ಬೆಂಗಳೂರು: ನಾಗರೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಬೆಂಗಳೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಇನ್ಮುಂದೆ ಪ್ರತಿ ನಾಲ್ಕನೇ ಶನಿವಾರ ಪ್ರತಿ ಠಾಣೆಯಲ್ಲೂ ಜನಸಂಪರ್ಕ ಸಭೆ ನಡೆಸಲು ಬೆಂಗಳೂರು ಪೊಲೀಸರು ಚಿಂತನೆ ನಡೆಸಿದ್ದಾರೆ. ಹಾಗಾಗಿ ಇಂದಿನಿಂದ ಪ್ರಾಯೋಗಿಕವಾಗಿ ಕಮಿಷನರ್ ಕಮಲ್ ಪಂಥ್ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಪ್ರತಿ ನಾಲ್ಕನೇ ಶನಿವಾರ ಬೆಳಿಗ್ಗೆ 11 ಗಂಟೆಯಿಂದ 1 ಗಂಟೆವರೆಗೂ ಸಭೆ ನಡೆಯಲಿದೆ.
ಜನಸಂಪರ್ಕದಲ್ಲಿ ಕಮಿಷನರ್ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುತ್ತದೆ. 11 ಗಂಟೆಗೆ ಪುಲಕೇಶಿನಗರ ಠಾಣೆಯಲ್ಲಿ ಅಹವಾಲು ಸ್ವೀಕರಿಸಲಿರುವ ಕಮಿಷನರ್ ಕಮಲ್ ಪಂಥ್, ಮಧ್ಯಾಹ್ನ 12:10 ರಿಂದ ಮಲ್ಲೇಶ್ವರಂ ಠಾಣೆಯಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ.
ಜೊತೆಗೆ ಪೂರ್ವ, ಪಶ್ಚಿಮ ವಲಯದ ಹೆಚ್ಚುವರಿ ಆಯುಕ್ತರಿಂದಲೂ ಜನಸಂಪರ್ಕ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಿಸಿಬಿ ಜಂಟಿ ಆಯುಕ್ತರು ಹಾಗೂ ಎಲ್ಲಾ ವಿಭಾಗದ ಡಿಸಿಪಿಗಳು ವಿವಿಧ ಠಾಣೆಯಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಿದ್ದು, ತಮ್ಮ ಕುಂದು ಕೊರತೆಗಳು ಹಾಗೂ ದೂರುಗಳನ್ನು ನೀಡಲು ಮನವಿ ಮಾಡಲಾಗಿದೆ.