ಬೀದರ್: ಬಡವರಿಗೆ ಅನೂಕೂಲವಾಗಲಿ ಅನ್ನೋ ಉದ್ದೇಶದಿಂದ ಸರ್ಕಾರ ಬೀದರ್ ಪಟ್ಟಣದ ಸಮೀಪವಿರುವ ಗೊರನಳ್ಳಿ ಗ್ರಾಮದ ಹೊರಗೆ ನೂರಾರು ಮನೆಗಳನ್ನ ಕಟ್ಟಿಸಿಕೊಟ್ಟಿದೆ. ಆದರೆ, ಇದುವರೆಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿಲ್ಲ. ಪರಿಣಾಮ ಇಲ್ಲಿನ ಜನರು ದಿನನಿತ್ಯ ನರಕ ಅನುಭವಿಸುವಂತಾಗಿದೆ.
ಅಗತ್ಯ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆಯಿಲ್ಲದ ಕಾರಣ ಇಲ್ಲಿನ ಜನರು ಕಂಗಾಲಾಗಿದ್ದಾರೆ. ರಾತ್ರಿಯಾದ್ರೆ ವಿದ್ಯುತ್ ಇಲ್ಲದೇ ಕತ್ತಲಲ್ಲಿ ಸಮಯ ಕಳೆಯಬೇಕು. ಕುಡಿಯುವ ನೀರಿಗಾಗಿ ದಿನಾಲೂ ಕಿಲೋಮೀಟರ್ ಗಟ್ಟಲೇ ನಡೆದು ಹೋಗಬೇಕು. ಇದು ಬೀದರ್ ಪಟ್ಟಣಕ್ಕೆ ಸಮೀಪವೇ ಇರುವ ಗೊರನಹಳ್ಳಿ ಜನರ ನಿತ್ಯದ ಗೋಳು.
ಬಡವರಿಗೆ ಆಸರೆಯಾಗಲಿ ಅಂತಾನೇ ಸರಕಾರ ಇಲ್ಲಿ 10 ವರ್ಷಗಳ ಹಿಂದೆ ನೂರಾರು ಮನೆಗಳನ್ನ ಕಟ್ಟಿಸಿತ್ತು. ಆದರೇ ಫಲಾನುಭವಿಗಳಿಗೆ ಮನೆಗಳನ್ನು ಅಧಿಕೃತವಾಗಿ ಹಸ್ತಾಂತರ ಮಾಡಲಿಲ್ಲ.
ಕಾದು ಕಾದು ಸುಸ್ತಾದ ಜನರು, ಐದು ವರ್ಷದ ಹಿಂದೆ ಪಾಳು ಬಿದ್ದ ಮನೆಗಳಲ್ಲಿಯೇ ಬಂದು ವಾಸ ಮಾಡಲು ಆರಂಭಿಸಿದರು. ಜಿಲ್ಲಾಡಳಿತ ಕೂಡಾ ವಾಸ ಮಾಡುತ್ತಿರುವವರ ಪೈಕಿ ಸುಮಾರು 75 ಕುಟುಂಬಗಳಿಗೆ ಮನೆಯ ಹಕ್ಕು ಪತ್ರ ಕೂಡಾ ನೀಡಿದ್ದಾರೆ.
ಎಲ್ಲಾ ಇದೆ. ಆದ್ರೆ ಅದೇ ಇಲ್ಲ!
ಇಲ್ಲಿರುವ ಸುಮಾರು 200 ಮನೆಗಳಿಗೆ ಸಂಪರ್ಕ ಕಲ್ಪಿಸಲು ಉತ್ತಮ ರಸ್ತೆಯಿದೆ, ವಿದ್ಯುತ್ ಸಂಪರ್ಕಕ್ಕಾಗಿ ಕಂಬಗಳನ್ನ ನೆಟ್ಟಿದ್ದಾರೆ, ಕುಡಿಯುವ ನೀರಿಗಾಗಿ ಟ್ಯಾಂಕ್‌ಗಳನ್ನ ಕಟ್ಟಲಾಗಿದೆ.
ಆದ್ರೆ ನೀರು ಮತ್ತು ಕರೆಂಟ್ ಮಾತ್ರ ಮರೀಚಿಕೆ. ವಿದ್ಯುತ್ ಇಲ್ಲದೇ ಮಕ್ಕಳ ವಿದ್ಯಾಭಾಸಕ್ಕೆ ತೊಂದರೆಯಾದ್ರೆ, ಕುಡಿಯುವ ನೀರಿಗಾಗಿ ಜನರು ಕೆಲಸಕ್ಕೆ ಹೋಗದೇ ನೀರು ತರುವುದರಲ್ಲೇ ಸಮಯ ಹಿಡಿಯುತ್ತಿದೆ. ಈ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದ್ರೂ ಏನೂ ಪ್ರಯೋಜನವಾಗಿಲ್ಲ. ಪ್ರತಿಸಾರಿ ಚುನಾವಣೆ ಬಂದಾಗ ಓಟು ಕೇಳಲು ಬರುವ ಜನನಾಯಕರು ಕೇವಲ ಭರವಸೆ ಕೊಟ್ಟರೇ ಹೊರತು ಕೊಟ್ಟ ಮಾತನ್ನ ಈಡೇರಿಸಿಲ್ಲ. ಹೀಗಾಗಿ ಇಲ್ಲಿನ ಜನರ ಬದುಕು ನಿತ್ಯ ನರಕದಂತಾಗಿದೆ -ಸುರೇಶ್ ನಾಯಕ್
Published On - 2:41 pm, Fri, 12 June 20