ಬೀದರ್: ಗತಕಾಲದ ನಾಣ್ಯ ಪ್ರಿಯ ಶಿಕ್ಷಕನ ಬಳಿಯಿದೆ ಅಗಣ್ಯ ನಾಣ್ಯ ಸಂಪತ್ತು..!

| Updated By: ಸಾಧು ಶ್ರೀನಾಥ್​

Updated on: Jun 23, 2020 | 11:29 AM

ಬೀದರ್: ಇತಿಹಾಸ ಎಂದರೆ ಇಂದಿನ ಮಕ್ಕಳಲ್ಲಿ ಅದೇನೋ ಒಂಥರ ಅಸಡ್ಡೆ. ಇದಕ್ಕೆ ಸರಿಯಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಇತಿಹಾಸವನ್ನ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿಸಿ ಪರೀಕ್ಷೆಯಲ್ಲಿ ಮಾರ್ಕ್ಸ್​ ಗಳಿಸಲು ಇರುವ ಮತ್ತೊಂದು ಸಬ್ಜೆಕ್ಟ್​ ಎಂಬ ಸ್ಥಿತಿಗೆ ತಂದುಬಿಟ್ಟಿದೆ. ಆದರೆ, ಇಲ್ಲೊಬ್ಬ ಶಿಕ್ಷಕ ಇತಿಹಾಸ ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಅದಕ್ಕೆ ಜೀವ ತುಂಬುವ ಪ್ರಯತ್ನವನ್ನ ಮಾಡ್ತಿದ್ದಾರೆ, ಅದು ತಾವು ಸಂಗ್ರಹಿಸಿರುವ ನೋಟು ಮತ್ತು ನಾಣ್ಯಗಳ ಮೂಲಕ. ಹೌದು, ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿರೋದು ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದವರಾದ ನವೀಲಕುಮಾರ್. […]

ಬೀದರ್: ಗತಕಾಲದ ನಾಣ್ಯ ಪ್ರಿಯ ಶಿಕ್ಷಕನ ಬಳಿಯಿದೆ ಅಗಣ್ಯ ನಾಣ್ಯ ಸಂಪತ್ತು..!
Follow us on

ಬೀದರ್: ಇತಿಹಾಸ ಎಂದರೆ ಇಂದಿನ ಮಕ್ಕಳಲ್ಲಿ ಅದೇನೋ ಒಂಥರ ಅಸಡ್ಡೆ. ಇದಕ್ಕೆ ಸರಿಯಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಇತಿಹಾಸವನ್ನ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿಸಿ ಪರೀಕ್ಷೆಯಲ್ಲಿ ಮಾರ್ಕ್ಸ್​ ಗಳಿಸಲು ಇರುವ ಮತ್ತೊಂದು ಸಬ್ಜೆಕ್ಟ್​ ಎಂಬ ಸ್ಥಿತಿಗೆ ತಂದುಬಿಟ್ಟಿದೆ.

ಆದರೆ, ಇಲ್ಲೊಬ್ಬ ಶಿಕ್ಷಕ ಇತಿಹಾಸ ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಅದಕ್ಕೆ ಜೀವ ತುಂಬುವ ಪ್ರಯತ್ನವನ್ನ ಮಾಡ್ತಿದ್ದಾರೆ, ಅದು ತಾವು ಸಂಗ್ರಹಿಸಿರುವ ನೋಟು ಮತ್ತು ನಾಣ್ಯಗಳ ಮೂಲಕ. ಹೌದು, ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿರೋದು ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದವರಾದ ನವೀಲಕುಮಾರ್.

ವೃತಿಯಲ್ಲಿ ಶಿಕ್ಷಕನಾದ್ರೂ ಈತ ಹವ್ಯಾಸಿ ನಾಣ್ಯಶಾಸ್ತ್ರಜ್ಞ
ಸದ್ಯ ಸಂತಪುರ ಅನುಭವ ಮಂಟಪದ ಗುರುಕುಲ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ನವೀಲಕುಮಾರ್ ಕಳೆದ 18 ವರ್ಷಗಳಿಂದ ಪುರಾತನ ಕಾಲದ ನೋಟುಗಳು ಮತ್ತು ನಾಣ್ಯಗಳನ್ನ ಹವ್ಯಾಸವಾಗಿ ಸಂಗ್ರಹ ಮಾಡಿಕೊಂಡು ಬಂದಿದ್ದಾರೆ. ಕರುನಾಡಿನ ಇತಿಹಾಸ ಪ್ರಸಿದ್ಧ ಚಾಲುಕ್ಯ, ಹೊಯ್ಸಳ ಸಾಮ್ರಾಜ್ಯಗಳು ಹಾಗೂ ಮೈಸೂರು ಸಂಸ್ಥಾನದಿಂದ ಹಿಡಿದು ಭಾರತದ ಉಪಖಂಡವನ್ನು ಆಳಿದ ಮೊಘಲರ ಮತ್ತು ಇತರೆ ರಾಜಮನೆತನಗಳು ಮುದ್ರಿಸಿದ ನಾಣ್ಯಗಳನ್ನು ಸಹ ಬಹಳ ಪ್ರಯಾಸಪಟ್ಟು ಸಂಗ್ರಹಿಸಿದ್ದಾರೆ.

