ಕೊಪ್ಪಳ: ಬಸನಗೌಡ ಪಾಟೀಲ್ ಯತ್ನಾಳ್ಗೆ ನನ್ನ ಮೇಲೆ ಬಹಳ ಪ್ರೀತಿ ಇದೆ. ಅವರು ಬಹಳ ಹಿರಿಯರಿದ್ದಾರೆ, ಅವರ ಬಗ್ಗೆ ನಾನು ಮಾತಾಡಲ್ಲ ಎಂದು ಜಿಲ್ಲೆಯ ಹುಲಗಿಯಲ್ಲಿ BJP ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಜೊತೆಗೆ, ವಿಜಯೇಂದ್ರ ಕುಟುಂಬದ ಬಗ್ಗೆ ವರಿಷ್ಠರಿಗೆ ಯತ್ನಾಳ್ ಪತ್ರ ಬರೆದಿರುವ ಬಗ್ಗೆ ತುಂಬಾ ಸಂತೋಷ, ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ, ಮೀಸಲಾತಿಗೆ ವಿವಿಧ ಸಮುದಾಯಗಳ ಹೋರಾಟ ವಿಚಾರವಾಗಿ ಸಿಎಂ ಮತ್ತು ಬಿಜೆಪಿ ನಾಯಕರು ಹೋರಾಟವನ್ನ ವಿರೋಧಿಸಿಲ್ಲ. ಕಾನೂನಾತ್ಮಕವಾಗಿ ಏನು ಪರಿಹಾರ ಕೊಡಬೇಕು ಕೊಡ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಕೊಡುತ್ತಾರೆ ಎಂದು ವಿಜಯೇಂದ್ರ ಹೇಳಿದರು.
‘ವಿದ್ಯಾವಂತರಾಗಿ ಮಾತನಾಡಿದರೆ ಹೇಗೆ?’
ರಾಮಮಂದಿರದ ಬಗ್ಗೆ ಸಿದ್ದರಾಮಯ್ಯ ಮತ್ತು H.D.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಅವಿದ್ಯಾವಂತರು ಮಾತನಾಡಿದ್ದರೆ ಉತ್ತರ ಕೊಡಬಹುದಿತ್ತು. ವಿದ್ಯಾವಂತರಾಗಿ ಮಾತನಾಡಿದರೆ ಹೇಗೆ? ಎಂದು ವಿಜಯೇಂದ್ರ ಪ್ರಶ್ನಿಸಿದರು. ಇಂಥ ವಿಷಯದಲ್ಲಿ ರಾಜಕೀಯವನ್ನು ಮಾಡಿ ಮತದಾರರನ್ನು ಅಡ್ಡದಾರಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಈ ಗತಿ ಬಂದಿದೆ ಎಂದು ವಿಜಯೇಂದ್ರ ಹೇಳಿದರು.
ಇದಕ್ಕೂ ಮುನ್ನ, ಜಿಲ್ಲೆಯ ಹುಲಗಿಯಲ್ಲಿರುವ ಇತಿಹಾಸ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಭೇಟಿಕೊಟ್ಟು ದೇವರ ದರ್ಶನ ಪಡೆದರು. ಹುಲಿಗೆಮ್ಮ ದೇವಿಗೆ ಬಿ.ವೈ.ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Accident ಪೆಟ್ರೋಲ್ ಹಾಕಿಸಿ ತೆರಳುವಾಗ.. ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಗೆ KSRTC ಬಸ್ ಡಿಕ್ಕಿ