ಬೆಂಗಳೂರು: ಇಡೀ ಪ್ರಪಂಚವನ್ನೇ ತನ್ನ ಕರಿಛಾಯೆಯಿಂದ ಆವರಿಸಿರುವ ಕೊರೊನಾ ರಾಜಧಾನಿ ಬೆಂಗಳೂರಿನಲ್ಲೂ ರಣಕೇಕೆ ಹಾಕ್ತಿದೆ. ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗ್ತಿದ್ದು ಅದನ್ನ ಹೆಡೆಮುರಿ ಕಟ್ಟುವುದು ಕಷ್ಟಸಾಧ್ಯವಾಗಿದೆ.
ಈ ನಡುವೆ ರಾಜಧಾನಿ ಬೆಂಗಳೂರು ದೇಶದಲ್ಲೇ ನಂಬರ್ 1 ಕೊರೊನಾ ಹಾಟ್ಸ್ಪಾಟ್ ಆಗಿ ಮಾರ್ಪಾಟಾಗಿದೆ. ಸೋಂಕಿತರ ಸಂಖ್ಯೆ ದಿನಕ್ಕೆ 5 ಸಾವಿರದ ಗಡಿ ದಾಟಿರುವ ದೇಶದ ಮೊದಲ ನಗರ ಎಂಬ ಅಪಖ್ಯಾತಿಗೆ ಬೆಂಗಳೂರು ಭಾಜನವಾಗಿದೆ. ಹೌದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.
ಕೊರೊನಾ ರಣಕೇಕೆಯಲ್ಲಿ ದೆಹಲಿ, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ಸಿಟಿಗಳನ್ನ ನಮ್ಮ ಬೆಂದಕಾಳೂರು ಹಿಂದಿಕ್ಕಿದೆ. ದೇಶದ ಬೇರೆ ಸಿಟಿಗಳಲ್ಲಿ ದಿನಕ್ಕೆ 2 ರಿಂದ 3 ಸಾವಿರದಷ್ಟು ಕೇಸ್ ಪತ್ತೆಯಾಗುತ್ತಿದ್ರೇ ನಮ್ಮ ಸಿಲಿಕಾನ್ ಸಿಟಿಯಲ್ಲಿ ಮಾತ್ರ ದಿನಕ್ಕೆ ಐದು ಸಾವಿರದಷ್ಟು ಕೊರೊನಾ ಕೇಸ್ ವರದಿಯಾಗ್ತಿದೆ.
ಈ ಹಿಂದೆ, ಮೂರು ಸಾವಿರದ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ 5 ಸಾವಿರಕ್ಕೆ ಏರಿಕೆಯಾಗಿದೆ. ಇನ್ನು ಮುಂಬರುವ ತಿಂಗಳಲ್ಲಿ ಚಳಿಗಾಲ ಇರುವುದರಿಂದ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ, ಬೆಂಗಳೂರಿಗರು ಎಚ್ಚರ ವಹಿಸದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಹೇಳಿದ್ದಾರೆ.