎಲೆ ಬಂದು ಒಂದೇ ವಾರದಲ್ಲಿ ಅಲ್ಲೊಂದು ಅದ್ಭುತ ಲೋಕವೇ ಸೃಷ್ಟಿಯಾಗುತ್ತೆ. ನೋಡ ನೋಡುತ್ತಿದ್ದಂತೆಯೇ ಕೆಂಪಗೆ, ಥಳ ಥಳ ಹೊಳೆಯೋ ಹೂವುಗಳ ದಂಡೇ ಎದ್ದು ನಸುನಗುತ್ತವೆ.
ಮೊದಲ ಮಳೆ ಬೀಳುತ್ತಲೇ ಧಾರವಾಡದ ಪ್ರತಿ ಮನೆ ಮುಂದೆಯೂ ಇಂಥದ್ದೊಂದು ಅದ್ಭುತ ಕಂಡು ಬರುತ್ತೆ. ಇಲ್ಲಿನ ಬಗೆ ಬಗೆಯ ಸಸ್ಯಗಳು ಪ್ರಕೃತಿಯ ಅಂದವನ್ನು ಹೆಚ್ಚಿಸಿವೆ. ಪ್ರಪಂಚದ ಬೇರೆ ಬೇರೆ ಭಾಗದ ಸಸ್ಯಗಳು ನಗರಕ್ಕೆ ಹೆಚ್ಚಿನ ಸೌಂದರ್ಯ ತಂದುಕೊಟ್ಟಿವೆ. ಅಂಥದ್ದರಲ್ಲಿ ಈ ಥಂಡರ್ ಲಿಲ್ಲಿ ಹೂವು ಕೂಡ ಒಂದು. ಈ ಹೂವಿಗೆ ಕನ್ನಡದಲ್ಲಿ ಯಾವುದೇ ಹೆಸರಿರದಿದ್ದರೂ ಇದರ ಆಕಾರ ನೋಡಿ ಬೆಂಕಿಯ ಹೂವು, ಬೆಂಕಿ ಚೆಂಡು ಮುಂತಾದ ಹೆಸರುಗಳಿಂದ ಕರೆಯಲಾಗುತ್ತೆ. ಈ ಹೂವು ಧಾರವಾಡದ ಗಲ್ಲಿಗಲ್ಲಿಗಳಲ್ಲೂ ಇದೀಗ ಕಂಡು ಬರುತ್ತಿವೆ. ಇದಕ್ಕೆ ಕಾರಣ ಗುಡುಗಿನಿಂದ ಕೂಡಿದ ಮಳೆ.
ದಕ್ಷಿಣ ಆಫ್ರಿಕಾದ ಈ ಸಸ್ಯ ಮಾಡ್ತಿದೆ ಮೋಡಿ:
ಅದು ಹಾಗೆಯೇ ಮನೆಯಿಂದ ಮನೆಗೆ ಸಾಗಿ ಇವತ್ತು ಧಾರವಾಡದ ತುಂಬೆಲ್ಲಾ ಹರಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಳೆ ಆರಂಭವಾಗೋದ್ರಿಂದಾಗಿ ಇದು ಅವಾಗಲೇ ಹೂವನ್ನು ಬಿಡುತ್ತೆ. ಇದೇ ಕಾರಣಕ್ಕೆ ಈ ಹೂವಿಗೆ ಕೆಲವರು ಮೇ ಫ್ಲಾವರ್ ಅಂತಾನೂ ಕರೆಯುತ್ತಾರೆ. ಆದರೆ ವಿಚಿತ್ರವೆಂದರೆ ಮೊದಲ ಮಳೆ ಬಿದ್ದ ಮೇಲೆಯೇ, ಅದೂ ಗುಡುಗಿನ ಶಬ್ದ ಕೇಳುತ್ತಲೇ ಇದು ಹೊರಗೆ ಬರುತ್ತೆ. ಈ ಸಸ್ಯ ಗುಡುಗು ಸಂವೇದಿಯಾಗಿರೋದೇ ಇದಕ್ಕೆ ಕಾರಣ.
Published On - 1:28 pm, Tue, 26 May 20