ಗತಕಾಲದ ನಾಣ್ಯ ಮಾತ್ರವಲ್ಲದೆ ದೇಶ ವಿದೇಶದ ನಾಣ್ಯ ಮತ್ತು ನೋಟುಗಳು ಸಹ ಇವರ ಬಳಿಯಿದೆ. ಅಮೆರಿಕ, ಶ್ರೀಲಂಕಾ, ಮಲೇಷ್ಯಾ, ಆಸ್ಪ್ರೇಲಿಯಾ, ಜಪಾನ್‌ ಅಲ್ಲದೆ ಕೀನ್ಯಾ, ನೇಪಾಳ, ನೈಜೀರಿಯಾ, ಯೆಮನ್‌ ಹೀಗೆ ಜಗತ್ತಿನ ಹತ್ತು ಹಲವಾರು ದೇಶಗಳ ಚಾಲ್ತಿಯಲ್ಲಿರುವ ನೋಟುಗಳನ್ನು ಸಹ ಸಂಗ್ರಹಿಸಿದ್ದಾರೆ. ಇದಲ್ಲದೆ ಭಾರತದಲ್ಲಿದ್ದ ಬೆಳ್ಳಿ ನಾಣ್ಯಗಳು, ಅರ್ಧ ಆಣೆ, ಒಂದಾಣೆ, ಎರಡಾಣೆ ಮತ್ತು ಒಂದು ಪೈಸೆ, ಎರಡು ಪೈಸೆ, 10 ಪೈಸೆ ಎಂಬಂತೆ ನಾನಾ ನಮೂನೆಯ ನಾಣ್ಯಗಳನ್ನೂ ಹೊಂದಿದ್ದಾರೆ.

ನಾಣ್ಯಗಳ ಮುಖೇನ ಮಕ್ಕಳಿಗೆ ಇತಿಹಾಸದ ಪಾಠ..!
ಇಷ್ಟೆಲ್ಲಾ ಶ್ರಮವಹಿಸಿರುವ ನವೀಲಕುಮಾರ್ ತಾವು ಸಂಪಾದಿಸಿರುವ ಈ ಎಲ್ಲಾ ನೋಟು-ನಾಣ್ಯಗಳನ್ನ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಹಾಗೂ ಸಭೆ ಸಮಾರಂಭದಲ್ಲಿ ಪ್ರದರ್ಶಿಸುತ್ತಾರೆ. ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಇವುಗಳನ್ನು ತೋರಿಸಿ ಅವುಗಳ ಮೇಲಿರುವ ಚಿಹ್ನೆ ಹಾಗೂ ಬರಹಗಳ ಬಗ್ಗೆ ಮಾಹಿತಿ ಸಹ ನೀಡುತ್ತಾರೆ. ಇದರ ಮುಖೇನ ವಿದ್ಯಾರ್ಥಿ ಮತ್ತು ಜನಸಾಮಾನ್ಯರಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದ್ದಾರೆ.

ಬಾಲ್ಯದಲ್ಲೇ ಹುಟ್ಟಿದ ವ್ಯಾಮೋಹ, ಸ್ವಂತ ಖರ್ಚಿನಲ್ಲೇ ಸಂಗ್ರಹ..!
ಅಂದ ಹಾಗೆ ನವೀಲಕುಮಾರ್​ರಿಗೆ ನ್ಯೂಮಿಸ್ಮ್ಯಾಟಿಕ್ಸ್​ (Numismatics) ಅಥವಾ ನಾಣ್ಯ ಸಂಗ್ರಹಣೆ ಮಾಡೋ ಹವ್ಯಾಸ ಬಾಲ್ಯದಿಂದಲೇ ಇತ್ತು. ಇದಕ್ಕೆ ತಮ್ಮ ಸ್ನೇಹಿತರು ಸಹ ಬೆಂಬಲ ನೀಡಿದ್ದಾರೆಂದು ಶಿಕ್ಷಕ ಹೇಳುತ್ತ್ತಾರೆ. ತಮ್ಮ ಸ್ವಂತ ಖರ್ಚಿನಲ್ಲೇ ಜಿಲ್ಲೆಯ ಹಲವು ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರದರ್ಶನ ನಡೆಸುವ ಇವರು ನೋಟು ಮತ್ತು ನಾಣ್ಯಗಳ ಸುತ್ತ ಹೆಣೆದಿರುವ ಐತಿಹಾಸಿಕ ಮಹತ್ವದ ಅರಿವನ್ನು ಬಿತ್ತರಿಸುತ್ತಾರೆ.

ಒಟ್ನಲ್ಲಿ, ಅತ್ಯಮೂಲ್ಯವಾದ ಪುರಾತನ ನೋಟು ಮತ್ತು ನಾಣ್ಯಗಳನ್ನ ಸಂಗ್ರಹಿಸಿವುದರ ಜೊತೆಗೆ ಅದರಲ್ಲಿ ಅಡಗಿರುವ ಅಪಾರ ಜ್ಞಾನ ಸಂಪತ್ತನ್ನು ಗಳಿಸಿರುವ ನವೀಲಕುಮಾರ್ ನಿಜಕ್ಕೂ ‘ಗತಕಾಲದ’ ಕುಬೇರ. ಅದಕ್ಕಿಂತ ತನ್ನ ಜ್ಞಾನ ಸಂಪತ್ತನ್ನು ಮುಂದಿನ ಯುವಪೀಳಿಗೆಗೆ ಧಾರೆ ಎರೆಯಲು ಹೊರಟಿರುವ ಇವರ ಕೊಡುಗೆ ಅಮೂಲ್ಯ  -ಸುರೇಶ್ ನಾಯಕ್

 

Published On - 11:26 am, Tue, 23 June 20