ದಾವಣಗೆರೆ: ಮಹಾಮಾರಿ ಕೊರೊನಾದ ಎರಡನೇ ಅಲೆ ಭೀತಿ ದಿನೇ ದಿನೇ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಕಂಟಕ ಎದುರಾಗಿದ್ದು ಕೋಳಿ ಜ್ವರದ ಶಂಕೆ ಹುಟ್ಟುಕೊಂಡಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂನಲ್ಲಿ ಕೋಳಿಗಳ ನಿಗೂಢ ಸಾವಾಗಿದೆ. ಕಳೆದ 8 ದಿನಗಳಲ್ಲಿ 7ರಿಂದ 8 ಸಾವಿರ ಕೋಳಿಗಳು ಮೃತಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಕೋಳಿ ಜ್ವರದ ಭೀತಿ ಹುಟ್ಟುಕೊಂಡಿದೆ. ಆದ್ರೆ ಸತ್ತ ಕೋಳಿಗಳನ್ನು ಪ್ಲ್ಯಾಸ್ಟಿಕ್ ಚೀಲಗಳಲ್ಲಿ ವಿಲೇವಾರಿ ಮಾಡಿ ಕೊಂಡಜ್ಜಿ ಗುಡ್ಡಕ್ಕೆ ರವಾನಿಸಲಾಗುತ್ತಿದ್ದು ಪೌಲ್ಟ್ರಿ ಫಾರಂ ಮಾಲೀಕರಿಂದ ಪ್ರಕರಣ ಮುಚ್ಚಿಹಾಕುವ ಯತ್ನ? ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಪೌಲ್ಟ್ರಿ ಫಾರಂನಲ್ಲಿ ಕಳೆದ ಒಂದು ವಾರದಿಂದ ಸುಮಾರು 7ರಿಂದ 8 ಸಾವಿರ ಕೋಳಿಗಳು ಸತ್ತಿವೆ. ಆದ್ರೆ ಪೌಲ್ಟ್ರಿ ಫಾರಂ ಮಾಲೀಕ ಕೋಳಿ ಸಾವಿನ ಬಗ್ಗೆ ಪಶು ಆರೋಗ್ಯ ಇಲಾಖೆಗೆ ತಿಳಿಸದೆ ರಾತ್ರೋರಾತ್ರಿ ಎಲ್ಲೆಂದರಲ್ಲಿ ಸತ್ತ ಕೋಳಿಗಳ ವಿಲೇವಾರಿ ಮಾಡಿಸುತ್ತಿದ್ದಾನೆ. ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಸತ್ತ ಕೋಳಿಗಳನ್ನು ವಿಲೇವಾರಿ ಮಾಡಿಸುತ್ತಿದ್ದಾನೆ. ತನ್ನ ಕೆಲಸಕ್ಕೆ ಇದರಿಂದ ಹೊಡೆತ ಬೀಳಬಹುದು ಎಂದು ರಾತ್ರೋರಾತ್ರಿ ಸತ್ತ ಕೋಳಿಗಳನ್ನು ವಿಲೇವಾರಿ ಮಾಡಿಸಿ ಈ ಬಗ್ಗೆ ಸಾರ್ವಜನಿಕರಿಗೆ ತಿಳಿಯದಂತೆ ಎಚ್ಚರ ವಹಿಸಿದ್ದಾನೆ. ಜೊತೆಗೆ ಕೆಲ ಪೌಲ್ಟ್ರಿ ಫಾರಂ ಮಾಲೀಕರು ಹಕ್ಕಿಜ್ವರದ ಶಂಕೆಯ ಮಾಹಿತಿಯನ್ನು ಮುಚ್ಚಿಡುತ್ತಿದ್ದಾರೆ.
ಹಕ್ಕಿಜ್ವರದಿಂದ ಕೋಳಿಗಳು ಮೃತಪಟ್ಟಿರಬಹುದೆಂಬ ಆತಂಕದಲ್ಲೇ ತಮ್ಮ ವ್ಯವಹಾರಕ್ಕೆ ಹೊಡೆತ ಬೀಳಬಾರದೆಂದು ಇಂತಹ ಕೃತ್ಯ ನಡೆಸುತ್ತಿದ್ದಾರೆ. ಈಗಾಗಲೇ ಪೌಲ್ಟ್ರಿ ಫಾರಂ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 7 -8 ಸಾವಿರ ಕೋಳಿ ಸತ್ತರು ಜಿಲ್ಲಾಡಳಿತಕ್ಕೆ ಈ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿಲ್ಲ. ಸತ್ತ ಕೋಳಿಗಳನ್ನು ಲ್ಯಾಬ್ಗೆ ಕಳಿಸುವ ಕಾರ್ಯ ನಡೆದಿಲ್ಲ. ಆದಷ್ಟು ಬೇಗ ಅಧಿಕಾರಿಗಳು ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಹೊಣೆಯಾಗಬೇಕಾಗುತ್ತೆ. ಹಾಗೂ ಪೌಲ್ಟ್ರಿ ಫಾರಂ ಮಾಲೀಕರು ತಮ್ಮ ಸ್ವಾರ್ಥ ಬಿಟ್ಟು ಜನರ ಬಗ್ಗೆ ಚಿಂತಿಸಬೇಕು. ವ್ಯವಹಾರಕ್ಕೆ ಹೊಡೆತಬೀಳುತ್ತೆ ಎಂದು ಹೆದರಿ ಕೋಳಿ ಸಾವುಗಳನ್ನು ಮುಚ್ಚಿಡುವ ಬದಲು ಸಾವಿಗೆ ಕಾರಣ ತಿಳಿದು ಶಂಕೆಗೆ ಅಂತ್ಯ ಹಾಡಬೇಕು. ತಮ್ಮ ಸ್ವಾರ್ಥಕ್ಕಾಗಿ ಜನರ ಜೀವನದ ಜೊತೆ ಆಟವಾಡುವುದು ತಪ್ಪು.
ಇದನ್ನೂ ಓದಿ: ಸಾರ್ವಜನಿಕರಲ್ಲಿ ಹಕ್ಕಿಜ್ವರದ ಬಗ್ಗೆ ಭಯ ಬೇಡ: ಜಿಲ್ಲಾಧಿಕಾರಿ ನಿತೇಶ ಪಾಟೀಲ