ರಾಮನಗರ: ನನ್ನ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿವೆ. ಸೂಪರ್ ಸಿಎಂ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದರೆ, ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನಷ್ಟೇ ಎಂದು ಜಿಲ್ಲೆಯ ಮಾಗಡಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ನನ್ನ ತಂದೆ ವಿರುದ್ಧ 25-30 ಕ್ರಿಮಿನಲ್ ಕೇಸ್ಗಳಿದ್ದವು. ಹಂತ ಹಂತವಾಗಿ ಹೋರಾಟ ಮಾಡಿ ಕಡಿಮೆ ಮಾಡಿದ್ದೇನೆ. ಹೋರಾಟ ಮಾಡಿ ಪ್ರಕರಣಗಳನ್ನು ಕಡಿಮೆ ಮಾಡಿದ್ದೇನೆ. ನನ್ನ ತಂದೆ ವಿರುದ್ಧ ಹಲವರು ಷಡ್ಯಂತ್ರವನ್ನು ಮಾಡಿದ್ದರು. ಹಾಗಾಗಿ, ನಾನು ತಂದೆ ಪರ ನಿಂತು ಕೆಲಸ ಮಾಡಿದ್ದೇನಷ್ಟೇ. ನನ್ನ ಜವಾಬ್ದಾರಿ ಏನು ಎಂಬ ಅರಿವು ನನಗಿದೆ ಎಂದು ವಿಜಯೇಂದ್ರ ಹೇಳಿದರು.
ಸಿದ್ದಲಿಂಗೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪ ಅವರು 4 ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಶ್ರೀಗಳ ಆಶೀರ್ವಾದ ಮತ್ತು ರಾಜ್ಯದ ಜನರ ಆಶಯದಂತೆ ಮುಖ್ಯಮಂತ್ರಿಯಾಗಿದ್ದಾರೆ. ಅವರು ರೈತರ ಹಾಗೂ ಬಡವರ ಪರ ಧ್ವನಿಯಾಗಿ ಹೋರಾಟ ಮಾಡಿದ್ದಾರೆ. ಆದರೆ, ಅವರು ಎಂದೂ ವೀರಶೈವ ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ. ರಾಜ್ಯದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಹಲವು ಜನಪರ ಯೋಜನೆಗಳನ್ನ ಜಾರಿ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಮಾಗಡಿ ಕ್ಷೇತ್ರ ಹಲವು ಮಹಾನ್ ನಾಯಕರಿಗೆ ಜನ್ಮ ನೀಡಿದೆ. 90 ಕೋಟಿ ವೆಚ್ಚದಲ್ಲಿ ವೀರಪುರ ಗ್ರಾಮದಲ್ಲಿ 112 ಅಡಿ ಎತ್ತರದ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ವಿಜಯೇಂದ್ರ ಹೇಳಿದರು.
Published On - 5:58 pm, Sun, 7 February 21